ADVERTISEMENT

ವೈಭವದ ಹಿಮವದ್‌ ಗೋಪಾಲಸ್ವಾಮಿ ರಥೋತ್ಸವ

ಜಾತ್ರೋತ್ಸವದ ನಡುವೆ ಮತದಾನದ ಬಗ್ಗೆ ಜಾಗೃತಿ, ಪ್ರತಿಜ್ಞಾ ವಿಧಿ ಬೋಧನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:01 IST
Last Updated 4 ಏಪ್ರಿಲ್ 2024, 16:01 IST
ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿಯ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು
ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿಯ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು   

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ವೈಭವದಿಂದ ನೆರವೇರಿತು. 

ನೆತ್ತಿ ಸುಡುವ ಬಿಸಿಲು, ದೇವಾಲಯದ ಆವರಣದ ನೆಲಹಾಸಿನ ಬಿಸಿಗೆ ನಿಲ್ಲಲು ಸಾಧ್ಯವಾಗದಿದ್ದರೂ, ಸಾವಿರಾರು ಭಕ್ತರು ಉತ್ಸಾಹದಿಂದ ರಥೋತ್ಸವದಲ್ಲಿ ಪಾಲ್ಗೊಂಡರು. ಗೋವಿಂದ, ಗೋಪಾಲ ಎಂಬ ಉದ್ಘೋಷಗಳನ್ನು ಹೊರಡಿಸಿದರು.   

ಬ್ರಹ್ಮರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರು  ತಂಡೋಪತಂಡವಾಗಿ ನೆರೆದಿದ್ದರು. ಸರತಿ ಸಾಲಿನಲ್ಲಿ ನಿಂತು ಗೋಪಾಲಸ್ವಾಮಿ ದರ್ಶನ ಪಡೆದರು.

ADVERTISEMENT

ಮಧ್ಯಾಹ್ನ 1.30ರ ಸುಮಾರಿಗೆ ಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ನೂರಾರು ಸಂಖ್ಯೆಯಲ್ಲಿ ಭಕ್ತರು ತೇರನ್ನು ಎಳೆದರು.

ಬೆಟ್ಟದ ತಪ್ಪಲಿನ ಗ್ರಾಮಗಳು, ಜಿಲ್ಲೆ, ತಾಲ್ಲೂಕಿನ ವಿವಿಧ ಕಡೆಗಳಿಂದ ಭಕ್ತರು ತೇರಿಗೆ ಹೂವು ಹಣ್ಣು, ಎಸೆದು ಹರಕೆ ತೀರಿಸಿದರು. ಅಲಂಕೃತ ರಥವನ್ನು ದೇವಾಲಯಕ್ಕೆ ಸುತ್ತ ಒಂದು ಬಾರಿ ಎಳೆಯಲಾಯಿತು.   

ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ಭಟ್ಟ ಹಾಗೂ ತಂಡದವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಅರಣ್ಯ, ಪೊಲೀಸ್ ಮತ್ತು ವಿವಿಧ ಇಲಾಖೆಯು ಸಿಬ್ಬಂದಿ ವಾಡಿಕೆಯಂತೆ ಗೋಪಾಲಸ್ವಾಮಿಗೆ ಪೂಜೆ  ಸಲ್ಲಿಸಿದರು.

ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಪೊಲೀಸರು ಬಂದೋಬಸ್ತ್ ಮಾಡಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಹೆಚ್ಚುವರಿ ಬಸ್‌: ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲದಿರುವುದರಿಂದ, ಬೆಟ್ಟದ ತಪ್ಪಲಿನಿಂದ ಕೆಎಸ್‌ಆರ್‌ಟಿಸಿಯು ಹೆಚ್ಚುವರಿ 35 ಬಸ್‌ಗಳ ಸೇವೆ ಒದಗಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಬೆಟ್ಟದ ಕಡಿದಾದ ತಿರುವುಗಳಲ್ಲಿ ಕೆಎಸ್ಆರ್‌ಟಿಸಿಯು ಟೋಯಿಂಗ್‌ ವಾಹನ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿತ್ತು.

ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧ ಇರುವುದರಿಂದ ತಪ್ಪಿಲಿನಲ್ಲಿಯೇ ಸಿಬ್ಬಂದಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು. ದೇವಾಲಯದ ಆವರಣದಲ್ಲಿ ಅಂಗಡಿ ಮಳಿಗೆಗಳೀಗೆ ಅವಕಾಶ ನೀಡಿರಲಿಲ್ಲ. 

ತಹಸೀಲ್ದಾರ್ ಮಂಜುನಾಥ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಎಸಿಎಫ್ ನವೀನ್, ಡಿವೈಎಸ್ಪಿ ಲಕ್ಷ್ಮಯ್ಯ ಸೇರಿದಂತೆ ಅಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. 

ರಥೋತ್ಸವ ಮುಗಿದ ಬಳಿಕ ಭಕ್ತರು ವಾಪಾಸ್‌ ತೆರಳಲು ಬಸ್‌ಗಳಿಗೆ ಮುಗಿ ಬಿದ್ದುದರಿಂದ ನೂಕುನುಗ್ಗಲು ಉಂಟಾಯಿತು. ಹೆಚ್ಚು ಬಸ್‌ಗಳು ಬಂದ ನಂತರ ಸಮಸ್ಯೆ ಬಗೆಹರಿಯಿತು. 

ಹಿಮವದ್‌ ಗೋಪಾಲಸ್ವಾಮಿ ಜಾತ್ರೋತ್ಸವದ ನಡುವೆ ಸ್ವೀಪ್‌ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು

ಜಾತ್ರೆ ನಡುವೆ ಮತದಾನ ಜಾಗೃತಿ

ದೇವಸ್ಥಾನದ ಮುಂಭಾಗ ಹಾಗೂ ಬೆಟ್ಟದ ತಪ್ಪಲಿನಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ  ‘ಮತದಾನ ಜಾಗೃತಿ’ ಕಾರ್ಯಕ್ರಮ ನಡೆಯಿತು.  ‘ಲೋಕಸಭಾ ಚುನಾವಣೆಯಲ್ಲಿ ಮತದಾನ ಸಂಭ್ರಮ ಆದಾಗ ಮಾತ್ರ ದೇಶ ಬದಲಾಗುತ್ತದೆ' ಎಂಬ ಘೋಷ ವಾಕ್ಯದಡಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ ‘ಮೊದಲ ಹಂತದ ಮತದಾನ ಇದೇ 26 ರಂದು ನಡೆಯಲಿದ್ದು ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಹಾಗೂ ನೈತಿಕ ಮತದಾನ ಬೆಂಬಲಿಸಿ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು’ ಎಂದರು.  ಜಿಲ್ಲಾ ಪೊಲೀಸ್‌ ವರಿಷ್ಢಾಧಿಕಾರಿ ಪದ್ಮಿನಿ ಸಾಹು ಮಾತನಾಡಿ ‘ದೇಶ ನಡೆಸಲು ನಿಮ್ಮ ಒಂದು ಮತ ಬಹಳ ಅಮೂಲ್ಯವಾದದ್ದು ಹಣದ ಆಸೆಗೆ ಮತ ಮಾರಿಕೊಳ್ಳಬೇಡಿ. ನಿಮಗೆ ಮೂಲ ಸೌಕರ್ಯ ಒದಗಿಸಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿದರು.  ಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಸಾರ್ವಜನಿಕರಿಗೆ ‘ಮತದಾನದ ಮಮತೆಯ ಕರೆಯೋಲೆ’ ಆಹ್ವಾನ ಪತ್ರವನ್ನು ನೀಡಿ ಕಡ್ಡಾಯ ಮತದಾನ ಮಾಡಲು ಕೋರಲಾಯಿತು.  ತಹಶೀಲ್ದಾರ್ ಮಂಜುನಾಥ ಬಂಡೀಪುರ ಹುಲಿಯೋಜನೆ ನಿರ್ದೇಶಕ ಪ್ರಭಾಕರನ್ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ಬಿಲ್ ಕಲೆಕ್ಟರ್‌ಗಳು  ಇತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.