
ಚಾಮರಾಜನಗರ: ಮಾನವ–ವನ್ಯಜೀವಿ ಸಂಘರ್ಷ ಕುರಿತು ವಸ್ತುಸ್ಥಿತಿ ಅಧ್ಯಯನ ಮಾಡದೆ ತಾಂತ್ರಿಕ ಸಮಿತಿ ನೀಡಿರುವ ಮಧ್ಯಂತರ ವರದಿ ಆಧಾರದ ಮೇಲೆ ಸರ್ಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಿಸಿರುವುದು ಖಂಡನೀಯ ಎಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರೈತರ ತೀವ್ರ ವಿರೋಧದ ನಡುವೆಯೂ ಸಫಾರಿ ಆರಂಭಿಸಿರುವುದು ಖಂಡನೀಯ. ವನ್ಯಜೀವಿಗಳ ದಾಳಿಗೆ ಐವರು ಬಲಿಯಾಗಿದ್ದರೂ ರೆಸಾರ್ಟ್ ಮಾಲೀಕರ ಒತ್ತಡ ಹಾಗೂ ಆಮಿಷಗಳಿಗೆ ಮಣಿದಿರುವ ಸರ್ಕಾರ ರೈತ ವಿರೋಧಿ ನಿಲುವು ತೆಗೆದುಕೊಂಡಿದೆ ಎಂದು ದೂರಿದರು.
ಡೆಹ್ರಾಡೂನ್‌ನಿಂದ ಬಂದಿರುವ ತಾಂತ್ರಿಕ ಸಮಿತಿ ಸದಸ್ಯರು ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗದೆ, ಸ್ಥಳೀಯ ರೈತರೊಂದಿಗೆ ಮಾನವ ಪ್ರಾಣಿ ಸಂಘರ್ಷ ಕುರಿತು ಚರ್ಚಿಸದೆ ಏಕಪಕ್ಷೀಯವಾಗಿ ನೀಡಿರುವ ವರದಿಯನ್ನು ಅಂಗೀಕರಿಸಿರುವುದು ಅವೈಜ್ಞಾನಿಕ. ಸರ್ಕಾರದ ನಿಲುವಿನಿಂದ ಕಾಡು ಹಾಗೂ ವನ್ಯಜೀವಿಗಳು ನಾಶವಾಗಲಿವೆ ಎಂದರು.
ಸಫಾರಿ ಆರಂಭವಾದರೆ ವನ್ಯಜೀವಿಗಳು ಮತ್ತೆ ನಾಡಿನತ್ತ ಮುಖಮಾಡಲಿವೆ, ಜನ ಜಾನುವಾರುಗಳ ಮೇಲೆ, ರೈತರ ಬೆಳೆ ಮೇಲೆ ದಾಳಿ ನಡೆಸುತ್ತವೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಹೊತ್ತುಕೊಳ್ಳಬೇಕು ಎಂದು ಹೊನ್ನೂರು ಪ್ರಕಾಶ್ ಹೇಳಿದರು.
ಸಫಾರಿ ಮೇಲೆ ಸ್ಥಳೀಯ ರೈತರು ಅವಲಂಬಿತರಾಗಿಲ್ಲ, ಸಫಾರಿಯಿಂದ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ, ಪಿಎಫ್, ಇಎಸ್‌ಐ ಸೌಲಭ್ಯಗಳು ದೊರೆತಿವೆ ಎಂಬುದನ್ನು ಕಾರ್ಮಿಕ ಇಲಾಖೆ ಬಹಿರಂಗಪಡಿಸಬೇಕು. ಅಕ್ರಮವಾಗಿ ರೆಸಾರ್ಟ್ ಹಾಗೂ ಹೋಂಸ್ಟೇಗಳನ್ನು ನಿರ್ಮಾಣ ಮಾಡಿಕೊಂಡಿರುವ ಮಾಲೀಕರ ಹಿತಕಾಯಲು ಸರ್ಕಾರ ರೈತರ ಹಿತ ಬಲಿ ಕೊಟ್ಟಿದೆ ಎಂದು ಅರೋಪಿಸಿದರು.
ಸ್ಥಳೀಯರು ಹುಲಿ ಸಂರಕ್ಷಿತ ಪ್ರದೇಶದೊಳಗೆ ಪ್ರವೇಶಿಸಿದರೆ ದಂಡ ವಿಧಿಸುವ ಅಧಿಕಾರಿಗಳು ಸಫಾರಿ ಹೆಸರಿನಲ್ಲಿ ಅಭಯಾರಣ್ಯದೊಳಗೆ ನೂರಾರು ವಾಹನಗಳನ್ನು ನುಗ್ಗಿಸುತ್ತಿರುವುದು ವಿಪರ್ಯಾಸ. ವಾಹನಗಳ ಸದ್ದಿನಿಂದ ಪ್ರಾಣಿಗಳು ಸ್ವತಂತ್ರವಾಗಿ ಸಂಚರಿಸಲು ಅಡ್ಡಿಯಾಗುತ್ತದೆ, ದೂಳು ಹಾಗೂ ಹೊಗೆಯಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು.
ಸಫಾರಿ ಬಂದ್ ಆಗುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಯಲಿದೆ. ಫೆ.25ರಂದು ಮೈಸೂರಿನ ವಿಭಾಗೀಯ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಾಗುವುದು. ಮಣಿಯದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದರು.
ಇದೇವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಸಫಾರಿ ಮರು ಆರಂಭಕ್ಕೆ ರೈತ ಸಂಘಟನೆಗಳ ವಿರೋಧವನ್ನು ಅರಣ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅರಣ್ಯದೊಳಗೆ ಅಕ್ರಮ ರೆಸಾರ್ಟ್‌ಗಳು ನಿರ್ಮಾಣವಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಸೇರಿದಂತೆ ಹಲವರು ಇದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಆರಂಭಿಸಿರುವುದರ ಹಿಂದೆ ಭೂಮಾಫಿಯಾ ಇದೆ. ವನ್ಯಜೀವಿಗಳ ದಾಳಿ ಭಯ ಹುಟ್ಟಿಸಿ ಕಾಡಂಚಿನ ರೈತರ ಕೃಷಿ ಭೂಮಿಯನ್ನು ಉದ್ಯಮಿಗಳು ಖರೀದಿಸುವ ಹುನ್ನಾರ ನಡೆಸಿದ್ದಾರೆ. ಈಗಾಗಲೇ ಶೇ 30ರಷ್ಟು ಕೃಷಿ ಭೂಮಿ ಉದ್ಯಮಿಗಳ ಪಾಲಾಗಿದ್ದು ಮುಂದೆ ಸ್ಥಳೀಯ ರೈತರು ಉದ್ಯಮಿಗಳ ಫಾರ್ಮ್ ಹೌಸ್‌ಗಳಲ್ಲಿ ಜೀತ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅರಣ್ಯ ಖಾಸಗೀಕರಣವಾದರೂ ಅಚ್ಚರಿ ಇಲ್ಲ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.