ಚಾಮರಾಜನಗರ: ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವೇ ಬದಲಾಗಿದೆ, ದೇಶದಲ್ಲಿ 25 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಡತನ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡುತ್ತ 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿತ್ತು. ನರೇಂದ್ರ ಮೋದಿ ಅವರ 11 ವರ್ಷಗಳ ಅಧಿಕಾರಾವಧಿಯಲ್ಲಿ ಜನರ ಪರಿಸ್ಥಿತಿ ಸುಧಾರಿಸಿದೆ ಎಂದರು.
ದೇಶದಲ್ಲಿ ಬಡತನ ಪ್ರಮಾಣವನ್ನು ತಗ್ಗಿಸಲು ಬೃಹತ್ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಸ್ವಉದ್ಯೋಗ, ವ್ಯಾಪಾರ ವಹಿವಾಟುಗಳಿಗೆ ಉತ್ತೇಜನ ದೊರೆಯುತ್ತಿದೆ. 2014ರವರೆಗೂ ದುರ್ಬಲ ದೇಶವಾಗಿದ್ದ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆದಿದೆ. ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
2047ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣವಾಗಿ ಬಡತನ ನಿವಾರಣೆ ಮಾಡುವ, ಭಾರತವನ್ನು ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಸುವ ಸಂಕಲ್ಪವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ವಿಶ್ವದ ಬಹುಪಾಲು ರಾಷ್ಟ್ರಗಳು ಮೋದಿ ನಾಯಕತ್ವವನ್ನು ಹೊಗಳುತ್ತಿವೆ ಎಂದು ಎನ್.ಮಹೇಶ್ ಹೇಳಿದರು.
13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ, 11 ವರ್ಷ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರೂ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲದಂತೆ ರಾಜಕೀಯ ಜೀವನ ನಡೆಸುತ್ತಿರುವ ಪ್ರಧಾನಿ ಮೋದಿ ಜನ್ಮದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಅ.2ರವರೆಗೆ ನಿರಂತರವಾಗಿ ಸೇವಾ ಚಟುವಟಿಕೆಗಳು ನಡೆಯಲಿವೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ ಕುಮಾರ್ ಮಾತನಾಡಿ, ಮೋದಿ ಅವರ ಸ್ವದೇಶಿ ವಸ್ತು ಬಳಕೆ ಸಂಕಲ್ಪಕ್ಕೆ ಪೂರಕವಾಗಿ ಸ್ಥಳೀಯವಾಗಿ ಉತ್ಪಾದಿಸಿರುವ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಲಾಗಿದೆ. ಅಂಗವಿಕಲರ ಬದುಕಿಗೆ ಪೂರಕವಾಗುವಂತೆ ವೀಲ್‌ಚೇರ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.
ವಿಶೇಷ ಪೂಜೆ: ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಮುಖಂಡರು ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು. ನಂತರ ಮಾರಿಗುಡಿ ಮುಂಭಾಗ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮಾರಾಟ, ರಕ್ತದಾನ, ಕಣ್ಣಿನ ತಪಾಸಣೆ ಶಿಬಿರಗಳು ನಡೆದವು. 300 ಮಕ್ಕಳಿಗೆ ಸ್ಪೆಟರ್, 80 ಬೀದಿಬದಿ ವ್ಯಾಪಾರಿಗಳಿಗೆ ಛತ್ರಿ, 12 ಅಂಗವಿಕಲರಿಗೆ ವೀಲ್‌ಚೇರ್ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಎಸ್.ಬಾಲರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾ ಅಧ್ಯಕ್ಷ ಸುರೇಶ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣ ರಾಜು, ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಚೂಡಾ ಮಾಜಿ ಅಧ್ಯಕ್ಷ ಆರ್.ಸುಂದರ್, ಮುಖಂಡರಾದ ಬಾಲಸುಬ್ರಹ್ಮಣ್ಯಂ, ಕುಲಗಾಣ ಶಾಂತಮೂರ್ತಿ, ಮಂಗಲ ಶಿವಕುಮಾರ್, ಡಾ.ಎ.ಆರ್.ಬಾಬು, ಮಂಜುನಾಥ ಪ್ರಸನ್ನ, ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಕಾಡಹಳ್ಳಿ ಕುಮಾರ್, ಶಿವುವಿರಾಟ್ ಸೇರಿದಂತೆ ಹಲವರು ಇದ್ದರು.
- ‘ಸಿದ್ದರಾಮಯ್ಯ ದರ್ಪ’
ಮೈಸೂರು ಅರಸರ ಸಂಬಂಧವಿಲ್ಲದ ಚಾಮರಾಜನಗರದಲ್ಲಿ ದಸರಾ ಉತ್ಸವ ಮಾಡುವುದಿಲ್ಲ ಎಂದು ದರ್ಪ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಚಾಮರಾಜ ಒಡೆಯುರ್ ಜನಿಸಿದ ಜನನ ಮಂಟಪ ಅರಸರು ಕಟ್ಟಿಸಿದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನ ನಗರದಲ್ಲಿರುವುದು ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲವೇ ಎಂದು ಜಿಲ್ಲಾಧ್ಯಕ್ಷ ನಿರಂಜನ ಕುಮಾರ್ ಪ್ರಶ್ನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.