ಕೊಳ್ಳೇಗಾಲ: ‘ಮಹಿಳೆಯರ ಮೇಲಿನ ದೌರ್ಜನ್ಯ ಸಮಾಜಕ್ಕೆ ಕಳಂಕವಾಗಿದ್ದು, ದೌರ್ಜನ್ಯ ತಡೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿತಾ ಹೇಳಿದರು.
ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಮಧುವನಹಳ್ಳಿ, ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ಮತ್ತು ರಾಷ್ಟ್ರೀಯ ಲೋಕ್ ಅದಾಲತ್ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಹಿಳೆಯರು ಮನಸ್ಸು ಮಾಡಿದರೆ ಈ ದೇಶವನ್ನೇ ಬದಲಾಯಿಸುವ ಶಕ್ತಿ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ನಿಜಕ್ಕೂ ಇದು ಬೇಸರದ ಸಂಗತಿ. ಮಹಿಳೆಯರು ಸಮಾಜದಲ್ಲಿ ಮುಂದೆ ಬಂದರೆ ಅನಿಷ್ಟ ಪದ್ಧತಿಗಳೆಲ್ಲವನ್ನೂ ತೊಲಗಿಸಬಹುದು. ಮಹಿಳೆಯರ ಮನಸ್ಥಿತಿ ಅರಿಯದೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಲೈಂಗಿಕವಾಗಿ ಹಿಂಸಿಸುವುದು, ಮಹಿಳಾ ದೌರ್ಜನ್ಯವಾಗಿದೆ. ಮಹಿಳೆಯರು ಮೊದಲು ಸಂಘಟಿತರಾಗಬೇಕು. ಅಲ್ಲದೆ, ಮಹಿಳೆಯರು ವಿದ್ಯಾವಂತರಾದರೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬಹುದು. ಸಮಾಜದಲ್ಲಿ ಮಹಿಳಾ ದೌರ್ಜನ್ಯಗಳು ನಡೆಯಬಾರದು. ಸೆಪ್ಟೆಂಬರ್ 14ರಂದು ನ್ಯಾಯಾಲಯದ ಆವರಣದಲ್ಲಿ ಬೃಹತ್ ‘ಲೋಕ್ ಅದಾಲತ್’ ಹಮ್ಮಿಕೊಂಡಿದ್ದು, ಬಾಕಿ ಇರುವ ರಾಜಿಯಾಗಬಹುದಾದ ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕು’ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್, ವಕೀಲರ ಸಂಘದ ಉಪಾಧ್ಯಕ್ಷ ನಿರ್ಮಲ, ಹಿರಿಯ ವಕೀಲ ವೆಂಕಟಾಚಲ, ಗ್ರಾಮ ಪಂಚಾಯಿತಿ ಪಿಡಿಒ ಶೋಭಾರಾಣಿ, ಮುಖ್ಯ ಶಿಕ್ಷಕಿ ಜಯಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.