ADVERTISEMENT

ಯಳಂದೂರು: ತೆಂಗು, ಕಂಗಿನ ನಡುವೆ ಕಾಫಿ ಘಮಲು

10 ಎಕರೆಯಲ್ಲಿ ಬೆಳೆ ಸಂಯೋಜನೆಯಿಂದ ಆದಾಯ ಪಕ್ಕ; ನಿರ್ವಹಣೆ ಸುಲಭ

ಎನ್.ಮಂಜುನಾಥಸ್ವಾಮಿ
Published 6 ನವೆಂಬರ್ 2025, 5:25 IST
Last Updated 6 ನವೆಂಬರ್ 2025, 5:25 IST
ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಹೊರವಲಯದಲ್ಲಿರುವ ಕಾಫಿ ತೋಟದಲ್ಲಿ ಪ್ರಗತಿಪರ ರೈತ ಜೆ.ಮಲ್ಲೇಶ್
ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಹೊರವಲಯದಲ್ಲಿರುವ ಕಾಫಿ ತೋಟದಲ್ಲಿ ಪ್ರಗತಿಪರ ರೈತ ಜೆ.ಮಲ್ಲೇಶ್   

ಯಳಂದೂರು: ಒಂದು ಕಡೆ ಕಾಫಿ ಕೊಯ್ಲು, ಮತ್ತೊಂದೆಡೆ ಅಡಿಕೆ ಕಟಾವು, ಋತುಮಾನಕ್ಕೆ ಅನುಗುಣವಾಗಿ ಎಳನೀರು, ತೆಂಗಿನ ಕಾಯಿ ವ್ಯಾಪಾರ ಬೇರೆ...

'ಈ ವರ್ಷ ಎಲ್ಲ ಬೆಳೆಗಳ ಸಮತೋಲನ ಸರಿಯಾಗಿದ್ದು, ಕೃಷಿ ಬದುಕಿನ ನಂಬಿಕೆ ಕೈ ಬಿಟ್ಟಿಲ್ಲ’ ಎಂದು ತಾಲ್ಲೂಕಿನ ಯಗರಂಬಳ್ಳಿ ಗ್ರಾಮದ ರೈತ ಜೆ.ಮಲ್ಲೇಶ್ ಹೇಳಿದರು.

 ಕೃಷಿಯಲ್ಲಿ ಇವರು ಹಲವು ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದು, ವಾಣಿಜ್ಯ ಬೆಳೆಯತ್ತ ಆಸಕ್ತಿ ವಹಿಸಿದ್ದಾರೆ. ಮೂರು ದಶಕಗಳಿಂದ ತೋಟಗಾರಿಕೆ ಹಾಗೂ ಸಾಂಬಾರ ಕೃಷಿಯನ್ನು ಮಾಡುತ್ತಿದ್ದಾರೆ. ವರ್ಷಪೂರ್ತಿ ವರಮಾನ ಮೂಲಗಳನ್ನು ಸೃಷ್ಟಿಸಿಕೊಂಡಿರುವುದು ವಿಶೇಷ. ಬೆಲೆ ಹಾಗೂ ಬೇಡಿಕೆಗಳ ಏರಿಳಿತದ ನಡುವೆ ತೆಂಗು, ಕಂಗು ಹಾಗೂ ಕಾಫಿ ಮಾರಾಟ ಮಾಡುತ್ತಿದ್ದು, ಪ್ರಗತಿಪರ ರೈತ ಅಭಿದಾನಕ್ಕೆ ಪಾತ್ರರಾಗಿದ್ದಾರೆ.

ADVERTISEMENT

‘ಹತ್ತು ಎಕರೆಯಲ್ಲಿ 400 ತೆಂಗು, 4 ಸಾವಿರ ಅಡಿಕೆ ಸಸಿ ನೆಟ್ಟಿದ್ದೇನೆ. ಭೂಮಿಯಲ್ಲಿ ಕಳೆ ನಿಯಂತ್ರಿಸಲು ತೆಂಗು, ಕಂಗಿನ ನಡುವೆ 4 ಸಾವಿರ ಅರೇಬಿಕಾ ಕಾಫಿ ಗಿಡಗಳನ್ನು ಬೆಳೆಸಿದ್ದೇನೆ. ಮಧ್ಯದಲ್ಲಿ ಸಪೋಟ, ಮಾವು ಹಾಗೂ ಕಾಳುಮೆಣಸು ಬಳ್ಳಿ ಹಬ್ಬಿಸಿದ್ದೇನೆ. ಈ ಬೆಳೆ ಉತ್ಪನ್ನಗಳು ನಿರಂತರವಾಗಿ ಆದಾಯ ತಂದುಕೊಡುತ್ತಿವೆ. ಮಾರುಕಟ್ಟೆಯ ಬೆಲೆ ಆಧರಿಸಿ ಮಾರಾಟ ಮಾಡಿದರೆ, ಖರ್ಚು-ವೆಚ್ಚ ಕಳೆದು ಶೇ 40 ಆದಾಯ ಕೈಸೇರುತ್ತದೆ’ ಎಂಬುದು ಮಲ್ಲೇಶ್ ಅನುಭವದ ಮಾತು.

ವನ್ಯಜೀವಿ ನಿಯಂತ್ರಣ ಅಗತ್ಯ: ಕಾಡಂಚಿನ ಪ್ರದೇಶಗಳ ತೋಟಗಳ ಸುತ್ತಲೂ ಚಿರತೆ, ನವಿಲು, ಕೋತಿ, ಹೆಬ್ಬಾವು ಕಾಟ ಇದೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಹೆಚ್ಚು ಖರ್ಚು ಮಾಡಬೇಕಿದೆ. ಎಕರೆ ವಿಸ್ತೀರ್ಣಕ್ಕೆ ಸೋಲಾರ್ ಫೆನ್ಸ್ ಅಳವಡಿಸಿದ್ದು, 5 ಬೋರ್‌ವೆಲ್‌ಗಳ ಮೂಲಕ ಸ್ಪ್ರಿಂಕ್ಲರ್‌ಗಳನ್ನು ಜೋಡಿಸಿ ಎಲ್ಲ ಬೆಳೆಗಳಿಗೆ ನೀರು ಪೂರೈಸಲಾಗುತ್ತದೆ.

ತೋಟಗಾರಿಕಾ ಬೆಳೆಗಳು ಆರೇಳು ವರ್ಷದ ನಂತರ ಫಸಲು ಕೊಡಲು ಆರಂಭಿಸುತ್ತವೆ, ಹಾಗಾಗಿ, ತೋಟ ಅಭಿವೃದ್ಧಿ ಪಡಿಸುವ ಮೊದಲು ರೈತರು ಮಾಸಿಕ ಹಾಗೂ ವಾರ್ಷಿಕವಾಗಿ ವೆಚ್ಚ ಸರಿದೂಗಿಸಲು ಹಣ್ಣು-ತರಕಾರಿಗಳನ್ನು ಬೆಳೆಯಲು ಆದ್ಯತೆ ನೀಡಬೇಕು. ಮನೆ ಬಳಕೆಗೂ ಆಹಾರೋತ್ಪನ್ನಗಳು ಸಿಗುವಂತೆ ಯೋಜನೆ ರೂಪಿಸಿಕೊಳ್ಳಬೇಕು’ ಎಂದು ಮಲ್ಲೇಶ್ ತಿಳಿಸಿದರು.

ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಮಲ್ಲೇಶ್ ಅವರ ಕಾಫಿ ತೋಟದಲ್ಲಿ ಬೆಳೆಯಲಾದ ಕಾಫಿ ಬೀಜಗಳು

ಬೆಳೆ ಸಂಯೋಜನೆಗೆ ಆದ್ಯತೆ ನೀಡಿ: ‘ವಾರ್ಷಿಕ 30 ರಿಂದ 40 ಸಾವಿರ ತೆಂಗು 25 ಕ್ವಿಂಟಲ್ ಕಾಫಿ ಮತ್ತು 25 ಕ್ವಿಂಟಲ್ ಅಡಿಕೆ ಸಂಗ್ರಹವಾಗುತ್ತದೆ. ಗುತ್ತಿಗೆ ಜಮೀನಿನಲ್ಲಿ ಬಾಳೆ ಕಬ್ಬು ಬೆಳೆ ತೆಗೆಯುತ್ತಿದ್ದು ವಿವಿಧ ಕಾರಣಗಳಲಿಂದ ಒಟ್ಟಾರೆ ಬೆಳೆಗಳಲ್ಲಿ ವಾರ್ಷಿಕ ಶೇ 20ರಷ್ಟು ಇಳುವರಿ ಕುಸಿಯುತ್ತದೆ. ಕೃಷಿ ವೆಚ್ಚದಲ್ಲಿ ಶೇ 10 ಏರಿಕೆ ಕಂಡುಬರುತ್ತದೆ. ಖರ್ಚು ವೆಚ್ಚಗಳನ್ನು ಕಳೆದು ವರಮಾನ ಲೆಕ್ಕಹಾಕಿದರೆ ಕನಿಷ್ಠ 5 ಲಕ್ಷ  ವಾರ್ಷಿಕ ವರಮಾನ ನಿರೀಕ್ಷಿಸಬಹುದು. ಈ ವರ್ಷ ತೆಂಗು ಮತ್ತು ಅಡಿಕೆ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಿದೆ. ನೇಂದ್ರ ಬಾಳೆ ಮತ್ತು ಕಬ್ಬು ಧಾರಣೆ ಕುಸಿತವಾಗಿದೆ. ಹಾಗಾಗಿ ಅನ್ನದಾತರು ಬೆಳೆ ಸಂಯೋಜನೆಗಳೊಂದಿಗೆ ಕೃಷಿ ಕಾಯಕದಲ್ಲಿ ತೊಡಗಬೇಕು. ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎನ್ನುತ್ತಾರೆ ರೈತ ಮಲ್ಲೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.