ADVERTISEMENT

ಗುಂಡ್ಲುಪೇಟೆ | ಮಾನವ–ಪ್ರಾಣಿ ಸಂಘರ್ಷ, ಅರಿವಿಗೆ ಬೀದಿ ನಾಟಕ

ಬಂಡೀಪುರ: ಅರಣ್ಯ ಇಲಾಖೆಯಿಂದ ಸ್ಥಳೀಯ ಕಲಾವಿದರ ಬಳಕೆ

ಮಲ್ಲೇಶ ಎಂ.
Published 10 ಮೇ 2020, 20:00 IST
Last Updated 10 ಮೇ 2020, 20:00 IST
ಬಂಡೀಪುರ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕಲಾವಿದರು ‍ಬೀದಿ ನಾಟಕ ಪ್ರದರ್ಶಿಸುತ್ತಿರುವುದು
ಬಂಡೀಪುರ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕಲಾವಿದರು ‍ಬೀದಿ ನಾಟಕ ಪ್ರದರ್ಶಿಸುತ್ತಿರುವುದು   

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಸದಾ ನಡೆಯುತ್ತಿರುವ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸುವುದಕ್ಕಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ ಮತ್ತು ಓಂಕಾರ ವನ್ಯಜೀವಿ ವಲಯಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಣಿ ಮಾನವ ಸಂಘರ್ಷ ಹೆಚ್ಚು. ಇಲ್ಲಿ ರೈತರು ಹಾಗೂ ಇಲಾಖೆಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಪ್ರಾಣಿಗಳನ್ನು ಕಾಡಿಗೆ ಓಡಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳೂ ನಡೆಯುತ್ತಿರುತ್ತವೆ.

ರೈತರು ಕಾಡಂಚಿನಲ್ಲಿ ಇರುವ ಜಮೀನುಗಳನ್ನು ಪಾಳು ಬಿಟ್ಟಿದ್ದಾರೆ, ಇದರಿಂದಾಗಿ ಪ್ರಾಣಿಗಳು ಹೊರಗೆ ಬರುತ್ತಿವೆ ಎಂದು ಇಲಾಖೆ ಸಿಬ್ಬಂದಿ ರೈತರ ಮೇಲೆ ಗೂಬೆ ಕೂರಿಸಿದರೆ, ರೈತರು ಅರಣ್ಯ ಇಲಾಖೆ ಸಿಬ್ಬಂದಿಯತ್ತ ಕೈ ತೋರಿಸುತ್ತಾರೆ.

ADVERTISEMENT

‘ಸಿಬ್ಬಂದಿ ಬೀಟ್‌ನಲ್ಲಿ ಕೆಲಸ ಮಾಡುವುದಿಲ್ಲ. ಕಾಡಂಚಿನಲ್ಲಿ ಅನೇಕ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಇರುವುದರಿಂದ ಹಂದಿಗಳು ಈ ಪ್ರದೇಶದಲ್ಲಿ ಓಡಾಡಿಕೊಂಡಿರುತ್ತವೆ. ಅಲ್ಲದೆ ಕಾಡಿನೊಳಗೆ ಶೇ 60ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಂಟಾನಗಳು ಬೆಳೆದಿರುವುದರಿಂದ ಜಿಂಕೆ, ಕಡವೆಗಳಂತಹ ಬಲಿ ಪ್ರಾಣಿಗಳು ಕಾಡಂಚಿನಲ್ಲಿ ಹೆಚ್ಚಿರುತ್ತವೆ. ಇವುಗಳನ್ನು ಹುಡುಕಿಕೊಂಡು ಹುಲಿ ಚಿರತೆಗಳು ಕಾಡಿನಿಂದ ಹೊರಗೆ ಬರುತ್ತಿವೆ. ಆಗ ಜಮೀನಿನಲ್ಲಿ ಮೇಯುತ್ತಿರುವ ಜಾನುವಾರುಗಳನ್ನು ಬೇಟೆಯಾಡುತ್ತಿವೆ’ ಎಂಬುದು ರೈತರ ಆರೋಪ.

‘ಕಾಡಂಚಿನ ಪ್ರದೇಶದಲ್ಲಿ ಹೊರಗಿನ ಉದ್ಯಮಿಗಳು ನೂರಾರು ಎಕರೆ ಜಮೀನು ಖರೀದಿಸಿ ಪಾಳು ಬಿಟ್ಟಿದ್ದಾರೆ. ಇದರಿಂದಾಗಿ ರೈತರು ಜಾನುವಾರುಗಳನ್ನು ಬಿಡುತ್ತಾರೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಘ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ, ವಯಸ್ಸಾಗಿರುವ ಹುಲಿಗಳು ಕಾಡಿನೊಳಗೆ ಬೇಟೆಯಾಡಲು ಸಾಧ್ಯವಾಗದೆ, ಕಾಡಂಚಿನ ಪ್ರದೇಶಕ್ಕೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ’ ಎಂದು ವನ್ಯಜೀವಿ ಛಾಯಾಗ್ರಹಕ ಆರ್.ಕೆ.ಮಧು ಅವರು ತಿಳಿಸಿದರು.

ಜನರಿಗೆ ತಿಳಿ ಹೇಳುವ ಪ್ರಯತ್ನ
ಪರಿಸರ ಸಮತೋಲನ ಕಾಪಾಡುವಲ್ಲಿ ಅರಣ್ಯದ ಪಾತ್ರ, ಕಾಡಿನ ಸಂರಕ್ಷಣೆಯ ಅಗತ್ಯ, ಆಹಾರ ಸರಪಣಿ, ಅರಣ್ಯದಲ್ಲಿ ಹುಲಿ ಸೇರಿದಂತೆ ಮಾಂಸ ಭಕ್ಷಕ ಪ್ರಾಣಿಗಳ ಇರುವಿಕೆಯ ಅಗತ್ಯ, ಒಂದು ವೇಳೆ ಅವುಗಳು ಇಲ್ಲದಿದ್ದರೆ ಬಲಿ ಪ್ರಾಣಿಗಳ ಸಂಖ್ಯೆ ಜಾಸ್ತಿಯಾಗಿ ಜನರಿಗೆ ಆಗಬಹುದಾದ ತೊಂದರೆ... ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್‌ ಅವರು, ‘ಪ್ರಾಣಿ– ಮಾನವ ಸಂಘರ್ಷದ ಎಲ್ಲ ಆಯಾಮಗಳನ್ನು ರೈತರಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಯುವಕರನ್ನು ಬಳಸಿಕೊಂಡು ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.