ADVERTISEMENT

ರಾಜ್ಯದ ಒಂದು ಇಂಚು ಜಾಗವನ್ನೂ ತಮಿಳುನಾಡಿಗೆ ಬಿಟ್ಟುಕೊಡುವುದಿಲ್ಲ: ವಿ.ಸೋಮಣ್ಣ

ಹೊಗೇನಕಲ್ ಯೋಜನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 6:13 IST
Last Updated 26 ಜನವರಿ 2022, 6:13 IST
ವಿ.ಸೋಮಣ್ಣ
ವಿ.ಸೋಮಣ್ಣ   

ಚಾಮರಾಜನಗರ: ‘ರಾಜ್ಯದ ಒಂದು ಇಂಚು ಜಾಗವನ್ನು ತಮಿಳುನಾಡಿಗೆ ಬಿಟ್ಟು ಕೊಡುವುದಿಲ್ಲ. ನಮ್ಮ ಹಕ್ಕನ್ನು‌ ರಕ್ಷಿಸಲು ಬೇಕಾದ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ತಮಿಳುನಾಡು ಪ್ರಸ್ತಾಪಿಸಿರುವ ಹೊಗೇನಕಲ್ ಎರಡನೇ ಹಂತದ ಯೋಜನೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿರುವ ಹಾಗೂ ಎರಡೂ ರಾಜ್ಯಗಳ ಗಡಿ ಗುರುತಿಸಲು‌ ಜಂಟಿ‌ ಸರ್ವೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ಇದು ಅತ್ಯಂತ ಸೂಕ್ಷ್ಮ ವಿಚಾರ. ನಮ್ಮ ರಾಜ್ಯದ ಹಕ್ಕನ್ನು ಇನ್ನೊಬ್ಬರಿಗೆ ಖಂಡಿತವಾಗಿ ಬಿಟ್ಟುಕೊಡುವುದಿಲ್ಲ. ಹಲವು ವರ್ಷಗಳಿಂದಲೂ‌ ಜಂಟಿ‌ ಸರ್ವೆ ಆಗಬೇಕು ಎಂಬ ಒತ್ತಾಯ ಇದೆ. ಈ ಹಿಂದೆ ಪಾಲಾರ್ ಹಳ್ಳದಿಂದ ಮಹದೇಶ್ವರ ಬೆಟ್ಟಕ್ಕೆ ನೀರು ಪೂರೈಸುವ ಯೋಜನೆ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಸೋಮಣ್ಣ ಯೋಜನೆ ಕಾರ್ಯಗತ ಗೊಳಿಸಿದ್ದಾನೆ. ಯಾವ್ಯಾವ ಕಾಲಕ್ಕೆ ಏನಾಗಬೇಕೋ ಅದು ಆಗುತ್ತದೆ' ಎಂದರು.

ಸೋಮಣ್ಣ ಅವರ ಕಾಲದಲ್ಲಿ ಜಂಟಿ ಸರ್ವೆ ನಡೆಯುತ್ತದೆಯೇ ಎಂದು ಕೇಳಿದ್ದಕ್ಕೆ, ‘ಸರ್ವೆ‌ ನಡೆದರೆ ಸಂತೋಷ. ಆದರೆ, ಯಾವಾಗ ನಮ್ಮ ಜಾಗ, ಹಕ್ಕಿನ ಅತಿಕ್ರಮಣ ಆದಾಗ ರಾಜ್ಯ ಬುದ್ಧಿವಂತಿಕೆ ಪ್ರದರ್ಶಿಸಲಿದೆ. ನೀರು ಹರಿಯುವ ಮೇಲ್ಭಾಗದಲ್ಲಿ ನಾವಿದ್ದೇವೆ. ನಾವು ನೀರು ಕುಡಿದ ನಂತರ ಅವರು ನೀರು ಕುಡಿಯುತ್ತಾರೆ ಎಂಬುದನ್ನು ‌ಮರೆಯಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳು ಸಹೋದರತ್ವದಿಂದ ನಡೆದುಕೊಳ್ಳಬೇಕು. ಅವರ ಹಕ್ಕುಗಳನ್ಜು ಅವರು ಕಾಯುತ್ತಾರೆ. ನಮ್ಮ ಹಕ್ಕನ್ನು ನಾವು ಕಾಯುತ್ತೇವೆ. ಯಾವುದೇ ನಾಗರಿಕ ಸರ್ಕಾರ ತನ್ನ ಜನರಿಗೆ ಅನ್ಯಾಯ ಮಾಡಿ ಬೇರೆಯವರಿಗೆ ನೀರು ಕೊಡುವುದಿಲ್ಲ’ ಎಂದರು.

ಭೇಟಿಯಾಗಬಾರದೇ: ದೇವನಹಳ್ಳಿ ರೆಸಾರ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಲವು ಬಿಜೆಪಿ ಶಾಸಕರೊಂದಿಗೆ ಮಾತುಕತೆ ನಡೆಸಿರುವ ಬಗ್ಗೆ ಕೇಳಿದ್ದಕ್ಕೆ, ‘ಕಾಫಿ ಕುಡಿಯುವುದಕ್ಕೆ, ತಿಂಡಿ‌ ತಿನ್ನುವುದಕ್ಕೆ ಹೋಗಬಾರದೇ, ಡಿಕೆಶಿ ಅವರನ್ನು ಯಾರೂ ಭೇಟಿಯಾಗಬಾರದಾ? ಬಿಜೆಪಿ, ಜೆಡಿಎಸದ ನವರಿಗೂ ರೆಸಾರ್ಟ್ ಇದೆ. ರೆಸಾರ್ಟ್ ಇರುವುದು ಆರಾಮವಾಗಿ ಇರುವುದಕ್ಕೆ. ನಾನು ಇರುವುದು ಬೀದಿ ಸುತ್ತುವುದಕ್ಕೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.