ADVERTISEMENT

ಕೊಳ್ಳೇಗಾಲ: ಕೆರೆ ಒತ್ತುವರಿ ಜಾಗ ತೆರವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:20 IST
Last Updated 23 ಆಗಸ್ಟ್ 2025, 2:20 IST
ಕೊಳ್ಳೇಗಾಲ ತಾಲ್ಲೂಕಿನ ಲಕ್ಕರಸನ ಪಾಳ್ಯ ಗ್ರಾಮದಲ್ಲಿ ಅಕ್ರಮವಾಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದ ಜಾಗವನ್ನು ತಹಶೀಲ್ದಾರ್ ಬಸವರಾಜು ಅವರ ನೇತೃತ್ವದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ಮಾಡಿದರು 
ಕೊಳ್ಳೇಗಾಲ ತಾಲ್ಲೂಕಿನ ಲಕ್ಕರಸನ ಪಾಳ್ಯ ಗ್ರಾಮದಲ್ಲಿ ಅಕ್ರಮವಾಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದ ಜಾಗವನ್ನು ತಹಶೀಲ್ದಾರ್ ಬಸವರಾಜು ಅವರ ನೇತೃತ್ವದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ಮಾಡಿದರು    

ಕೊಳ್ಳೇಗಾಲ: ತಾಲ್ಲೂಕಿನ ಲಕ್ಕರಸನ ಪಾಳ್ಯ ಗ್ರಾಮದಲ್ಲಿ ಅಕ್ರಮವಾಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದ ಜಮೀನನ್ನು ತಹಶೀಲ್ದಾರ್ ಬಸವರಾಜು ಅವರ ನೇತೃತ್ವದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ಮಾಡಿದರು.

ಗ್ರಾಮದ ರಾಜಶೇಖರ್ 44 ಸೆಂಟ್ ಹಾಗೂ ಲೋಕೇಶ್ 22 ಸೆಂಟ್ ಕೆರೆಯನ್ನು ಒತ್ತುವರಿ ಮಾಡಿಕೊಂಡು ಸುಮಾರು ಐದಾರು ವರ್ಷಗಳಿಂದ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದರು. ಈ ಸಂಬಂಧ ಕುಣಗಳ್ಳಿ ಗ್ರಾಮದ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದನ್ನು ಪರಿಗಣಿಸಿದ ಲೋಕಾಯುಕ್ತರು ದಾಖಲೆಗಳನ್ನು ಪರಿಶೀಲಿಸಿ ರಾಜಶೇಖರ್ ಹಾಗೂ ಲೋಕೇಶ್ ಇಬ್ಬರು ಸಹ ಕೆರೆಯನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿರುವುದು ಸಾಬೀತಾಯಿತು. ಈ ಹಿನ್ನೆಲೆ ಕೂಡಲೇ ತೆರುವು ಮಾಡಬೇಕು ಎಂದು ತಹಶೀಲ್ದಾರ್ ಅವರಿಗೆ ಲೋಕಾಯುಕ್ತರು ಸೂಚನೆ ನೀಡಿದ್ದರು. ಅದರ ಹಿನ್ನೆಲೆ ತಹಶೀಲ್ದಾರ್ ಬಸವರಾಜು, ಸರ್ವೆ ಅಧಿಕಾರಿಗಳು ಹಾಗೂ ಪಿಡಿಒ ಶಿವಮೂರ್ತಿ ಹಾಗೂ ಇತರೆ ಸಿಬ್ಬಂದಿಗಳು ಸರ್ವೆ ನಡೆಸಿ ಒತ್ತುವರಿ ಕಾರ್ಯಾಚರಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಬಸವರಾಜು, ‘ಲೋಕೇಶ್ ಹಾಗೂ ರಾಜಶೇಖರ್ ಎಂಬವರು ಲಕ್ಕರಸನ ಪಾಳ್ಯ ಗ್ರಾಮದ ಕೆರೆಯನ್ನು ಒತ್ತುವರಿ ಮಾಡಿಕೊಂಡು ಸುಮಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರು. ಲೋಕಾಯುಕ್ತರ ಆದೇಶದ ಮೇರೆಗೆ ಇಂದು ಕಾರ್ಯಾಚರಣೆ ಮಾಡುತ್ತಿದ್ದೇವೆ’ ಎಂದರು.

‘ಈಗ ಗಡಿ ಗುರುತು ಮಾಡಿದ್ದೇವೆ. ಕೆರೆ ಜಾಗವನ್ನು ಬಳಸಿಕೊಂಡು ಕಬ್ಬು ಬೆಳೆದಿದ್ದಾರೆ ಇನ್ನು ಎರಡು ತಿಂಗಳ ನಂತರ ಕಬ್ಬನ್ನು ಕಟಾವು ಮಾಡಿಕೊಂಡು ಕೆರೆ ಜಾಗವನ್ನು ಬಿಡುತ್ತೇವೆ ಎಂಬುದಾಗಿ ಇಬ್ಬರು ಸಹ ತಿಳಿಸಿದ್ದಾರೆ. ಹಾಗಾಗಿ ಅವರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದೇವೆ. ಎರಡು ತಿಂಗಳು ಆದ ನಂತರ ಪಂಚಾಯಿತಿ ಅಧಿಕಾರಿಗಳು ಕೆರೆಯ ಸುತ್ತಲೂ ತಂತಿ ಬೇಲಿ ಹಾಕಿ ಕೆರೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಾರೆ. ಸರ್ಕಾರಿ ಜಾಗವನ್ನಾಗಲಿ ಅಥವಾ ಕೆರೆಗಳನ್ನಾಗಲಿ ಒತ್ತುವರಿ ಮಾಡಿಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು ಹಾಗಾಗಿ ಒತ್ತುವರಿ ಮಾಡಿಕೊಳ್ಳುವ ಮೊದಲು ಪ್ರತಿಯೊಬ್ಬರೂ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಇಲ್ಲದಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT