ಗುಂಡ್ಲುಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಕರ್ನಾಟಕ ರಾಜ್ಯ ರೈತ ಸಂಘಟನೆ ಪದಾಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲ್ಲೂಕು ಕಚೇರಿ ಮುಂದೆ ಜಮಾವಣೆಗೊಂಡು ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಮಾತನಾಡಿ, ‘ತಾಲ್ಲೂಕಿನಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಿದೆ. ಕಾಡಂಚಲ್ಲದೇ ಎಲ್ಲ ಕಡೆಗಳಲ್ಲೂ ಹುಲಿ, ಚಿರತೆ, ಕರಡಿ, ಕಾಡಾನೆ ಹಾವಳಿ ಮಿತಿ ಮೀರಿದೆ. ಉತ್ಪಾದನೆ ವೆಚ್ಚ ದುಬಾರಿಯಾಗಿರುವ ಜತೆಗೆ ಯೋಗ್ಯ ಬೆಲೆ ಸಿಗದೇ ಪರದಾಡುತ್ತಿರುವ ನಮಗೆ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆ ನಷ್ಟದ ಮೇಲೆ ಬರೆ ಎಳೆದಂತಾಗಿದೆ. ನಾವಿರುವಲ್ಲಿಗೆ ವನ್ಯಪ್ರಾಣಿಗಳು ಬಂದರೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯವರು ಇದ್ದೇನು ಪ್ರಯೋಜನ’ ಎಂದು ಪ್ರಶ್ನಿಸಿದರು.
ರೈತ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಉಪಾಧ್ಯಕ್ಷ ಹಾಲಹಳ್ಳಿ ಮಹೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕಂದೇಗಾಲಹೊಸಹಳ್ಳಿ ಮಹೇಶ್, ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಹಿರೀಕಾಟಿ ಚಿಕ್ಕಣ್ಣ, ಮುಖಂಡರಾದ ಕಬ್ಬಹಳ್ಳಿ ಪ್ರಕಾಶ್, ಬೆಟ್ಟದಮಾದಹಳ್ಳಿ ಲೋಕೇಶ್, ಮೂರ್ತಿಬುದ್ಧಿ, ಕೆ.ಜಿ.ಮಲ್ಲೇಶ್, ಕಂದೇಗಾಲ ವೃಷಭೇಂದ್ರ, ಮಾದಪ್ಪ, ತೊಂಡವಾಡಿ ಸುರೇಶ, ಪುಟ್ಟಸ್ವಾಮಿ, ಬೆಟ್ಟಹಳ್ಳಿಗುರು, ಹೊಸಹುಂಡಿ ಸುರೇಶ್, ಪ್ರಭು ಸೇರಿದಂತೆ ಗ್ರಾಮ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.