ADVERTISEMENT

ದೂರದೃಷ್ಟಿಯ ಆಡಳಿತಗಾರ ಕೆಂಪೇಗೌಡ: ಶಾಸಕ ಎ.ಆರ್.ಕೃಷ್ಣಮೂರ್ತಿ

ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಕೆಂಪೇಗೌಡ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:41 IST
Last Updated 29 ಜುಲೈ 2025, 4:41 IST
ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು
ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವರ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು   

ಚಾಮರಾಜನಗರ: ದೂರದೃಷ್ಟಿಯುಳ್ಳ ಆಡಳಿತಗಾರರಾಗಿದ್ದ ಕೆಂಪೇಗೌಡರು ಸುಂದರ ಬೆಂಗಳೂರು ನಿರ್ಮಾಣ ಮಾಡಿದ ಫಲವಾಗಿ ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಗುರುತಿಸಿಕೊಂಡಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಶಾಸಕರು, ಬೆಂಗಳೂರನ್ನು ಯೋಜನಾಬದ್ಧವಾಗಿ ನಿರ್ಮಿಸಿದದ ಕೆಂಪೇಗೌಡರು ಎಲ್ಲ ಸಮುದಾಯಗಳಿಗೂ ಬದುಕುವ ಅವಕಾಶ ಕಲ್ಪಿಸಿದರು. ನಗರದ ಅಭಿವೃದ್ಧಿಗೆ ಹಲವು ಕೆರೆಗಳನ್ನು ನಿರ್ಮಿಸಿದರು ಎಂದರು.

ಭವಿಷ್ಯದ ಮುನ್ನೋಟವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ನಗರವನ್ನು ನಾಲ್ಕು ದಿಕ್ಕುಗಳಿಗೂ ವಿಸ್ತರಿಸಲು ಗಡಿಗೋಪುರಗಳನ್ನು ನಿರ್ಮಿಸಿದರು. ಪ್ರತಿ ವೃತ್ತಿಯವರಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು, ಇದರಿಂದ ಎಲ್ಲ ಸಮುದಾಯದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು.

ADVERTISEMENT

ನೀರಿನ ಅಭಾವ ಉಂಟಾಗದಂತೆ ಹಲವು ಕೆರೆಗಳನ್ನು ನಿರ್ಮಿಸಿದರು. ಅವರ ದೂರದೃಷ್ಟಿತ್ವದ ಫಲವಾಗಿ ಬೆಂಗಳೂರು ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಕೆಂಪೇಗೌಡರ ಆಡಳಿತದಲ್ಲಿ ವ್ಯಾಪಾರ, ವಾಣಿಜ್ಯ,  ಕೃಷಿ ಕ್ಷೇತ್ರವೂ ಅಭಿವೃದ್ಧಿ ಕಂಡಿತ್ತು. ಬೆಂಗಳೂರನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಶ್ರಮಿಸಿದರು ಎಂದು ಶಾಸಕರು ಸ್ಮರಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಾಡುಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅಂತರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ ಎಂದರು.

ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ವಲಾನಂದನಾಥ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ವೈಜ್ಞಾನಿಕ ಚಿಂತಕನಾಗಿದ್ದು, ದಾರ್ಶನಿಕನಾಗಿ, ಶ್ರೇಷ್ಠ ಸಾಮಂತರಾಗಿದ್ದರು. ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಯಲ್ಲೂ ನಿಷ್ಠೆ ತೋರಿದವರು ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಆರ್.ನರೇಂದ್ರ, ಚೂಡ ಅಧ್ಯಕ್ಷ ಮಹಮ್ಮದ್ ಅಸ್ಗರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಶಾಸಕ ಸಿ.ಪುಟ್ಟರಂಗಶೆಟ್ಟಿ ಆಪ್ತ ಸಹಾಯಕ ಎಸ್.ಎಂ.ರವೀಂದ್ರ, ಗಣಿ ಉದ್ಯಮಿ ಶ್ರೀನಿಧಿ ಕುದರ್, ರೈತ ಮುಖಂಡ ಮೂಡ್ಲುಪುರ ನಾಗರಾಜು, ಕರಿಯನಕಟ್ಟೆ ಜಯಪ್ರಕಾಶ್ ಸೇರಿದಂತೆ ಹಲವರಿಗೆ ನಾಡುಪ್ರಭು ಕೆಂಪೇಗೌಡ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಯನಾ, ನಾಗೇಶ್ ರಾಗಿಮುದ್ದನಹಳ್ಳಿ, ಜಿಲ್ಲಾ ಪಂಚಾಯಿತಿ ಉಪ‌ ಕಾರ್ಯದರ್ಶಿ ಶೃತಿ, ಚಾಮರಾಜನಗರ ವಿವಿ ಕುಲಸಚಿವ ಆರ್.ಲೋಕನಾಥ್, ಮುಖಂಡರಾದ ಎಚ್.ಕೆ.ರಾಮು, ಇ.ಸಿ.ನಿಂಗರಾಜೇಗೌಡ, ಸುಶೀಲಾ ನಂಜಪ್ಪ, ಬ್ರೈಟ್ ಕಾಲೇಜ್ ಅಧ್ಯಕ್ಷ ಯದುನಂದನ್, ಸುರೇಶ್‌ ನಾಯಕ, ದೊಡ್ಡರಾಯಪೇಟೆ ರವಿ ಗೌಡ, ಪಣ್ಯದಹುಂಡಿ ರಾಜು, ಅರುಣ್‌ ಕುಮಾರ್ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.