ADVERTISEMENT

ಜಿಲ್ಲೆಯಾದ್ಯಂತ ಸರಳ ಯೋಗ ದಿನ- ಒತ್ತಡ, ಜಂಜಾಟಗಳಿಗೆ ಯೋಗ ಮದ್ದು: ಎಂ. ರಾಮಚಂದ್ರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 2:20 IST
Last Updated 22 ಜೂನ್ 2021, 2:20 IST
ಜಿಲ್ಲಾಡಳಿತ ಭವನದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು
ಜಿಲ್ಲಾಡಳಿತ ಭವನದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು   

ಚಾಮರಾಜನಗರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಸರಳವಾಗಿ, ಕೋವಿಡ್‌ ನಿಯಮ ಪಾಲನೆಯ ಮೂಲಕ ಆಚರಿಸಲಾಯಿತು.

ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮವನ್ನು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ದೈನಂದಿನ ಬದುಕಿನಲ್ಲಿ ಎದುರಾಗುವ ಮಾನಸಿಕ ಗೊಂದಲ, ಜಂಜಾಟಗಳಿಗೆ ಯೋಗ ಮದ್ದು. ಯೋಗ ಜೀವನದ ಒಂದು ಭಾಗವಾಗವಾದರೆ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು. ಯೋಗಾಭ್ಯಾಸ ಮಾಡುವುದರ ಮೂಲಕ ಪ್ರತಿಯೊಬ್ಬರು ಸ್ವಾಸ್ಥ್ಯ ಜೀವನ ನಡೆಸಬಹುದು’ ಎಂದರು.

ADVERTISEMENT

‘ಯೋಗಕ್ಕೆ ತನ್ನದೇ ಆದ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಯೋಗಕ್ಕೆ ಅಂತಹ ಶಕ್ತಿ ಇದೆ’

ಜಗತ್ತಿನಾದ್ಯಂತ ನಮ್ಮ ಭಾರತ ಸಂಸ್ಕೃತಿ ಪ್ರತೀಕವಾದ ಯೋಗವನ್ನು ಆಚರಿಸುತ್ತಿರುವುದು ಸಂತಸದ ವಿಷಯ ಎಂದು ರಾಮಚಂದ್ರ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್‌ ನಾರಾಯಣರಾವ್ ಅವರು ಮಾತನಾಡಿ ‘ಯೋಗ ದಿನನಿತ್ಯ ಜೀವನದ ಅಭ್ಯಾಸವಾಗಬೇಕು. ಜನರಲ್ಲಿ ದೈಹಿಕ ಶಕ್ತಿಯ ಕೊರತೆ ಕಾಣುತ್ತಿದೆ. ಪ್ರತಿಯೊಬ್ಬರೂ ಯೋಗ ಮಾಡಿ ತಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡರೆ ಯಾವುದೇ ರೀತಿಯ ರೋಗರುಜಿನಗಳು ಸುಳಿಯುವುದಿಲ್ಲ’ ಎಂದರು.

ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಯೋಗ ಮಾಡುವ ಮೂಲಕ ಗಮನಸೆಳೆದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಸುಜಾತ, ನೆಹರು ಯುವ ಕೇಂದ್ರದ ರಾಜೇಶ್ ಕಾರಂತ ಇನ್ನಿತರರು ಇದ್ದರು.

ಪೊಲೀಸ್‌ ಇಲಾಖೆಯ ವತಿಯಿಂದ ಚಾಮರಾಜನಗರ ಜಿಲ್ಲಾ ಸಶಸ್ತ್ರ ಕೇಂದ್ರದ ಆವರಣದಲ್ಲಿ ಯೋಗ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನದಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.