ADVERTISEMENT

ಚಾಮರಾಜನಗರ | ಬಿಳಿಗಿರಿ ಕಾನನದಲ್ಲಿ ‘ಹಿಮಾಲಯ ದರ್ಶನ’

ಶುದ್ಧ ಗಾಳಿ ಪೂರೈಸುವ ತಾಣ ಎಂಬ ಹೆಗ್ಗಳಿಕೆ ಪಡೆದ ಚಾಮರಾಜನಗರ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:38 IST
Last Updated 11 ಡಿಸೆಂಬರ್ 2025, 2:38 IST
ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥನ ಶಿಖರ ಹಿಮಹೊದ್ದು ನಿಂತಿರುವ ದೃಶ್ಯ
ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥನ ಶಿಖರ ಹಿಮಹೊದ್ದು ನಿಂತಿರುವ ದೃಶ್ಯ   

ಯಳಂದೂರು: ಹಿಂಗಾರು ಋತುವಿನ ಕೊನೆಯ ದಿನಗಳಲ್ಲಿ ಸುರಿಯುತ್ತಿರುವ ಮಂಜಿನ ಹನಿಗಳು ಗಿರಿ ಶಿಖರಗಳಲ್ಲಿ ಹಸಿರು ನಳನಳಿಸುವಂತೆ ಮಾಡಿವೆ. ಅಲ್ಲಲ್ಲಿ ತೊರೆಗಳು ಹುಟ್ಟಿದ್ದು, ವನ್ಯ ಜೀವಿಗಳಿಗೆ ಆಹಾರ ಮತ್ತು ಜೀವಜಲದ ಕೊರತೆ ನೀಗಿದೆ.

ಇದೇ ವೇಳೆ ನೇಸರನ ಬಿಸಿಲಿನ ತಾಪ ಕುಸಿದು ಕುಳಿರ್ಗಾಳಿ ಬೀಸುತ್ತಿದ್ದು, ಗಿರಿ ಶಿಖರಗಳನ್ನು ಅಲಂಕರಿಸಿರುವ ಮಂಜು ಆಕಾಶದಲ್ಲಿ ಶ್ವೇತವರ್ಣದ ಚಿತ್ತಾರ ಮೂಡಿಸಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ.

ಡಿಸೆಂಬರ್ ಮಾಸದ ಹವಾಮಾನ ಹಿತಕಾರಿಯಾಗಿದ್ದು ಕಾಡು, ಮೇಡು ಮೈದಾನಗಳಲ್ಲಿ ಹೂ, ಹಸಿರು ಪಲ್ಲವಿಸುತ್ತಿದೆ. ಹಲವು ನಮೂನೆಯ ನಾಡು–ಕಾಡು, ಕಾನು–ಕಾಡು, ಮಳೆ–ಕಾಡು, ತೊರೆ–ಕಾಡು ಹಾಗೂ ಬೋಲಿ ಹುಲ್ಲುಗಾವಲು ಜೀವತಳೆದಿದ್ದು, ವನ್ಯ ಜೀವಿಗಳ ಆಹಾರದ ಕೊರತೆ ನೀಗಿದೆ. ಜೊತೆಗೆ ಕಾಡ್ಗಿಚ್ಚಿನ ಪ್ರಮಾಣವೂ ತಗ್ಗಿದೆ. ಮುಂದಿನ ಮೂರು ತಿಂಗಳು ಹಸಿರ ರಾಶಿಯನ್ನು ಕಣ್ತುಂಬಿಕೊಳ್ಳಬಹುದು.

ADVERTISEMENT

‘ಡಿಸೆಂಬರ್‌ನಲ್ಲಿ ಬೆಜ್ಜೆ, ಮತ್ತಿ, ನೆಲ್ಲಿ, ಬೆಂಡೆ, ಹೊನ್ನೆ, ಕೆಂಡೆ, ತೇಗ, ಜಾಲ, ಕಂಚುವಾಳ, ಕಕ್ಕೆ, ಬೈಸೆ ವೃಕ್ಷಗಳು ಜೇನು, ಪ್ರಾಣಿಗಳಿಗೆ ಆಹಾರ ಮತ್ತು ಮನುಕುಲಕ್ಕೆ ಅಗತ್ಯ ಫಸಲು ನೀಡುತ್ತವೆ. ಆದರೆ, ಕುಮಾವು (ದಾಲ್ಚಿನ್ನಿ) ಹಾಗೂ ಕಾಂಧೂಪ ಸಸ್ಯಗಳು ಕಡಿಮೆ ಯಾಗುತ್ತಿರುವುದು ಬೇಸರದ ವಿಚಾರ’ ಎನ್ನುತ್ತಾರೆ ಬೆಟ್ಟದ ಏಟ್ರೀ ಸಂಶೋಧಕ ಮಾದೇಗೌಡ. 

‘ತಾಲ್ಲೂಕಿನಲ್ಲಿ ಮಂಜು ಮತ್ತು ಮೋಡ ಕವಿದಿದ್ದು ಬಿಳಿಗಿರಿ ರಂಗನಾಥ ಬೆಟ್ಟದ ಪರಿಸರ ರಮ್ಯ ಲೋಕವನ್ನೇ ಸೃಷ್ಟಿಸಿದೆ. ಗಿಡ ಮರಗಳನ್ನು ಮಂಜಿನ ಹೊದಿಕೆ ಅಪ್ಪಿದರೆ, ಚಲಿಸುವ ಮೋಡಗಳು ಬೆಟ್ಟಗುಡ್ಡಗಳಿಗೆ ಮಾಲೆ ಹಾಕಿದಂತೆ ಕಾಣುತ್ತಿವೆ. ಬಹು ಸಮಯದವರೆಗೂ ಮಂಜಿನ ದಟ್ಟಣೆ ಕಾಣುತ್ತಿದ್ದು ರಸ್ತೆ ಹಾಗೂ ಕಾಡಿನ ಹಾದಿಯೇ ಕಾಣದಷ್ಟು ಆವರಿಸಿಕೊಂಡಿದೆ. ವಾಹನ ಸವಾರರು ಹಾಗೂ ಬಸ್ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು’ ಎನ್ನುತ್ತಾರೆ ಚಾಲಕ ನಂಜಪ್ಪ.

ಸಸ್ಯ ನಮೂನೆಗಳ ಪ್ರಮಾಣ:

ತಾಲ್ಲೂಕಿನಲ್ಲಿ ಶೋಲಾ ಶೇ 0.8, ಸದಾ ಹಸಿರು ತುಂಬಿರುವ ಪ್ರಮಾಣ ಶೇ 6.5, ಹುಲ್ಲು ಕಾಡು ಶೇ 3.4, ಕುರುಚಲು ಶೇ 28, ಒಣ ಉದುರೆಲೆ ಶೇ 61ರಷ್ಟು ವ್ಯಾಪಿಸಿಕೊಂಡಿದೆ. ಸಮುದ್ರ ಮಟ್ಟದಿಂದ 600 ರಿಂದ 1,600 ಮೀಟರ್ ಎತ್ತರದ ಪ್ರದೇಶದಲ್ಲಿ ಹಲವು ಬಗೆಯ ಸಸ್ಯ ನಮೂನೆಗಳಿದ್ದು ಮಳೆ ಪ್ರಮಾಣದ ಮೇಲೆ ವೈವಿಧ್ಯಮಯ ನಿಸರ್ಗ ರೂಪಿತವಾಗಿದೆ.

‘ಜಿಲ್ಲೆಗೆ ಶುದ್ಧ ಹವೆಯ ಗರಿ’

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೇಶದ ಶುದ್ಧ ಗಾಳಿ ಪೂರೈಸುವ ಜಿಲ್ಲೆಗಳ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆ ಒಂದು. ಜಿಲ್ಲೆಯಲ್ಲಿ ಶೇ 50ರಷ್ಟು ಭೌಗೋಳಿಕ ಭಾಗ ಕಾಡಿನಿಂದ ಆವೃತವಾಗಿರುವುದು ಜೀವವಾಯು ಸೃಜಿಸುವ ಶ್ವಾಸಕೋಶಗಳಾಗಿವೆ. ಹಾಗಾಗಿ ಗ್ರಾಮ ಹಾಗೂ ಪಟ್ಟಣಗಳಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಹಸಿರು ಸೃಷ್ಟಿಸುವ ಕೆಲಸ ಮಾಡಬೇಕು ಎಂದು ಪರಿಸರ ಪ್ರೇಮಿ ವೆಂಕಟೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.