ADVERTISEMENT

ಭಾರಿ ಮಳೆ: ಜಮೀನು ಜಲಾವೃತ

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು: ಜನರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 3:18 IST
Last Updated 12 ಅಕ್ಟೋಬರ್ 2025, 3:18 IST
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಕಬ್ಬಿನ ಗದ್ದೆ ನೀರಿನಿಂದ ಜಲಾವೃತವಾಗಿರುವುದು
ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಕಬ್ಬಿನ ಗದ್ದೆ ನೀರಿನಿಂದ ಜಲಾವೃತವಾಗಿರುವುದು   

ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು, ತೇರಂಬಳ್ಳಿ, ಗೊಬ್ಬಳಿಪುರ ಗ್ರಾಮದ ನೂರಾರು ಎಕರೆ ಜಮೀನು ಮಳೆಯಿಂದ ಸಂಪೂರ್ಣ ಜಲಾವೃತವಾಗಿದೆ.

ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ 3 ಗ್ರಾಮಗಳಿಂದ 150ಕ್ಕೂ ಹೆಚ್ಚು ಎಕರೆ ಜಮೀನು ಸಂಪೂರ್ಣ ನೀರಿನಲ್ಲಿ ಮುಳುಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಳಂದೂರು ಗ್ರಾಮದ ಕೆಸ್ತೂರು, ಹೊನ್ನೂರು ಸೇರಿದಂತೆ ಅನೇಕ ಗ್ರಾಮಗಳ ಕೆರೆಗಳು ತುಂಬಿ ಕಬಿನಿ ನಾಲೆಯ ಮೂಲಕ ಈ ಮೂರು ಗ್ರಾಮಕ್ಕೆ ನೀರು ಬಂದು ಜಮೀನುಗಳು ಜಲಾವೃತವಾಗಿದೆ.

ಪ್ರತಿ ವರ್ಷ ಹೆಚ್ಚಾಗಿ ಮಳೆ ಬಂದರೆ ಈ ಗೋಳು ತಪ್ಪಿದ್ದಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಕಬಿನಿ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ಸಹ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಈಗಾಗಲೇ ನಮಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ದೂರವಾಣಿಯ ಮೂಲಕ ಕರೆ ಮಾಡಿದರು ಯಾರು ಸಹ ಕರೆ ಸ್ವೀಕರಿಸುತ್ತಿಲ್ಲ.

ಎರಡನೇ ಶನಿವಾರ ರಜೆ ಇರುವುದರಿಂದ ಅಧಿಕಾರಿಗಳು ನಮ್ಮ ಕರೆಗೆ ಸ್ಪಂದನೆ ನೀಡುತ್ತಿಲ್ಲ. ಈಗಾಗಲೇ ಭತ್ತ, ಜೋಳ, ಕಬ್ಬು, ಸೊಪ್ಪು, ತರಕಾರಿ ಸೇರಿದಂತೆ ಅನೇಕ ಬೆಳೆ ಸಂಪೂರ್ಣ ನಷ್ಟ ಉಂಟಾಗಿದೆ. ಇದಕ್ಕೆ ಪರಿಹಾರ ಯಾರು ಕೊಡುತ್ತಾರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮುಳ್ಳೂರು ಗ್ರಾಮದ ರೈತ ಮುಖಂಡ ಬಸವರಾಜು, ಮಹದೇವಸ್ವಾಮಿ, ನಟರಾಜು ಜಯರಾಜು ಸೇರಿದಂತೆ ಅನೇಕರು ಹೇಳಿದರು.

ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾಗುತ್ತಿದೆ. ಕೆರೆಗಳು ಹಾಗೂ ನಾಲೆ ಹೂಳು ತೆಗೆಸಿದರೆ ಈ ತೊಂದರೆಗಳು ಆಗುವುದಿಲ್ಲ. ಹಾಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರೈತ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಭತ್ತದ ಜಮೀನು ನೀರಿನಿಂದ ಮುಳುಗಡೆಯಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT