
ಚಾಮರಾಜನಗರ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೆಎಸ್‌ಎಸ್ ಕಲಾ ಮಂಪಟ, ಜೆಎಸ್‌ಎಸ್ ವಿದ್ಯಾಪೀಠ ಗುರುವಾರ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜೆಎಸ್‌ಎಸ್ ರಂಗೋತ್ಸವದಲ್ಲಿ ಮಾತನಾಡಿದ ಅವರು ‘ಕ್ರೀಡೆಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ, ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವುದರ ಜೊತೆಗೆ ಆರೋಗ್ಯಯುತ ಜೀವನಕ್ಕೆ ಸಹಕಾರಿ’ ಎಂದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿಗಳನ್ನು ಬೆಳೆಸಿಕೊಂಡರೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ತ್ರಿವಿಧ ದಾಸೋಹಕ್ಕೆ ಪ್ರಸಿದ್ಧವಾಗಿರುವ ಜೆಎಸ್‌ಎಸ್ ಸಂಸ್ಥೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲೂ ಶಿಕ್ಷಣ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲರಿಗೂ ಶಿಕ್ಷಣ ಕೈಗೆಟುವಂತೆ ಮಾಡಿರುವ ಜೆಎಸ್‌ಸ್ ಶಿಕ್ಷಣ ದಾಸೋಹಕ್ಕೆ ಒತ್ತು ನೀಡಿದೆ ಎಂದರು.
ಇಂದಿನ ಪಠ್ಯಕೇಂದ್ರಿತ ಶಿಕ್ಷಣದಿಂದ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯವಿಲ್ಲ. ಹಾಗಾಗಿ, ಶಿಕ್ಷಣದಲ್ಲಿ ರಂಗ ಶಿಕ್ಷಣ ಬಹಳ ಮುಖ್ಯವಾಗಿದೆ. ಮಕ್ಕಳ ಮನೋವಿಕಾಸಕ್ಕೆ ಹಾಗೂ ವಿಶ್ವಪ್ರಜೆಯಾಗಿ ರೂಪುಗೊಳ್ಳಲು ಪೂರಕವಾಗಿದೆ. ಜಗತ್ತಿನ ಮೇಲಿರುವ ಅತ್ಯಂತ ತೂಕದ ಹಾಗೂ ಘನತೆಯ ಕ್ಷೇತ್ರ ರಂಗಭೂಮಿಯಾಗಿದೆ ಎಂದರು.
ಹಿಂದೆ ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಆಧುನಿಕತೆಯ ಭರಾಟೆ ಹೆಚ್ಚಾದ ಬಳಿಕ ನಾಟಕಗಳನ್ನು ನೋಡುವ ವ್ಯವಧಾನ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಕ್ಕಳಿಗೆ ರಂಗ ಶಿಕ್ಷಣದ ರುಚಿ ಹತ್ತಿಸಿದರೆ ಭವಿಷ್ಯದಲ್ಲಿ ರಂಗಭೂಮಿ ಉಳಿಯುತ್ತದೆ ಎಂದರು.
ರಂಗೋತ್ಸವ ಸಂಯೋಜಕ ಚಂದ್ರಶೇಖರ್ ಆಚಾರ್ ಮಾತನಾಡಿ, 2011ರಲ್ಲಿ ಮೈಸೂರಿನಲ್ಲಿ ಆರಂಭವಾದ ಜೆಎಸ್‌ಎಸ್ ರಂಗೋತ್ಸವ ನಿರಂತರವಾಗಿ ನಡೆದುಕೊಂಡು ಬಂದಿದ್ದು 1800 ಮಕ್ಕಳು ತರಬೇತಿ ಪಡೆದುಕೊಂಡಿದ್ದು ಯಶಸ್ವಿಯಾಗಿ ರಂಗ ಪ್ರದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ರಂಗಭೂಮಿಯ ಬಗ್ಗೆ ಅರಿವು ಹಾಗೂ ರಂಗ ಶಿಕ್ಷಣ ನೀಡುವ ಕೆಲಸದಲ್ಲಿ ಜೆಎಸ್‌ಎಸ್ ಸಂಸ್ಥೆ ನಿರತವಾಗಿದೆ ಎಂದರು.
ಮಕ್ಕಳು ಪಠ್ಯದ ಜೊತೆಗೆ ಸಾಂಸ್ಕೃತಿಕ ಕಲೆಗಳ ಪರಿಚಯವಾಗಬೇಕು ಎಂಬ ಉದ್ದೇಶದಿಂದ ರಂಗೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮೂರು ದಿನಗಳ ರಂಗೋತ್ಸವದಲ್ಲಿ ಮೊದಲ ದಿನ ‘ಷರೀಫ’, ಎರಡನೇ ದಿನ ‘ಧಾಂ..ಧೂಂ..ಸುಂಟರಗಾಳಿ’, ಮೂರನೇ ದಿನ ‘ಅಂಗಭಂಗದ ರಾಜ್ಯದಲ್ಲಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ನಟಿ ರೇಖಾ ರೋಹಿತ್ ಮಾತನಾಡಿದರು. ಜೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ ಉಪಸ್ಥಿತರಿದ್ದರು.
‘ಬದಲಾದ ಗ್ರಾಮೀಣ ಭಾರತ’
ಹಿಂದಿನ ಗ್ರಾಮೀಣ ಭಾರತ ಸಂಪೂರ್ಣ ಬದಲಾಗುತ್ತಿದ್ದು ಹಳ್ಳಿಗಳು ನಗರಗಳಿಗೆ ಕೊಂಡಿಗಳಾಗಿದ್ದು ಕೃಷಿ ಭೂಮಿಗಳಲ್ಲಿ ರಿಯಲ್ ಎಸ್ಟೇಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಶ್ರಮ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ವರ್ಷಕ್ಕೊಮ್ಮೆ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳು ನಡೆಯುತ್ತಿಲ್ಲ. ರಂಗಾಸಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ರಂಗಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಗಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಮಲ್ಲಿಕಾರ್ಜುನಸ್ವಾಮಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.