ADVERTISEMENT

ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರ ಸುಸಜ್ಜಿತ ಈಜು ಕೊಳ: ಎ.ಆರ್‌.ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:00 IST
Last Updated 20 ಜನವರಿ 2026, 2:00 IST
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಎರಡು ದಿನಗಳ ರಾಜ್ಯ ಮಟ್ಟದ ಕಿರಿಯ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‌ಶಿಪ್‌ಗೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಎರಡು ದಿನಗಳ ರಾಜ್ಯ ಮಟ್ಟದ ಕಿರಿಯ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‌ಶಿಪ್‌ಗೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು   

ಚಾಮರಾಜನಗರ: 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ನೀಡುವಂತೆ ಕೇಂದ್ರ ಸರ್ಕಾರ ಒಲಿಂಪಿಕ್ ಸಂಸ್ಥೆಗೆ ಮನವಿ ಮಾಡಿಕೊಂಡಿದೆ. ರಾಜ್ಯದಲ್ಲೂ ಕ್ರೀಡಾಕ್ಷೇತ್ರದ ಬೆಳವಣಿಗೆ ನಿಟ್ಟಿನಲ್ಲಿ ಕ್ರೀಡಾಕೂಟಗಳ ಆಯೋಜನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು  ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಕಿರಿಯ ಬಾಲಕ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ ಶಿಪ್‌ಗೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದಾರೆ. ಕ್ರೀಡಾ ಮತ್ತು ಯುವ ಸಬಲೀಕರಣ ಖಾತೆ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಅಗತ್ಯ ಸೌಲಭ್ಯಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಕ್ರಿಯಾಯೋಜನೆ ತಯಾರಿಕೆಗೆ ಶ್ರಮಿಸಲಾಗುವುದು ಎಂದರು.

ADVERTISEMENT

2030ರಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿದೆ. ಹಾಗೆಯೇ 2036ಕ್ಕೆ ದೇಶದಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಸಲು ಕೇಂದ್ರ ಸರ್ಕಾರ ಮನವಿ ಮಾಡಿದೆ. ದೇಶ ಹಾಗೂ ರಾಜ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಬೆಳೆಯಬೇಕು ಎಂದು ಶುಭ ಕೋರಿದರು.

ಕ್ರೀಡಾ ಕ್ಷೇತ್ರದ ಸಾಧನೆಗೆ ಪ್ರತಿಯಾಗಿ ಜಿಲ್ಲೆಯ ಮೂವರಿಗೆ ಏಕಲವ್ಯ ಪ್ರಶಸ್ತಿ ಲಭಿಸಿದೆ. ಈಚೆಗೆ ನಡೆದ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಸಿದ್ಧಯ್ಯನಪುರ ಗ್ರಾಮದ ಚಂದನ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಅಗತ್ಯ ಕ್ರೀಡಾ ತರಬೇತಿ ಹಾಗೂ ಸೌಲಭ್ಯಗಳು ದೊರೆತರೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಲಿದ್ದಾರೆ. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸದೃಢತೆಗೆ ಬಹಳ ಮುಖ್ಯ ಎಂದು ಕೃಷ್ಣಮೂರ್ತಿ ಹೇಳಿದರು.

ಅಸೋಸಿಯೇಷನ್ ಉಪಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿದ್ದು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಎಂದರು.

ಅಸೋಸಿಯೇಷನ್ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶಾಶ್ವತವಾದ ಕ್ರೀಡಾ ಅಂಕಣಗಳನ್ನು ನಿರ್ಮಾಣ ಮಾಡಬೇಕು, ಕ್ರೀಡಾಪಟುಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು, ಕ್ರೀಡಾ ಪರಿಕರಗಳ ವ್ಯವಸ್ಥೆ ಮಾಡಬೇಕು, ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗೆ ಸಿಂಥೆಟಿಕ್ ಮ್ಯಾಟ್ ಅಳವಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಉದ್ಯಮಿ ಶ್ರೀನಿಧಿ ಕುದರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಖಜಾಂಚಿ ಮಹದೇವು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುದರ್ಶನ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಮಲ್ಲಪ್ಪ, ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ, ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್, ಅಸೋಸಿಯೇಷನ್ ಅಧ್ಯಕ್ಷ ಎಂ.ವಿಮಲ್ ರಾಜ್, ಪ್ರಧಾನ ಕಾರ್ಯದರ್ಶಿ ಡಿ.ಮಲ್ಲೇಶ್, ಗಿರೀಶ್ ಪೊಲೀಸ್, ಹೇಮಂತ್, ರಾಜೀವ್, ಮಂಜುನಾಥ್ ಹರದನಹಳ್ಳಿ, ಮೈಕಲ್, ಯಶವಂತ, ಲೋಕೇಶ್, ನವೀನ್, ಮನೋಜ್, ಕ್ರೀಡಾಪಟುಗಳು ಇದ್ದರು.

ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡದ ಆಟಗಾರ್ತಿಯರು ಪ್ರದರ್ಶನ ನೀಡುತ್ತಿರುವುದು 

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕಾಮನ್‌ವೆಲ್ತ್, ಒಲಿಂಪಿಕ್‌ನಲ್ಲಿ ಉತ್ತಮ ಪ್ರದರ್ಶನದ ಭರವಸೆ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಶಾಸಕರಿಗೆ ಮನವಿ

ಫಲಿತಾಂಶ ಆಳ್ವಾಸ್ ‘ಎ’ ತಂಡವು 35–06 35–05 ಪಾಯಿಂಟ್‌ಗಳ ನೇರ ಸೆಟ್‌ಗಳಿಂದ ರಾಜರಾಜೇಶ್ವರಿ ತಂಡವನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ರಾಜರಾಜೇಶ್ವರಿ ‘ಎ‘ ತಂಡ 35–30 35–20 ನೇರ ಸೆಟ್‌ಗಳಿಂದ ಚಿತ್ರದುರ್ಗದ ವಿರುದ್ಧ ಚಾಮರಾಜನಗರ ತಂಡ 35–15 35–7 ನೇರ ಸೆಟ್‌ಗಳಿಂದ ಚಾಮುಂಡೇಶ್ವರಿ ಹೆಬ್ಬಾಳ್ ವಿರುದ್ಧ ಚಾಮರಾಜನಗರ ‘ಎ’ ತಂಡ 30–35 35–28 35–24 ಪಾಯಿಂಟ್‌ಗಳ ಅಂತರದಿಂದ ಎಚ್‌ಡಿ ಕೋಟೆಯ ಗಂಧದಗುಡಿ ತಂಡದ ವಿರುದ್ಧ  ಜಯ ಸಾಧಿಸಿತು. ಬಾಲಕಿಯರ ವಿಭಾಗ: ಆಳ್ವಾಸ್ ‘ಬಿ’ ತಂಡ 35–13 35–7 ನೇರ ಸೆಟ್‌ಗಳಿಂದ ಚಾಮುಂಡೇಶ್ವರಿ ಹೆಬ್ಬಾಳ್ ತಂಡದ ವಿರುದ್ಧ ಆಳ್ವಾಸ್ ‘ಎ’ ತಂಡವು 35–8 35–9 ಪಾಯಿಂಟ್‌ಗಳ ನೇರ ಸೆಟ್‌ಗಳಿಂದ ಮೈಸೂರು ಮಹಾರಾಣಿ ತಂಡವನ್ನು ಮಣಿಸಿತು. ವಿಜೇತ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು. ಮಂಗಳವಾರ ನಿರ್ಣಾಯಕ ಸುತ್ತಿನ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.