ADVERTISEMENT

ಮದ್ಯ ಅಕ್ರಮ ಮಾರಾಟ: ಸದಸ್ಯರ ದೂರು

ಎಸ್ಸಿ-ಎಸ್ಟಿ ಉಪ ವಿಭಾಗದ ಮಟ್ಟದ ಜಾಗೃತಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 8:34 IST
Last Updated 7 ನವೆಂಬರ್ 2025, 8:34 IST
ಕೊಳ್ಳೇಗಾಲ ನಗರದಲ್ಲಿ ಗುರುವಾರ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು
ಕೊಳ್ಳೇಗಾಲ ನಗರದಲ್ಲಿ ಗುರುವಾರ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು   

ಕೊಳ್ಳೇಗಾಲ: ಎಸ್.ಸಿ., ಎಸ್.ಟಿ. ಸಮುದಾಯದವರು ವಾಸಿಸುವ ಗ್ರಾಮ , ಬಡಾವಣೆ  ಹಾಗೂ   ಹಾಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಎಸ್‌.ಸಿ‌‌ ಹಾಗೂ ಎಸ್.ಟಿ ದೌರ್ಜನ್ಯ ಪ್ರಕರಣಗಳ ಜಾಗೃತಿ ಸಮಿತಿ ಸದಸ್ಯರು ದೂರಿದರು.

ನಗರದಲ್ಲಿ ಗುರುವಾರ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ-ಎಸ್ಟಿ ಉಪ ವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಈ ಅಹವಾಲು ನೀಡಿದರು.

ಸಮಿತಿ ಸದಸ್ಯೆ ಕೇತಮ್ಮ ಮಾತನಾಡಿ, ತೆಳ್ಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಚಪ್ಪಾಜಿ ನಗರದಲ್ಲಿ ಸೋಲಿಗ ಸಮುದಾಯದಕ್ಕೆ ಸೇರಿದ ವ್ಯಕ್ತಿ ಮದ್ಯ ಅಕ್ರಮ ಮಾರಾಟದ ಅಂಗಡಿಯಲ್ಲಿ ಮದ್ಯ ಕೇಳಿದ ವಿಚಾರದಲ್ಲಿ ಮೇಲ್ವರ್ಗದ ವ್ಯಕ್ತಿ ಆತನ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸ್ ಪ್ರಕರಣ  ದಾಖಲಾಗಿದೆ ಎಂದರು.

ಸಮಿತಿ ಸದಸ್ಯ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯದ ಜನರು ವಾಸಿಸುವ ಗ್ರಾಮಗಳಿಗೆ ಬಾರ್‌ಗಳಿಂದಲೇ ಮದ್ಯ ಸರಬರಾಜು ಆಗುತ್ತಿದೆ. ಅತಿಯಾದ ಮದ್ಯ ಸೇವನೆಯಿಂದ ಅನಾರೋಗ್ಯಕ್ಕೆ ಸಿಲುಕುತ್ತಿದ್ದಾರೆ. ಗಲಾಟೆ ಸ್ವಾಸ್ಥ್ಯ ಕೆಡುತ್ತಿದೆ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಮಾತನಾಡಿ, ‘ಹಳ್ಳಿಗಳಿಗೆ ರಿಕ್ಷಾ, ಕಾರುಗಳ ಮೂಲಕ ಮದ್ಯ ಸರಬರಾಜು ಆಗುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಳ್ಳೂರು ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟದ ದೂರಿನ ಮೇರೆಗೆ ಪರಿಶೀಲಿಸಿ ಕ್ರಮವಹಿಸಿದ್ದೇನೆ. ಆದರೂ ಸಂಪೂರ್ಣವಾಗಿ ನಿಂತಿಲ್ಲ’ ಎಂದರು.

ಸಿಪಿಐ ಶಿವಮಾದಯ್ಯ ಮಾತನಾಡಿ, ಮದ್ಯ ಅಕ್ರಮ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮವಹಿಸಲಾಗುತ್ತಿದೆ. ಮನೆ ಮನೆ ಪೊಲೀಸ್ ಕಾರ್ಯಕ್ರಮ ನಡೆಯುತ್ತಿದ್ದು ಮನೆಗೆ ಬಂದ ಪೊಲೀಸರಿಗೆ ಮದ್ಯ ಅಕ್ರಮ ಮಾರಾಟದ ಬಗ್ಗೆ ದೂರನ್ನು ಸಲ್ಲಿಸಬಹುದು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಮಾತನಾಡಿ, ಅಬಕಾರಿ ಮತ್ತು ಪೊಲೀಸ್ ಇಲಾಖೆ ಮದ್ಯ ಅಕ್ರಮ ಮಾರಾಟ ದಂಧೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.

ಸ್ಮಶಾನ, ರಸ್ತೆ ಒತ್ತುವರಿ: ಸದಸ್ಯ ಸಿದ್ದರಾಜು ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯ ಸ್ಮಶಾನಗಳು ಹಾಗೂ ಸ್ಮಶಾನ ರಸ್ತೆಗಳು ಒತ್ತುವರಿ ಆಗುತ್ತಿದೆ. ಪಂಚಾಯಿತಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.  ತಹಶೀಲ್ದಾರ್ ಬಸವರಾಜು ಪ್ರತಿಕ್ರಿಯಿಸಿ, ಸ್ಮಶಾನ ಜಾಗ ಹಾಗೂ ರಸ್ತೆಯನ್ನು ಪಂಚಾಯಿತಿಯಿಂದ ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು.

ಯಳಂದೂರು ಗ್ರೇಡ್‌–2 ತಹಶೀಲ್ದಾರ್ ಶಿವರಾಜು , ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ,  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

‘ಸುಳ್ವಾಡಿ ಸಂತ್ರಸ್ತರಿಗೆ ನಿವೇಶನ ನೀಡಿ’

ಸಮಿತಿ ಸದಸ್ಯ ಸಿದ್ದರಾಜು ಮಾತನಾಡಿ ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತು ಮಾಡಿದ್ದರು. ಸಂತ್ರಸ್ತರಿಗೆ ಹಂಚಿಕೆ ಮಾಡಿಲ್ಲ.   ಪ್ರಕರಣ ಜರುಗಿ 6 ವರ್ಷ ಕಳೆದಿದೆ ಎಂದರು. ಸಂಸತ್ರಸ್ತರಿಗೆ ಶೀಘ್ರ ನಿವೇಶನ ಹಂಚಿಕೆ ಮಾಡುವಂತೆ ಎಸಿ ದಿನೇಶ್ ಕುಮಾರ್ ಮೀನಾ  ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.