ADVERTISEMENT

International Yoga Day | ಚಾಮರಾಜನಗರ ಜಿಲ್ಲೆಯಲ್ಲಿ ಯೋಗ ದಿನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2023, 5:25 IST
Last Updated 21 ಜೂನ್ 2023, 5:25 IST
ಚಾಮರಾಜನಗರ ಜಿಲ್ಲೆಯಾದ್ಯಂತ ಬುಧವಾರ 9ನೇ ಅಂತರರಾಷ್ಟ್ರೀಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಚಾಮರಾಜನಗರ ಜಿಲ್ಲೆಯಾದ್ಯಂತ ಬುಧವಾರ 9ನೇ ಅಂತರರಾಷ್ಟ್ರೀಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.    

ಚಾಮರಾಜನಗರ: ಗಡಿ ಜಿಲ್ಲೆಯಾದ್ಯಂತ ಬುಧವಾರ 9ನೇ ಅಂತರರಾಷ್ಟ್ರೀಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲಾ ಕೇಂದ್ರದಲ್ಲಿ ಆಯುಷ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಪ್ರಧಾನ ಕಾರ್ಯಕ್ರಮ ನಡೆದರೆ, ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಯೋಗಾಭ್ಯಾಸ ನಡೆಯಿತು.

ಬೆಳಿಗ್ಗೆ ಏಳು ಗಂಟೆಗೆ ಯೋಗ ಪಟುಗಳು, ಯೋಗಾಸಕ್ತರು ವಿವಿಧ ಆಸನಗಳನ್ನು ಮಾಡಿದರು.

ADVERTISEMENT

ಆಯುಷ್ ಇಲಾಖೆ ಮತ್ತು ಜಿಲ್ಲಾಡಳಿತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನ ಕಾರ್ಯಕ್ರಮ ಆಯೋಜಿಸಿತ್ತು. 2000 ದಿಂದ 3000 ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಮಂಗಳವಾರ ಸಂಜೆ ಸುರಿದ ಮಳೆಯಿಂದಾಗಿ ಕ್ರೀಡಾಂಗಣದಲ್ಲಿ ‌ನೀರು ನಿಂತಿದ್ದ ಕಾರಣ ಕೊನೆಗಳಿಗೆಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ (ನಂದಿ ಭವನ) ಕಾರ್ಯಕ್ರಮ ಏರ್ಪಡಿಸಿತ್ತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ‌ ಎಸ್.ಕಾತ್ಯಾಯಿನಿದೇವಿ, ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್ ಸೇರಿದಂತೆ ಹಲವು ಅಧಿಕಾರಿಗಳು ಯೋಗಾಸನಗಳನ್ನು ಮಾಡಿದರು.

ಪ್ರಕೃತಿಯೊಂದಿಗಿನ ಸಂಬಂಧ ಗಟ್ಟಿಗೊಳಿಸಬೇಕಿದೆ: ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, 'ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧ ಕೊಂಡಿ ವಾಯು. ಅದಿಲ್ಲದಿದ್ದರೆ ನಾವಿಲ್ಲ. ಏನೇ ಸಾಧನೆ ಮಾಡಬೇಕಾದರೂ, ಹಣ ಸಂಪಾದನೆ ಮಾಡಬೇಕಾದರೂ ಮೊದಲು ನಾನು ಇರಬೇಕು. ಅದಕ್ಕೆ ವಾಯು ಬೇಕು. ನಾವು ಗಾಳಿಯನ್ನು ಉಸಿರಾಡುತ್ತೇವೆ. ಹೊರಗಡೆ ಬಿಡುತ್ತೇವೆ. ಆದರೆ, ಇದರ ಬಗ್ಗೆ ನಾವು ಯೋಚಿಸುವುದು ಕಡಿಮೆ' ಎಂದರು.

'ನಾವು ಚೆನ್ನಾಗಿರಬೇಕಾದರೆ ಮನುಷ್ಯ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕು. ಇದಕ್ಕೆ ಯೋಗ, ಧ್ಯಾನ ಅಗತ್ಯ' ಎಂದು ಪ್ರತಿಪಾದಿಸಿದರು.

'ಭೌತಿಕ ವ್ಯಾಯಾಮ ಒಂದು ರೀತಿಯದ್ದಾದರೆ, ಉಸಿರಾಟದ ವ್ಯಾಯಾಮ ಅಥವಾ ಧ್ಯಾನ ಅದು ಮನಸ್ಸು, ಆತ್ಮಕ್ಕೆ ಸಂಬಂಧಿಸಿದ್ದು. ಚಿಕಿತ್ಸೆಯಿಂದ ಗುಣವಾಗದ ಯಾವುದೇ ಕಾಯಿಲೆಯನ್ನು ಧ್ಯಾನದಿಂದ ಗುಣಪಡಿಸಬಹುದು. ಸಂಶೋಧನೆಗಳಿಂದಲೂ ಇದು ಸಾಬೀತಾಗಿದೆ' ಎಂದರು.

'ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದೆ. ಅದರ ಮೂಲವನ್ನು‌ ನಾವು ಹುಡುಕಬೇಕು. ಅದು ನಮ್ಮ ಮನಸ್ಸಿನಲ್ಲಿದೆ. ಧ್ಯಾನದಿಂದ ಸಮಸ್ಯೆ ಮೂಲಕ್ಕೆ ಹೋಗಿ ಅದನ್ನು ಪರಿಹರಿಸಬಹುದು' ಎಂದರು.

'ದಿನದ 24 ಗಂಟೆಗಳ ಕಾಲವೂ ನಾವು ಕೆಲಸ ಮಾಡುತ್ತೇವೆ. ಆದರೆ, ಐದು, ಹತ್ತು ನಿಮಿಷಗಳ ಕಾಲ ನಮಗೆ ಧ್ಯಾನ ಅಥವಾ ಉಸಿರಾಟದ ಬಗ್ಗೆ ನಾವು ಸಮಯ ಮೀಸಲಿಡುವುದಿಲ್ಲ. ದಿನಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಧ್ಯಾನ ಮಾಡಿದರೆ‌ ಸಾಕು. ಮನಸ್ಸು ಅರಳುತ್ತದೆ. 9ನೇ ಯೋಗ ದಿನಾಚರಣೆ ಸಂದರ್ಭದಲ್ಲಿ ನಾವೆಲ್ಲರೂ ಯೋಗ ಧ್ಯಾನದ ಮೂಲಕ ಪ್ರಕೃತಿಯೊಂದಿಗೆ ಸಂಬಂಧ ಗಟ್ಟಿಗೊಳಿಸೋಣ' ಎಂದು ಜಿಲ್ಲಾಧಿಕಾರಿ ರಮೇಶ್ ಹೇಳಿದರು.

ಯೋಗಾಭ್ಯಾಸದಲ್ಲಿ ತೊಡಗಿರುವ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.