ADVERTISEMENT

ಚಾಮರಾಜನಗರ: ಜೆಡಿಎಸ್‌ ಯುವ ಮುಖಂಡರು ಬಿಎಸ್‌ಪಿಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 15:59 IST
Last Updated 5 ಸೆಪ್ಟೆಂಬರ್ 2021, 15:59 IST
ಜೆಡಿಎಸ್‌ನ 25ಕ್ಕೂ ಹೆಚ್ಚು ಯುವ ಮುಖಂಡರು ಚಾಮರಾಜನಗರದಲ್ಲಿ ಭಾನುವಾರ ಬಿಎಸ್‌ಪಿ ಸೇರಿದರು
ಜೆಡಿಎಸ್‌ನ 25ಕ್ಕೂ ಹೆಚ್ಚು ಯುವ ಮುಖಂಡರು ಚಾಮರಾಜನಗರದಲ್ಲಿ ಭಾನುವಾರ ಬಿಎಸ್‌ಪಿ ಸೇರಿದರು   

ಚಾಮರಾಜನಗರ: ಜಾತ್ಯತೀತ ಜನತಾ‌ದಳ (ಜೆಡಿಎಸ್‌) ಯುವ ಘಟಕದ ಮುಖಂಡ ರಾಜೇಶ್ ಮಹಾಜನ್ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಪಕ್ಷ ತೊರೆದು ಭಾನುವಾರ ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್‌ಪಿ) ಸೇರ್ಪಡೆಗೊಂಡರು.

ನಗರದ ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಅವರು, ಎಲ್ಲರನ್ನೂ ಪಕ್ಷದ ಶಲ್ಯ, ಬಾವುಟ ನೀಡಿ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ನಂತರ ಮಾತನಾಡಿದ ಅವರು, ‘ಬಿಎಸ್‌ಪಿಯು ತತ್ವ-ಸಿದ್ಧಾಂತ ಆಧರಿತ ಕಾರ್ಯಕರ್ತರ ಪಕ್ಷ, ಯಾವುದೇ ನಾಯಕ ಅಥವಾ ಮುಖಂಡರನ್ನು ಅವಲಂಬಿಸಿಲ್ಲ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಹಾಗೂ ಸಂವಿಧಾನದ ಯಥಾವತ್ ಜಾರಿಗಾಗಿ ಸಂಘಟನೆ ಗೊಂಡಿರುವ ಒಂದು ಸಿದ್ಧಾಂತ, ಒಂದು ಪಕ್ಷ, ಒಂದು ನಾಯಕತ್ವದ ಅಡಿಯಲ್ಲಿ ಕಾನ್ಶಿರಾಂ ಅವರ ಮಾರ್ಗದರ್ಶನದಲ್ಲಿ ಮಾಯಾವತಿ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕೆ ಬರುವ ಪ್ರತಿಯೊಬ್ಬರನ್ನು ಸ್ವಾಗತಿಸಲಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಪಕ್ಷವು ತನ್ನದೇ ಆದ ನೆಲೆಯನ್ನು ಹೊಂದಿದ್ದು, ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಲಿದೆ. ಕೊಳ್ಳೇಗಾಲ ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಮುಖಂಡರು ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಮುಕ್ತಮನಸ್ಸಿನಿಂದ ಪಕ್ಷಕ್ಕೆ ಸೇರಲಿದ್ದಾರೆ’ ಎಂದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜನವಿರೋಧಿ, ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೀವನವನ್ನು ತೀರಾ ಹೀನಾಯ ಸ್ಥಿತಿಗೆ ತಳ್ಳುತ್ತಿದೆ. ಇದರಿಂದ ಬೇಸತ್ತ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷವು ಸಂವಿಧಾನ ವಿರೋಧಿ ನೀತಿಗಳಿಂದ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಹಾಗಾಗಿ ಜನರು ಬಿಎಸ್‌ಪಿ ಕಡೆ ಒಲವು ಹೊಂದಿದ್ದಾರೆ’ ಎಂದರು.

ಪಕ್ಷದ ಮುಖಂಡರಾದ ನಾಗರಾಜು (ಕಮಲ್), ಜಿಲ್ಲಾ ಉಪಾಧ್ಯಕ್ಷ ಬ್ಯಾಮಮೂಡ್ಲು ಬಸವಣ್ಣ, ಚಾಮರಾಜನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಮಚವಾಡಿ ಪ್ರಕಾಶ್, ಕೊಳ್ಳೇಗಾಲ ಕ್ಷೇತ್ರ ಆದ್ಯಕ್ಷ ಬಾಳಗುಣಸೆ ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ನಗರಸಭಾ ಸದಸ್ಯೆ ಜಯಮೇರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.