ADVERTISEMENT

ಕೊಳ್ಳೇಗಾಲ | ಕನ್ನಡ ಗಡಿ ಭವನ ಕಾಮಗಾರಿ ಅಪೂರ್ಣ: ವ್ಯಾಪಕ ಟೀಕೆ

ಅಧಿವೇಶನದಲ್ಲಿ ಸಚಿವರನ್ನು ಪ್ರಶ್ನಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:53 IST
Last Updated 29 ಜನವರಿ 2026, 6:53 IST
ಕೊಳ್ಳೇಗಾಲ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಆರ್ ಕೃಷ್ಣಮೂರ್ತಿ ಪ್ರಜಾವಾಣಿ ಪತ್ರಿಕೆ ಹಿಡಿದು ಪ್ರದರ್ಶನ ಮಾಡಿದರು
ಕೊಳ್ಳೇಗಾಲ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಆರ್ ಕೃಷ್ಣಮೂರ್ತಿ ಪ್ರಜಾವಾಣಿ ಪತ್ರಿಕೆ ಹಿಡಿದು ಪ್ರದರ್ಶನ ಮಾಡಿದರು   

ಕೊಳ್ಳೇಗಾಲ: ಇಲ್ಲಿನ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 18 ವರ್ಷಗಳಿಂದ ಕನ್ನಡ ಗಡಿ ಭವನದ ಕಾಮಗಾರಿ ನಡೆಯುತ್ತಿದ್ದು, ಒಂದೂವರೆ ದಶಕ ಕಳೆದರೂ ಸಹ ಪೂರ್ಣಗೊಳ್ಳದ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಸಚಿವರನ್ನು ಪ್ರಶ್ನಿಸಿದರು.

ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮೂಲಕ ಸದನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಲ್ಲಿ ಶಾಸಕರು ಪ್ರಶ್ನೆ ಕೇಳಿದರು.

ಕನ್ನಡ ಗಡಿ ಭವನ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿದರೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲೀ ಸೂಕ್ತ ರೀತಿಯಲ್ಲಿ ಗಮನ ಹರಿಸುತ್ತಿಲ್ಲ ಎಂಬ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಹಾಗಾಗಿ, ಭವನ ಕಾಮಗಾರಿ ಪೂರ್ಣಗೊಳಿಸಲು ₹95 ಲಕ್ಷ ವಿಶೇಷ ಅನುದಾನ ಅಗತ್ಯವಿರುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಸಚಿವರು ಕೂಡ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಇಲಾಖೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಸರ್ಕಾರದ ಹಾಗೂ ಶಾಸಕರಾದ ನಮ್ಮ ಪ್ರಯತ್ನಕ್ಕೆ ಬೆಲೆ ಸಿಗುವುದಾದರೂ ಹೇಗೆ? ಕನ್ನಡ ಗಡಿ ಭವನ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಆ ಸ್ಥಳ ಅನೈತಿಕ ತಾಣವಾಗಿದೆ. ಆದ್ದರಿಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿರುವುದಾಗಿ ಶಾಸಕರು ತಿಳಿಸಿದರು. 

ಈ ಬಗ್ಗೆ ಪ್ರಜಾವಾಣಿ ಜ.24 ರ ಸಂಚಿಕೆಯಲ್ಲಿ ‘15 ವರ್ಷ ಕಳೆದರೂ ಮುಗಿಯದ ಕೆಲಸ’ ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಶಾಸಕರು ವಿಧಾನಸಭೆಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ವರದಿಯನ್ನು ವಿಧಾನಸಭಾ ಸಭಾಧ್ಯಕ್ಷರಿಗೆ ತೋರಿಸಿ ಕನ್ನಡ ಗಡಿ ಭವನದ ಬಗ್ಗೆ ಮಾತನಾಡಿದರು.

ಶಾಸಕರ ಈ ಪ್ರಶ್ನೆಗೆ ಸದನದಲ್ಲಿ ಪ್ರತಿಕ್ರಿಸಿದ ಸಚಿವರು, ಈ ಕೂಡಲೇ ಆರ್ಥಿಕ ಇಲಾಖೆಯಿಂದ ಬಾಕಿ ಉಳಿದಿರುವ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳ ಮೂಲಕ ನಿವಾರಿಸಿ ಕೂಡಲೇ ಭವನದ ಕಾಮಗಾರಿ ಪೂರ್ಣಗೊಳಿಸಿಕೊಡುವುದಾಗಿ ಭರವಸೆ ನೀಡಿದರು.

ನಂತರ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ, ಶಾಸಕರು ವಿಶೇಷ ಅನುದಾನ ಮಂಜೂರು ಮಾಡಿಸಿದ್ದಾರೆ. ಸಚಿವರಾದ ನೀವು ಆರ್ಥಿಕ ಇಲಾಖೆಯಿಂದ ಎದುರಾಗಿರುವ ಕೆಲ ನ್ಯೂನ್ಯತೆ ಸರಿಪಡಿಸುವುದಾಗಿ ಹೇಳುತ್ತಿದ್ದೀರಿ. ಆದರೆ, ನಿಮ್ಮ ಅಧಿಕಾರಿಗಳು ಏಕೆ ಸೂಕ್ತ ಸಮಯದಲ್ಲಿ ಕೆಲಸ ಆರಂಭಿಸಿಲ್ಲ. ಈ ಬಗ್ಗೆ ಅಗತ್ಯ ಗಮನ ಹರಿಸಿ ಎಂದು ಸಚಿವರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.