ADVERTISEMENT

ಕೊಳ್ಳೇಗಾಲ: ಬಡಾವಣೆಗಳಲ್ಲಿ ಮದ್ಯ ಅಕ್ರಮ ಮಾರಾಟ

ಕೊಳ್ಳೇಗಾಲ ನಗರದ ವಿವಿಧೆಡೆ ಅಕ್ರಮ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 24 ಮೇ 2021, 5:12 IST
Last Updated 24 ಮೇ 2021, 5:12 IST

ಕೊಳ್ಳೇಗಾಲ: ನಗರದ ಕೆಲವು ಬಡಾವಣೆಗಳಲ್ಲಿ ಪ್ರತಿನಿತ್ಯ ಅಕ್ರಮವಾಗಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ.

ನಗರದ ಹೊಸ ಅಣ್ಣಗಳ್ಳಿ, ಇಂದಿರಾ ಕಾಲೊನಿ, ಆನಂದ ಜ್ಯೋತಿ ಕಾಲೊನಿ, ಭೀಮನಗರ, ಹಳೇ ಕುರುಬರ ಬೀದಿ, ಮೇದರ ಬೀದಿಯಲ್ಲಿ ಪ್ರತಿನಿತ್ಯ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಶಾಸಕರಾದ ಆರ್. ನರೇಂದ್ರ, ಎನ್.ಮಹೇಶ್, ಪುಟ್ಟರಂಗಶೆಟ್ಟಿ, ನಿರಂಜನ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಸಭೆ ನಡೆಸಿ ವಾರದಲ್ಲಿ 3 ದಿನ ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ದಿನಸಿ ಅಂಗಡಿ, ಬೇಕರಿ, ಬಾರ್‌ಗಳಿಗೆ ಅವಕಾಶ ನೀಡಿದ್ದಾರೆ. ಉಳಿದ 4 ದಿನಗಳು ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ.

ADVERTISEMENT

ಕೆಲವರು ಮದ್ಯವನ್ನು ಬಾರ್‌ಗಳಲ್ಲಿ ಖರೀದಿಸಿ ನಂತರ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದೆ ಜನ ಪರದಾಡುತ್ತಿದ್ದಾರೆ. ಈ ಮಧ್ಯೆ ಇಲ್ಲಿನ ಕೆಲವರು ಹೆಚ್ಚಿನ ಬೆಲೆಗೆ ಮದ್ಯ ಖರೀದಿಸುತ್ತಿದ್ದಾರೆ. ಮನೆಯಲ್ಲಿ ಕೂಡಿಟ್ಟ ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾದರೆ ಮನೆಯ ನಿರ್ವಹಣೆ ಕಷ್ಟ ಎಂದು ಹಲವರು ಬೇಸರ ತೋಡಿಕೊಂಡರು.

ಬಡಾವಣೆಗೊಂದು ಬಾರ್: ಲಾಕ್‌ಡೌನ್ ಘೋಷಿಸಿದ ಬೆನ್ನಲೇ ಬಡಾವಣೆಗೊಂದು ಬಾರ್ ಆರಂಭವಾಗಿದೆ. ಕೆಲವು ಬಡಾವಣೆಗಳಿಗೆ ಅಪರಿಚಿತರು ಹೋದರೆ ಯಾವ ಬ್ರ್ಯಾಂಡ್ ಬೇಕು? ಎಂದು ಕೇಳುವವರೇ ಹೆಚ್ಚಾಗಿದ್ದಾರೆ. ಕೆಲವರು ಗೋಣಿ ಚೀಲಗಳಲ್ಲಿ ಮದ್ಯದ ಬಾಟಲಿ, ಪ್ಯಾಕೆಟ್‌ ತುಂಬಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮನೆಗಳಲ್ಲಿ ಮದ್ಯ ಇಟ್ಟುಕೊಂಡು, ಬೈಕ್‍ಗಳಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

ನಾವು ಈಗಾಗಲೇ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೇವೆ. ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐತಾಜುದ್ದೀನ್ ಹೇಳಿದರು.

ಪ್ರತಿನಿತ್ಯ ನಮ್ಮ ಮನೆಯಲ್ಲಿ ಗಂಡ ಮದ್ಯಪಾನ ಮಾಡಿ ಬಂದು ಹಣ ಕೊಡುವಂತೆ ಜಗಳವಾಡುತ್ತಾರೆ. ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದೆ ಹಣ ಇಲ್ಲ ಎಂದು ಗೃಹಿಣಿಯೊಬ್ಬರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.