ADVERTISEMENT

‌ಮಂಗನ ಕಾಯಿಲೆ: ಜಿಲ್ಲೆಯಲ್ಲಿ ಕಟ್ಟೆಚ್ಚರ

ಗುಂಡ್ಲು‍ಪೇಟೆಯ ವಿವಿಧ ಕಡೆಗಳಲ್ಲಿ 2,500 ಡಿಎಂಪಿ ತೈಲ ಬಾಟಲಿ ವಿತರಣೆ: ಡಾ.ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 14:39 IST
Last Updated 2 ಫೆಬ್ರುವರಿ 2019, 14:39 IST
ಗುಂಡ್ಲುಪೇಟೆಯ ಕಾಡಂಚಿನ ಪ್ರದೇಶದಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಾಗೃತಿ ಕಾರ್ಯಕ್ರಮ ನೋಟ
ಗುಂಡ್ಲುಪೇಟೆಯ ಕಾಡಂಚಿನ ಪ್ರದೇಶದಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಾಗೃತಿ ಕಾರ್ಯಕ್ರಮ ನೋಟ   

ಚಾಮರಾಜನಗರ: ‘ಜಿಲ್ಲೆಯಲ್ಲಿ ಮಂಗನಕಾಯಿಲೆಯ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಈಗಾಗಲೇ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ಅವರು ಶನಿವಾರ ಸಂಸದ ಆರ್.ಧ್ರುವನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.

‘ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಎರಡು ಮಂಗಗಳು ಮೃತಪಟ್ಟಿದ್ದವು. ಎಚ್‌.ಡಿ.ಕೋಟೆಯಲ್ಲೂ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿರುವುದರಿಂದ ಜಿಲ್ಲೆಯಲ್ಲಿ ಎಚ್ಚರಿಕೆ ವಹಿಸಲಾಗಿದೆ. ಐದಾರು ವರ್ಷಗಳ ಹಿಂದೆ ಬಂಡೀಪುರದಲ್ಲಿ ಎಂಟು ಜನರಿಗೆ ಸೋಂಕು ತಗುಲಿತ್ತು’ ಎಂದು ಅವರು ಮಾಹಿತಿ ನೀಡಿದರು.

‘ಗುಂಡ್ಲುಪೇಟೆಯ ಗಡಿಭಾಗದಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಅರಣ್ಯ ಸಿಬ್ಬಂದಿಗೆ, ದನಗಾಹಿಗಳು, ಕುರಿಗಾಹಿಗಳಲ್ಲಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ 2,500 ಬಾಟಲಿಗಳಷ್ಟು ಡಿಎಂಪಿ ತೈಲವನ್ನು ವಿತರಿಸಲಾಗಿದೆ. ಕಾಡಿಗೆ ತೆರಳುವವರು ಇದನ್ನು ಹಚ್ಚಿಕೊಂಡು ಹೋದರೆ, ಸೋಂಕು ತಗಲುವುದನ್ನು ತಡೆಯಬಹುದು’ ಎಂದು ಅವರು ವಿವರಿಸಿದರು.

ADVERTISEMENT

ಹೆಚ್ಚು ಕೌಂಟರ್‌ ತೆರೆಯಿರಿ: ಇಲಾಖೆಯ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಅವರು, ‘ಜಿಲ್ಲೆಯ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೆ ಆಯುಷ್ಮಾನ್‌ ಕರ್ನಾಟಕ ಯೋಜನೆಯ ಅಡಿಯಲ್ಲಿ ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7 ಕೌಂಟರ್‌ಗಳಲ್ಲಿ ಕಾರ್ಡ್ ವಿತರಿಸಲಾಗುತ್ತಿದೆ. ಒಂದು ಕೌಂಟರ್‌ನಲ್ಲಿ 100 ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಹಾಗೂ ಶಾಸಕ ಆರ್‌.ನರೇಂದ್ರ, ‘ಏಳು ಕೌಂಟರ್‌ಗಳ ಮೂಲಕ ಜಿಲ್ಲೆಯ ಫಲಾನುಭವಿಗಳಿಗೆ ವಿತರಿಸಲು ಒಂದು ವರ್ಷವೇ ಬೇಕು. ಇನ್ನಷ್ಟು ಕೌಂಟರ್‌ಗಳನ್ನು ತೆರೆಯಬೇಕು. ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ಕಾರ್ಡ್‌ ವಿತರಿಸುವಂತೆ ಆಗಬೇಕು. ಊರುಗಳಿಗೆ ಇಲಾಖೆಯ ಸಿಬ್ಬಂದಿಯೇ ಹೋಗಿ ಕಾರ್ಡ್‌ಗಳನ್ನು ನೀಡುವಂತಾಗಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.