ADVERTISEMENT

ಚಾಮರಾಜನಗರ: ನಮ್ಮೂರ ಹಿಂಡಿ ಮಾರಮ್ಮ ಜಾತ್ರೆ ವೈಭವ

ಏಳೂರು ಗ್ರಾಮಗಳ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:50 IST
Last Updated 22 ಅಕ್ಟೋಬರ್ 2025, 8:50 IST
ಸರ್ವಾಲಂಕೃತ ಹಿಂಡಿ ಮಾರಮ್ಮ
ಸರ್ವಾಲಂಕೃತ ಹಿಂಡಿ ಮಾರಮ್ಮ   

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ-ಮಾಂಬಳ್ಳಿ ಗ್ರಾಮಗಳ ಮಧ್ಯೆ ನೆಲೆಯಾಗಿರುವ ಹಿಂಡಿಮಾರಮ್ಮನ ದೇವಾಲಯದಲ್ಲಿ ‘ನಮ್ಮೂರ ಹಿಂಡಿ ಮಾರಮ್ಮ ಜಾತ್ರೆ’ ಗುರುವಾರ (ಅ.23) ಆರಂಭಗೊಳ್ಳಲಿದೆ.

ಆಚಾರ– ವೈಚಾರಿಕತೆಯ ಸಮನ್ವಯ ಸಾರುವ ಈ ಜಾತ್ರೆಯನ್ನು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಸಂಭ್ರಮ ಮನೆ ಮಾಡಿದೆ.

ಹಿಂಡಿ ಮಾರಮ್ಮ ಹಬ್ಬದ ಜಾತ್ರೆಯನ್ನು ಅಗರ, ಮಾಂಬಳ್ಳಿ, ಕಿನಕಹಳ್ಳಿ, ಕಟ್ನವಾಡಿ, ಬಸಾಪುರ, ಬನ್ನಿಸಾರಿಗೆ ಮತ್ತು ಚಿಕ್ಕ ಉಪ್ಪಾರಬೀದಿ ಎಂಬ ಏಳು ಊರುಗಳು ಒಟ್ಟಾಗಿ ಆಚರಿಸುವ ಕಾರಣ ‘ಸಪ್ತ ಊರುಗಳ ಜಾತ್ರೆ’ ಎಂದೈ ಕರೆಯಲಾಗುತ್ತದೆ. ಸಾಮಾಜಿಕ ಸಾಮರಸ್ಯ ಹಾಗೂ ಸಮ ಸಮಾಜದ ಪರಿಕಲ್ಪನೆ ಸಾರುವ ಈ ಜಾತ್ರೆ ಸರ್ವಜನಾಂಗದ ಆಚರಣೆಯೂ ಆಗಿದೆ.

ADVERTISEMENT

ಹಿಂಡಿ ಮಾರಮ್ಮ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ದೇವಾಲಯದ ಅಡಿಗಲ್ಲು ಶಾಸನಗಳಲ್ಲಿ ಉಲ್ಲೇಖವಿದೆ. ಆರು ಮತ್ತು ಏಳನೇ ಶತಮಾನದಲ್ಲಿ ಸ್ಥಾಪಿತವಾಗಿರುವ ಹಿಂಡಿಮಾರಮ್ಮನ ದೇವಾಲಯ ಸುವರ್ಣಾವತಿ ನದಿಯ ಫಲವತ್ತಾದ ನೆಲದಲ್ಲಿ ನಿಂತಿದೆ. 

ಈ ಬಗ್ಗೆ ತಿಳಿಸುವ ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ನೀಲಕಂಠಸ್ವಾಮಿ ಮಾಂಬಳ್ಳಿ, ‘ಇಲ್ಲಿನ ಜನಪದ ಹಾಡುಗಳು ಮತ್ತು ಸಾಹಿತ್ಯ ಸಪ್ತ ಊರುಗಳ ನಾಡಹಬ್ಬದ ವೈಶಿಷ್ಟ್ಯತೆ, ಆಚಾರ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ.  ಮಾರಿಯನ್ನು ಬಹಳ ವಿಶಿಷ್ಟವಾಗಿ ವರ್ಣಿಸಲಾಗುತ್ತದೆ. ‘ಕೊಂಡಕ್ಕೆ ನಲಿತಾಳೆ, ಕೆಂಡಕ್ಕೆ ಕುಣಿತಾಳೆ ಕೇಲಿನ ಮೇಲೆ ನಲಿವವಳೆ ಮಾರವ್ವ’ ಎಂದು ಪಣ್ಯದ ಕುಲದವರು ಹಾಗೂ ಭಕ್ತರು ಕೊಂಡಾಡುತ್ತಾರೆ’ ಎನ್ನುತ್ತಾರೆ.

ಹಿಂಡಿ ಮಾರಮ್ಮನ ಜಾತ್ರೆಯಲ್ಲಿ ಸುತ್ತೇಳು ಗ್ರಾಮದ ನಿವಾಸಿಗಳು ಪಾಲ್ಗೊಳ್ಳುತ್ತಾರೆ. ಜಾತ್ರೆ ಪೂರ್ವಭಾವಿಯಾಗಿ ಹಿಂಡಿಮಾರಮ್ಮನಿಗೆ ರಂಗ ಕಟ್ಟಲು 18 ಕೋಮಿನವರನ್ನು ಸೇರಿಸಿ ರಂಗದ ತೆಂಗಿನಕಾಯಿ ನೀಡಲಾಗುತ್ತದೆ. ನಂತರ ಏಳು ಊರಿನ ಯಜಮಾನರು ಜಾತ್ರೆಯ ಜವಾಬ್ದಾರಿ ವಹಿಸುತ್ತಾರೆ. ಊರಿನ ಬೀದಿ ಸ್ವಚ್ಛತೆ, ಬೆಳಕಿನ ಅಲಂಕಾರ, ಕೊಂಡೋತ್ಸವಕ್ಕೆ ಕಟ್ಟಿಗೆ ಸಂಗ್ರಹ ನಡೆಯುತ್ತದೆ.

ನರಕ ಚತುರ್ದಶಿಯ ದಿನ ಸಾಂಪ್ರದಾಯಿಕ ಪೂಜೆ ಆರಂಭವಾಗಿ ಬಲಿಪಾಡ್ಯದ ದಿನದ ರಾತ್ರಿ ಮಾರಮ್ಮನ ಕೊಂಡಕ್ಕೆ ಬೊಮ್ಮಪ್ಪ ಬಳಿ ಹೋಗಿ ಹೊಸ ನೀರನ್ನು ತಂದು ಕೊಂಡಕ್ಕೆ ಹಾಕಿ ಕ್ರಮಬದ್ಧವಾದ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸಾಂಪ್ರದಾಯಿಕ ಕೇಲ್ ಪ್ರಕ್ರಿಯೆ ನಡೆಯುತ್ತದೆ. ಎಲ್ಲ ಸಮುದಾಯದವರು ಕೊಂಡಕ್ಕೆ ಬೆಂಕಿ ಹಾಕಿದ ನಂತರ ತಾಯಿ ದೇವಸ್ಥಾನಕ್ಕೆ ಬಂದು ಸೇರುತ್ತಾಳೆ.

ಬಲಿಪಾಡ್ಯಮಿ ಮಾರನೆ ದಿನ ಉರುಳು ಸೇವೆ, ಮಾರಿ ಕುಣಿತ ಮತ್ತು ಕೊಂಡೋತ್ಸವದ ಮೆರವಣಿಗೆ ನಡೆಯಲಿದೆ. ಸಂಜೆ ಕೊಂಡ ಹಾಯುವ, ಬಾಯಿಗೆ ಬೀಗ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಪುರೋಹಿತರು ಪ್ರಧಾನವಾಗಿ ಕೊಂಡ ಹಾಯ್ದರೆ ನಂತರ ಪುರುಷರು ಕೊಂಡ ಹಾಯುತ್ತಾರೆ. ಮಾರನೇ ದಿವಸ ಮಾಂಬಳ್ಳಿ ಮುಖ್ಯರಸ್ತೆಗಳಲ್ಲಿ ತಾಯಿಯ ಮೂರ್ತಿ ಮೆರವಣಿಗೆ ಸಾಗಿ ಏಳು ಊರಿನ ಗ್ರಾಮಗಳಲ್ಲೂ ಮೆರವಣಿಗೆ ನಡೆಯುತ್ತದೆ ಎಂದು ನೀಲಕಂಠಸ್ವಾಮಿ ತಿಳಿಸಿದರು.

ಹಿಂಡಿ ಮಾರಮ್ಮಳಾದ ಬಗೆ...

ತಾಯಿ ಹಿಂಡಿಮಾರಮ್ಮ ಕೊಡಿಯಾಲದಿಂದ ಬಂದವಳು ಮೈಸೂರಿನ ಚಾಮುಂಡೇಶ್ವರಿ ಸಹೋದರಿಯಾಗಿ ಉತ್ತನಹಳ್ಳಿ ಮಾರಿಯ ಹಿರಿಯಕ್ಕನಾಗಿ ಬಿಸಿಲು ಮಾರಿ ಮತ್ತು ದಂಡಿನ ಮಾರಿಯ ಸಹೋದರಿಯಾಗಿ ಮೈಸೂರು ಅರಮನೆ ಕೋಟೆಯಲ್ಲಿ ಆಶ್ರಯ ಪಡೆದು ಚಾಮುಂಡಿ ಉತ್ಸವದಲ್ಲಿ ತಾರತಮ್ಯ ಸಹಿಸಲಾರದೆ ಉತ್ತನಹಳ್ಳಿ ಮಾರಿಯ ಜೊತೆ ಜಗಳವಾಡಿ ಸಹೋದರಿ ದಂಡಿನ ಮಾರಿಯನ್ನು ಕರೆದುಕೊಂಡು ಊರೂರ ಮೇಲೆ  ಪವಾಡಗಳನ್ನು ಪಸರಿಸಿ ಅಗರ ಮಾಂಬಳ್ಳಿಯ ಸುವರ್ಣಾವತಿ ನದಿಯ ತೀರದಲ್ಲಿ ಎಣ್ಣೆಗಾಣದ ಹಿಂಡಿ ತಿಂದು ಹಿಂಡಿಮಾರಮ್ಮಳಾದಳು ಎಂಬ ಪ್ರತೀತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.