
ಚಾಮರಾಜನಗರ: ಹುಬ್ಬಳ್ಳಿಯಲ್ಲಿ ಅಂತರ್ಜಾತಿ ವಿವಾಹವಾದ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿ, ಅಳಿಯನ ಕುಟುಂಬದವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯ ವತಿಯಿಂದ ನಡೆದ ಮಾನ್ಯಳ ಮರ್ಯಾದೆಗೇಡು ಹತ್ಯೆ ಖಂಡನಾ ಸಭೆಯಲ್ಲಿ ಅವರು ಮಾತನಾಡಿ, ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಪ್ರೀತಿಸಿ ಅಂತರ್ಜಾತಿ ವಿವಾಹವಾದಳು ಎಂಬ ಕಾರಣಕ್ಕೆ ಗರ್ಭಿಣಿಯಾಗಿದ್ದರೂ ಮಗಳಾದ ಮಾನ್ಯ ಎಂಬಾಕೆಯನ್ನು ಕೊಲೆ ಮಾಡಿರುವುದು ಪೈಶಾಚಿಕ ಕೃತ್ಯ. ಜೊತೆಗೆ ಪತಿ ವಿವೇಕಾನಂದನ ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ಪ್ರೀತಿಸಿ ಮದುವೆಯಾದ ಪತ್ನಿ ಹಾಗೂ ಗರ್ಭದಲ್ಲಿದ್ದ ಮಗುವನ್ನು ಕಳೆದುಕೊಂಡು ಪತಿ ವಿವೇಕಾನಂದ ಜರ್ಜರಿತಗೊಂಡಿದ್ದಾರೆ. ಆರೋಪಿಗಳಿಂದ ಗಂಭೀರವಾಗಿ ಗಾಯಗೊಂಡಿರುವ ವಿವೇಕಾನಂದನ ತಾಯಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಸರ್ಕಾರ ವಿವೇಕಾನಂದನ ಕುಟುಂಬಕ್ಕೆ ಭದ್ರತೆ ಒದಗಿಸಿ ಸೂಕ್ತ ಪರಿಹಾರ ವಿತರಿಸಬೇಕು.
ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ರಾಜಶೇಖರ್ ಒತ್ತಾಯಿಸಿದರು. ಮುಖಂಡ ಎಚ್.ನಾಗರಾಜು ಮಾತನಾಡಿ, ಆಧುನಿಕ ಯುಗದಲ್ಲೂ ಮಾರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದರು.
ಸಭೆಯಲ್ಲಿ ಮುಖಂಡರಾದ ದ್ವಾರ್ಕಿ ಕೊಳ್ಳೇಗಾಲ, ಸಿ.ಎಚ್.ರಂಗಸ್ವಾಮಿ, ಲಿಂಗರಾಜು, ಲಿಂಗರಾಜು, ಶಿವಕುಮಾರ್ ರಾಮಸಮುದ್ರ, ಶಾಗ್ಯ ಸುಂದರ್, ಸುರೇಶ್ ಸಿ.ಕೆ.ಹುಂಡಿ, ಬೆಳ್ಳಿಯಪ್ಪ, ಮಾದೇಶ್, ಸುಂದರ್, ಚಿನ್ನಸ್ವಾಮಿ, ಜಯರಾಜ್, ಚನ್ನಬಸವಯ್ಯ, ಸಿ.ನಾಗಮಲ್ಲು, ಮರಿಸ್ವಾಮಿ, ಸಿದ್ದರಾಜು, ಮಾದಾಪುರ, ನಂದೀಶ್, ಶಿವಮಲ್ಲು, ಸಿ.ಮಧು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.