ADVERTISEMENT

ಚಾಮರಾಜನಗರ: ಎಂಬಿಬಿಎಸ್‌ ಕೋರ್ಸ್‌ ಪ್ರವೇಶಕ್ಕೆ ಅನುಮತಿ ನೀಡಲು ಹೈಕೋರ್ಟ್‌ ಸೂಚನೆ

ಎನ್‌ಎಂಸಿ ನಿರ್ಧಾರದ ವಿರುದ್ಧ‌ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದ ವೈದ್ಯಕೀಯ ಕಾಲೇಜು: ದೂರವಾದ ಆತಂಕ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 16:39 IST
Last Updated 19 ನವೆಂಬರ್ 2020, 16:39 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ   

ಚಾಮರಾಜನಗರ: 2020–21ನೇ ಸಾಲಿನ ವೈದ್ಯಕೀಯ (ಎಂಬಿಬಿಎಸ್‌) ಕೋರ್ಸ್‌ನ ಪ್ರವೇಶಾತಿಗಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅನುಮತಿ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್ಎಂಸಿ) ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಎಲ್ಲ ಮಾನದಂಡಗಳನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಎನ್‌ಎಂಸಿಯು ಈ ಬಾರಿ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಈ ಕಾರಣದಿಂದ, ವೈದ್ಯಕೀಯ ಸೀಟುಗಳು ಲಭ್ಯವಿದ್ದ ಕಾಲೇಜುಗಳ ಪಟ್ಟಿಯಲ್ಲಿ ಇಲ್ಲಿನ ಕಾಲೇಜಿನ ಹೆಸರು ಇರಲಿಲ್ಲ. ಇದರಿಂದಾಗಿ ಪೋಷಕರು ಆತಂಕಗೊಂಡಿದ್ದರು.

ಆಯೋಗದ ತೀರ್ಮಾನದ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿತ್ತು.

ADVERTISEMENT

‘ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದಕುಮಾರ್‌ ಹಾಗೂ ಶಿವಶಂಕರ್‌ ಅವರಿದ್ದ ದ್ವಿಸದಸ್ಯ ‌ಪೀಠ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಂತೆ ಸೂಚಿಸಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

‘ತಾಂತ್ರಿಕ ಕಾರಣದಿಂದ ಈ ರೀತಿ ಆಗಿತ್ತು. ನಾವು ಸಲ್ಲಿಸಿರುವ ದಾಖಲೆಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆವು. ಆದೇಶ ನಮ್ಮ ಪರವಾಗಿ ಆಗಿದೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನಿಡಬೇಕು ಎಂದು ಕೋರ್ಟ್‌ ಹೇಳಿದೆ. ಆದೇಶದ ಪ್ರತಿ ಶುಕ್ರವಾರ ಸಿಗಲಿದೆ’ ಎಂದುವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಹಾಗೂ ನಿರ್ದೇಶಕ ಡಾ.ಸಂಜೀವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ಕೋರ್ಸ್‌ ಪ್ರವೇಶಾತಿಗಾಗಿ ಅನುಮತಿ ಸಿಕ್ಕಿದೆ. ಅಡ್ವೊಕೇಟ್‌ ಜನರಲ್‌ ಅವರೇ ಕರೆ ಮಾಡಿ ತಿಳಿಸಿದ್ದಾರೆ. ಶುಕ್ರವಾರ ಸೀಟ್‌ ಮ್ಯಾಟ್ರಿಕ್ಸ್‌ನಲ್ಲಿ ಸೀಟಿನ ವಿವರಗಳು ಇರಲಿವೆ’ ಎಂದುಜಿಲ್ಲಾ ಉಸ್ತುವಾರಿ ಸಚಿವಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದರು.

ಇದೇ ವಿಚಾರವಾಗಿ, ಗುರುವಾರ ಬೆಳಿಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದ ಎಸ್‌.ಸುರೇಶ್‌ಕುಮಾರ್ ಅವರು‌, ‘ಎನ್‌ಎಂಸಿ ಮಾಡಿರುವ ಅಚಾತುರ್ಯದಿಂದ ಈ ರೀತಿ ಆಗಿದೆ. ನಾವು ಎಲ್ಲ ದಾಖಲೆ ಸಲ್ಲಿಸಿದ್ದೆವು. ಕೋರ್ಸ್‌ ಪ್ರವೇಶಕ್ಕೆ ನಮಗೂ ಅವಕಾಶ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದೇವೆ.ಈ ವಿಚಾರವಾಗಿ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಮಾತನಾಡಿದ್ದೇನೆ. ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೂ ಸಂಪರ್ಕಿಸಿದ್ದೇನೆ. ಕೋರ್ಟ್‌ಗೆ ಎಲ್ಲ ದಾಖಲೆಗಳನ್ನೂ ಸಲ್ಲಿಸಿದ್ದೇವೆ. ಕೋರ್ಸ್‌ ಪ್ರವೇಶಾತಿಗಾಗಿ ಅನುಮತಿ ಕೊಡಿಸುವ ವಿಶ್ವಾಸ ಇದೆ. ಪೋಷಕರು ಆತಂಕ ಪಡಬೇಕಿಲ್ಲ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.