ಗುಂಡ್ಲುಪೇಟೆ: ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸುಲಭವಾಗಿ ಮದ್ಯ ದೊರೆಯುತ್ತಿರುವುದರಿಂದ ಹೆಚ್ಚಿನವರು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ದಿನದ 24 ಗಂಟೆಯೂ ಮದ್ಯ ಸಿಗುತ್ತಿರುವುದರಿಂದ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
‘ಹಣದಾಸೆಗೆ ಗ್ರಾಮದ ಕೆಲವರು ಕಾನೂನು ಬಾಹಿರವಾಗಿ ಬಾರ್‌ಗಳಿಂದ ನಿಗದಿತ ಬೆಲೆಗೆ ಮದ್ಯ ಖರೀದಿಸಿ, ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ’ ಎಂಬುದು ಜನರ ದೂರು. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ದೂರು ನೀಡಿದವರ ವಿವರವನ್ನು ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ನೀಡುತ್ತಿದ್ದು ದೂರುದಾರರಿಗೆ ಜೀವ ಬೆದರಿಕೆ ಸೇರಿದಂತೆ, ಜಗಳ, ವೈಮನಸ್ಸು ಮೂಡುತ್ತಿವೆ’ ಎಂಬುದು ಜನರ ಅಹವಾಲು.
‘ಇಲ್ಟಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಅಬಕಾರಿ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಅಣ್ಣೂರು ಕೇರಿ, ಕೋಡಹಳ್ಳಿ, ಭೀಮನಬೀಡು, ಕೂತನೂರು, ಕೋಟೆಕೆರೆ ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಗಳು ಹಾಗೂ ಪಟ್ಟಣದ ಹಲವು ಕಡೆಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಗ್ರಾಮಗಳ ಮಹಿಳೆಯರು ಆರೋಪಿಸಿದ್ದಾರೆ.
ತಾಲ್ಲೂಕಿನ ಭೀಮನಬೀಡು, ಕೊಡಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಮಿತಿಮೀರಿದೆ. ಯುವಜನ, ವಿದ್ಯಾರ್ಥಿಗಳು ಮದ್ಯದ ಚಟದಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಗಗಳ ವ್ವಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಮಹಿಳೆಯರು ದೂರಿದರು.
ತಾಲ್ಲೂಕಿನ ಬೀಮನಬೀಡು, ಕೂತನೂರು, ಕೊಡಹಳ್ಳಿ, ಹಂಗಳ, ಕೋಟೆಕೆರೆ, ವಡ್ಡಗೆರೆ, ಎಲಚೆಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ಒದೊಂದು ಗ್ರಾಮದಲ್ಲಿ ಕನಿಷ್ಠ 4 ರಿಂದ 5 ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನುಮತಿ ಪಡೆದ ಮದ್ಯದಂಗಡಿಯ ಮಾಲೀಕರೇ ಅಕ್ರಮಕ್ಕೆ ಸಾಥ್ ನೀಡಿದ್ದು ಸುತ್ತಮುತ್ತಲಿನ ಹಳ್ಳಿಗಳಿಗೆ ಮದ್ಯ ಸಾಗಣೆ ಮಾಡುತ್ತಿದ್ದಾರೆ.
‘ಕೂಲಿ ಕಾರ್ಮಿಕರು, ಬಡವರು ದುಡಿಮೆಯ ಬಹುಪಾಲು ಹಣವನ್ನು ಮದ್ಯ ಪಾನಕ್ಕೆ ಖರ್ಚು ಮಾಡುತ್ತಿದ್ದು, ಸಂಸಾರದಲ್ಲಿ ಕಲಹಗಳು ಹೆಚ್ಚುತ್ತಿವೆ. ಮದ್ಯ ವ್ಯವಸನಕ್ಕಾಗಿ ಸಾಲ ಮಾಡಿ ಮರುಪಾವತಿ ಮಾಡಲಾಗದೆ ಕುಟುಂಬಗಳು ಬೀದಿಪಾಲಾಗುತ್ತಿವೆ’ ಎಂದು ರೈತ ಸಂಘದ ಮುಖಂಡ ಬೀಮನಬೀಡು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
‘ಕಾನೂನು ಬಾಹಿರ ಮದ್ಯಮಾರಾಟದಿಂದ ಗ್ರಾಮಗಳಲ್ಲಿ ಸಾಮರಸ್ಯ ಹಾಗೂ ಸೌಹಾರ್ದ ವಾತಾವರಣ ಮರೆಯಾಗುತ್ತಿದೆ. ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ದಿನೇದಿನೇ ಪರಿಸ್ಥಿತಿ ಹದಗೆಡುತ್ತಿದೆ. ದೂರು ನೀಡಿದರೂ ಕ್ರಮ ಕೈಗೊಳ್ಳದ ಪರಿಣಾಮ ಗ್ರಾಮಸ್ಥರು ಬೇಸತ್ತಿದ್ದಾರೆ ’ ಎಂದು ಗ್ರಾಮಸ್ಥ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಮಿನಲ್ ಪ್ರಕರಣ
‘ತಾಲ್ಲೂಕಿನ ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರು ನೀಡಿದವರ ಹೆಸರು ಗೌಪ್ಯವಾಗಿಟ್ಟು ತನಿಖೆ ನಡೆಸುವಂತೆ ತಿಳಿಸಲಾಗುವುದು’ ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.