
ಚಾಮರಾಜನಗರ/ಯಳಂದೂರು: ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ತಗ್ಗಿಸಲು ಹಾಗೂ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜಿಲ್ಲೆಯ 11 ಶಾಲೆಗಳನ್ನು ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾಥಮಿಕ, ಪ್ರೌಢ ಹಾಗೂ 12ನೇ ತರಗತಿವರೆಗೂ ಶಿಕ್ಷಣ ನೀಡುತ್ತಿರುವ ಶಾಲೆಗಳು ಮುಂದಿನ ಶೈಕ್ಷಣಿಕ ಸಾಲಿನಿಂದ ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೇರಲಿವೆ.
ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ ಜಿಪಿಯುಸಿ, ಹರವೆಯ ಜಿಎಚ್‌ಎಸ್, ಅಮಚವಾಡಿಯ ಜಿಎಚ್‌ಪಿಎಸ್, ಹರದನಹಳ್ಳಿಯ ಜಿಎಚ್‌ಎಸ್, ಚಾಮರಾಜನಗರದ ಜಿಪಿಯುಸಿ ಬಾಲಕಿಯರ ಶಾಲೆ, ಇರಸವಾಡಿಯ ಜಿಎಚ್‌ಎಸ್, ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರದ ಜಿಎಚ್‌ಎಸ್‌ಪಿಎಸ್, ಭೀಮನಮಡುವಿನ ಜಿಎಚ್‌ಪಿಎಸ್.
ಹನೂರು ತಾಲ್ಲೂಕಿನ ಕೌದಳ್ಳ ಜಿಎಚ್‌ಪಿಎಸ್, ಕುಡ್ಲೂರಿನ ಜಿಎಚ್‌ಎಸ್ ಹಾಗೂ ಜಿಎಚ್‌ಪಿಎಸ್, ಕೊಳ್ಳೇಗಾಲದ ಜಿಎಸ್‌ವಿಕೆ ಜ್ಯೂನಿಯರ್ ಕಾಲೇಜು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೇರಲಿವೆ. ಜಿಲ್ಲೆಯಲ್ಲಿ ಈಗಾಗಲೇ 4 ಕೆಪಿಎಸ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.
ಸಾಮಾನ್ಯವಾಗಿ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ, ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವಾದ ಎಲ್‌ಕೆಜಿಯಿಂದ 12ನೇ ತರಗತಿವರೆಗೂ ಒಂದೇ ಸೂರಿನಡಿ ಶಿಕ್ಷಣ ಪಡೆಯಲು ಅವಕಾಶ ಇದೆ.
ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಪ್ರೌಢಶಾಲೆ ಸೇರಿದಂತೆ ಪದವಿಪೂರ್ವ ಶಿಕ್ಷಣ ಪಡೆಯಲು ಬೇರೆ ಶಾಲೆಗಳಿಗೆ, ಬೇರೆ ಊರುಗಳಿಗೆ ತೆರಳುವ ಅನಿವಾರ್ಯತೆ ಇರುವುದಿಲ್ಲ. ಸಮೀಪದಲ್ಲಿ ಶಾಲೆ, ಕಾಲೇಜು ಇಲ್ಲ ಎಂಬ ಕಾರಣಕ್ಕೆ ಶಾಲೆ ತೊರೆಯುತ್ತಿದ್ದ ಮಕ್ಕಳಿಗೆ ಕೆಪಿಎಸ್ ಶಾಲೆಗಳು ವರದಾನವಾಗಲಿವೆ ಎನ್ನುತ್ತಾರೆ ಡಿಡಿಪಿಐ ಚಂದ್ರ ಪಾಟೀಲ್.
ಕೆಪಿಎಸ್ ಶಾಲೆಗಳಲ್ಲಿ ಖಾಸಗಿ ಶಾಲೆಗಳಂತೆ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯುವುದು ಹಾಗೂ ಎಲ್‌ಕೆಜೆ, ಯುಕೆಜಿ ಕಲಿಕೆಗೂ ಅವಕಾಶ ಇರುವುದರಿಂದ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಪೋಷಕರು ಕೂಡ ಕೆಪಿಎಸ್ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಉತ್ಸಾಹ ತೋರಿಸಿದ್ದರಿಂದ ಹೆಚ್ಚುವರಿಯಾಗಿ ಕೆಪಿಎಸ್ ಶಾಲೆಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.
ಅದರಂತೆ, 11 ಕೆಪಿಎಸ್ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ ಆರಂಭವಾಗಲಿದೆ. ಇಂಗ್ಲೀಷ್ ಮಾಧ್ಯಮ ಕಲಿಕೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಎಲ್‌ಕೆಜಿಯಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದ್ವಿಭಾಷೀಯ ವಿಷಯಗಳಲ್ಲಿ ಬೋಧನೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಪಠ್ಯ ಪುಸ್ತಕಗಳನ್ನೂ ವಿತರಿಸಲಾಗುವುದು ಎಂದು ಡಿಡಿಪಿಐ ತಿಳಿಸಿದರು.
ಕೆಪಿಎಸ್ ಶಾಲೆಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ಲಭ್ಯವಾಗಲಿದೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಸಿಗಲಿದೆ. ಈಗಿರುವ ಶಾಲೆಗಳನ್ನೇ ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು–ಚಂದ್ರಪಾಟೀಲ್, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.