ADVERTISEMENT

ಚಾಮರಾಜನಗರ | ಗ್ಯಾರಂಟಿಗಳು ‌ಇಂದಿಗೂ ಮುಂದೆಯೂ ಇರಲಿವೆ: ಎಚ್.ಎಂ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 1:58 IST
Last Updated 16 ಸೆಪ್ಟೆಂಬರ್ 2025, 1:58 IST
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರವನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಉದ್ಘಾಟಿಸಿದರು
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರವನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಉದ್ಘಾಟಿಸಿದರು   

ಚಾಮರಾಜನಗರ: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಇಂದೂ ಇರಲಿವೆ, ಮುಂದೆಯೂ ಮುಂದುವರಿಯಲಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿಎಸ್‌ಟಿ ಹಾಗೂ ತೆರಿಗೆ ಪಾವತಿಯಿಂದ 1.20 ಲಕ್ಷ ಮಂದಿಗೆ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುತ್ತಿಲ್ಲ ಎಂಬ ದೂರುಗಳ ಸಂಬಂಧ ಈಚೆಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸಮಸ್ಯೆ ಸರಿಪಡಿಸಲಾಗಿದೆ. ಮೃತರಾದವರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿದ್ದು ಅವರ ಹೆಸರನ್ನು ಕೈಬಿಡಲಾಗುವುದು ಎಂದು ರೇವಣ್ಣ ಹೇಳಿದರು.

ADVERTISEMENT

ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣದ ಜೊತೆಗೆ ಪುರುಷರಿಗೂ ಆರ್ಥಿಕ ಶಕ್ತಿ ನೀಡಿದೆ. ಮನೆಯ ಯಜಮಾನ ಪ್ರತಿ ತಿಂಗಳು ಪಡಿತರಕ್ಕೆ, ವಿದ್ಯುತ್ ಬಿಲ್ ಪಾವತಿಗೆ ವ್ಯಯಿಸುತ್ತಿದ್ದ ಹಣ ಉಳಿತಾಯವಾಗುತ್ತಿದೆ. ಗ್ಯಾರಂಟಿಗಳ ಮೂಲಕ ಕಾಂಗ್ರೆಸ್‌ ಸರ್ಕಾರ ಬಡವರ ಬದುಕಿಗೆ ಸಹಾಯ ಮಾಡುತ್ತಿದ್ದರೆ ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಾ ಹಿಂದೂ, ಮುಸ್ಲಿಮರ ನಡುವೆ ದ್ವೇಷ ಬಿತ್ತಿ ಸಮಾಜವನ್ನು ಒಡೆಯುವ, ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಟೀಕಿಸಿದರು.

‘ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಹದಗೆಡಲಿದೆ, ಸರ್ಕಾರ ದಿವಾಳಿಯಾಗಲಿದೆ ಎಂದು ಟೀಕಿಸಿದ್ದ ಪ್ರಧಾನಿ ಮೋದಿಯವರೇ ಚುನಾವಣಾ ಪ್ರಚಾರ ಮಾಡುವಾಗ ಗ್ಯಾರಂಟಿ ಯೋಜನೆಗಳನ್ನು ಹೊಸ ಕಾರ್ಯಕ್ರಮಗಳ ಹೆಸರಿನಲ್ಲಿ ಅನುಷ್ಠಾನಗೊಳಿಸಿದ್ದು ವಿಪರ್ಯಾಸ’ ಎಂದು ವ್ಯಂಗ್ಯವಾಡಿದರು.

ಇಂದಿರಾಗಾಂಧಿ ಹಾಗೂ ದೇವರಾಜ ಅರಸು ಸರ್ಕಾರದ ಅವಧಿಯಲ್ಲಿ 20 ಅಂಶಗಳ ಜನಪರ ಕಾರ್ಯಕ್ರಮಗಳು ಜಾರಿಯಾಗಿ ಬಡವರ ಬದುಕನ್ನು ಸುಧಾರಿಸಿದವು. ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿ ಬಡವರ ಬದುಕಿಗೆ ಆಧಾರವಾಗಿವೆ. ಗ್ಯಾರಂಟಿಗಳು ಬಿಟ್ಟಿ ಭಾಗ್ಯಗಳಲ್ಲ, ಬಡವರು, ಶೋಷಿತರು, ಮಹಿಳೆಯರಿಗೆ ಸರ್ಕಾರ ನೀಡಿರುವ ಕೊಡುಗೆಯಾಗಿದೆ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆಗಳು ಬಡವರ ಏಳ್ಗೆಗೆ ಕಾರಣವಾಗಿದೆ, ಶೋಷಿತರು, ಕಾರ್ಮಿಕರು, ಮಹಿಳೆಯರ ಜೀವನಮಟ್ಟ ಸುಧಾರಣೆಯಾಗಿದೆ’ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಮಾತನಾಡಿ ‘ಅಂಬೇಡ್ಕರ್ ಕಂಡಿದ್ದ ಶೋಷಿತರು, ಮಹಿಳೆಯರ ಸ್ವಾವಲಂಬನೆಯ ಕನಸನ್ನು ಕಾಂಗ್ರೆಸ್ ಸರ್ಕಾರ ನನಸು ಮಾಡುತ್ತಿದೆ. ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 9 ರಿಂದ 10 ಸಾವಿರ ನೆರವು ದೊರೆಯುತ್ತಿದ್ದು ಕುಟುಂಬಗಳು ಆರ್ಥಿಕವಾಗಿ ಸದೃಢವಾಗುತ್ತಿವೆ ಎಂದರು.

ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾತನಾಡಿ, ‘ಜನರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಗ್ಯಾರಂಟಿಗಳು ನೆರವಾಗಿವೆ. ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿರುವುದು ದಾಖಲೆಯಾಗಿದೆ. ಜನರ ತಲಾ ಆದಾಯ ಹೆಚ್ಚಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ‘ಪಂಚ ಗ್ಯಾರಂಟಿಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು ‘ಗೃಹಲಕ್ಷ್ಮಿ’ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗಿದೆ’ ಎಂದರು.

ಜಾಗೃತ ಕರ್ನಾಟಕ ಮುಖ್ಯಸ್ಥ ಡಾ.ವಾಸು ‘ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಹಾಗೂ ವಿರೋಧಿಗಳ ಅಪಪ್ರಚಾರದ ಬಗ್ಗೆ ‌ಮಾಹಿತಿ ನೀಡಿದರು. ಗ್ಯಾರಂಟಿ ಫಲಾನುಭವಿಗಳು ಅನಿಸಿಕೆ ಹಂಚಿಕೊಂಡರು.

ಕಲಾವಿದ ನಟರಾಜು ರಚಿತ ಹಾಗೂ ಗಾಯಕ ಸಿ.ಎಂ. ನರಸಿಂಹಮೂರ್ತಿ ಗಾಯನದ ಗ್ಯಾರಂಟಿ ಯೋಜನೆಗಳ ಸಾಕ್ಷ್ಯಚಿತ್ರವನ್ನು ಎಚ್‌.ಎಂ. ರೇವಣ್ಣ ಬಿಡುಗಡೆ ಮಾಡಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಪಂಚಾಯಿತಿ ಸಿಇಒಇ ಮೋನಾ ರೋತ್, ಎಸ್‌ಪಿ ಬಿ.ಟಿ. ಕವಿತಾ, ಪ್ರಾಧಿಕಾರದ ಸೂರಜ್ ಹೆಗ್ಗಡೆ, ಗ್ರೇಟರ್ ಬೆಂಗಳೂರು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೃಷ್ಣಪ್ಪ, ಅರುಣ್‌ ಕುಮಾರ್ ಸೇರಿದಂತೆ ಹಲವರು ಇದ್ದರು.

ಗಮನ ಸೆಳೆದ ಮಹಿಳೆಯರ ಪೂರ್ಣಕುಂಭ ಸ್ವಾಗತ ಗೋರುಕನ ನೃತ್ಯ

‘ವಸ್ತು ಪ್ರದರ್ಶನ ಮಾರಾಟ’

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣ ಪ್ರತಿಮೆಗೆ ಎಚ್‌.ಎಂ ರೇವಣ್ಣ ಮಾಲಾರ್ಪಣೆ ಮಾಡಿ ಜಿಲ್ಲಾ ರಂಗಮಂದಿರದ ಆವರಣದಲ್ಲಿ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿದರು. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ತಯಾರಿಸಿದ್ದ ಗೃಹೋಪಯೋಗಿ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಲಾಗಿತ್ತು. ಬಗೆಬಗೆಯ ಹಪ್ಪಳ ಸಂಡಿಗೆ ಚಟ್ನಿಪುಡಿ ಪೌಷ್ಟಿಕ ಆಹಾರಗಳು ಮಾರಾಟವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.