ಕೊಳ್ಳೇಗಾಲ: ನಗರಸಭೆ ಆಡಳಿತ ಮಾಡುವಲ್ಲಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ‘ನಗರಸಭೆಗೆ ಸರಿಯಾದ ಆದಾಯ ಬರುತ್ತಿಲ್ಲ, ಅಧಿಕಾರಿಗಳು ಕಂದಾಯ ವಸೂಲಿಯಾಗಲಿ, ನಗರಸಭೆಗೆ ಸೇರಿದ ಮಳಿಗೆಗಳಲ್ಲಿ ಬಾಡಿಗೆಯನ್ನು ಸರಿಯಾಗಿ ವಸೂಲಿ ಮಾಡುತ್ತಿಲ್ಲ, ಯಾವ ಕೆಲಸ ಮಾಡುತ್ತಿದ್ದೀರಿ ನೀವು’ ಎಂದು ಪ್ರಶ್ನಿಸಿದರು.
ಹೀಗಾದರೆ ನಗರವನ್ನು ಅಭಿವೃದ್ಧಿ ಮಾಡಲು ತುಂಬಾ ಕಷ್ಟಕರವಾಗುತ್ತದೆ ಇನ್ನಾದರೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಲಸ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ಮನೆಗಳಿಗೆ ತೆರಳಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
‘ಅಕ್ರಮ ಖಾತೆ ಮಾಡುವಲ್ಲಿ ನಂ.1’
‘ಇಲ್ಲಿನ ನಗರಸಭೆಯಲ್ಲಿ ಅಧಿಕಾರಿಗಳು ಅಕ್ರಮ ಖಾತೆಗಳನ್ನು ಮಾಡುವಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಸಾರ್ವಜನಿಕರು ಪ್ರತಿನಿತ್ಯ ನಗರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ ಅವರ ಬಳಿ ಎಲ್ಲ ದಾಖಲೆಗಳು ಇದ್ದರೂ ಅಧಿಕಾರಿಗಳು ಖಾತೆ ನೀಡಲು ವಿಳಂಬ ಮಾಡುತ್ತಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕೆಲ ರಾಜಕಾರಣಿಗಳ ಕೈವಾಡದಿಂದ ಪ್ರತಿನಿತ್ಯ ಅಕ್ರಮ ಖಾತೆಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ’ ಎಂದು ಸದಸ್ಯ ದೇವಾನಂದ್ ದೂರಿದರು.
‘ನಗರದಲ್ಲಿ ನಿರ್ಮಾಣವಾಗಿರುವ ಗೌರಿ ಸಿಲ್ಕ್ ಅಂಗಡಿಯವರಿಗೆ ಅನಧಿಕೃತ ಖಾತೆ ಮಾಡಿಸಿಕೊಟ್ಟಿದ್ದಾರೆ. ಅಂಗಡಿ ಮುಂಭಾಗದಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಹೊಸದಾಗಿ ಕಟ್ಟಡ ನಿರ್ಮಾಣವಾಗಿದ್ದರೂ ಯಾವುದೇ ಸೌಲಭ್ಯಗಳನ್ನೂ ಪಡೆದುಕೊಂಡಿಲ್ಲ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೆಲ ಅಧಿಕಾರಿಗಳು ಹಾಗೂ ಸದಸ್ಯರು ಶಾಮೀಲಾಗಿದ್ದಾರೆ. ರಾಜ್ಯದ ಎಲ್ಲಾ ನಗರಸಭೆಗಳಲ್ಲೂ ‘ಎ’ ಖಾತೆ ಹಾಗೂ ‘ಬಿ’ ಖಾತೆ ಉತ್ತಮವಾಗಿ ನಡೆಯುತ್ತಿದೆ. ಆದರೆ ಇಲ್ಲಿ ಯಾವ ಖಾತೆಗಳೂ ಸರಿಯಾಗಿ ಆಗುತ್ತಿಲ್ಲ. ಪ್ರತಿ ಬಾರಿಯ ಸಾಮಾನ್ಯ ಸಭೆಯಲ್ಲೂ ಇದರ ಬಗ್ಗೆ ಚರ್ಚೆಯಾಗುತ್ತಿದೆ. ನಗರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಅವರು ಆರೋಪಿಸಿದರು.
ಶಾಸಕ ಎ.ಆರ್.ಕೃಷ್ಣ ಮೂರ್ತಿ ಮಾತನಾಡಿ, ‘ಇಲ್ಲಿ ನಡೆಯುತ್ತಿರುವ ಅಕ್ರಮ ಖಾತೆಗಳ ಬಗ್ಗೆ ಈಗಾಗಲೇ ನನಗೆ ದೂರುಗಳು ಬಂದಿವೆ. ಅದಲ್ಲದೆ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ 3 ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ನಗರಸಭೆಯಿಂದ ಯಾವುದೇ ಅನುಮತಿಯನ್ನೂ ಪಡೆದಿದುಕೊಂಡಿಲ್ಲ. ಇದಲ್ಲದೆ ನಗರದಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲೂ ಅಕ್ರಮ ನಿವೇಶನ ಹಾಗೂ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಧಿಕಾರಿಗಳು ಏಕೆ ದಾಳಿ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ. ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರು, ಅಧಿಕಾರಿಗಳು ಇದ್ದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ ‘20 ವರ್ಷಗಳಿಂದಲೂ ನಗರದ ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ ಹಾಗೂ ಡಾ. ರಾಜಕುಮಾರ್ ರಸ್ತೆ ವಿಸ್ತರಣೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಹಾಗಾಗಿ ಈ ಎರಡು ರಸ್ತೆಯನ್ನೂ ನನ್ನ ಅವಧಿಯಲ್ಲೇ ಅಭಿವೃದ್ಧಿ ಪಡಿಸಬೇಕೆಂಬ ಪಣತೊಟ್ಟಿದ್ದೇನೆ. ಅದಲ್ಲದೆ ಈಗಾಗಲೇ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ಸುಮಾರು ₹100 ಕೋಟಿಗೂ ಹೆಚ್ಚು ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿ ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದ್ದೇನೆ. ಹಾಗಾಗಿ ಈ ರಸ್ತೆ ವಿಸ್ತರಣೆಯಾಗುತ್ತದೆ ಎಂದು ತಿಳಿದಿದ್ದರೂ ಇಲ್ಲಿನ ಅಧಿಕಾರಿಗಳು ಅಕ್ರಮವಾಗಿ 14 ಖಾತೆಗಳನ್ನು ಮಾಡಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ’ ಎಂದು ಕೆಂಡಮಂಡಲವಾದರು. ಶಾಸಕರು ಹೇಳುತ್ತಿದ್ದಂತೆ ನಗರಸಭೆಯ ಕೆಲ ಸದಸ್ಯರು ಅಧಿಕಾರಿಗಳಿಗೆ ಹಾಗೂ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ವಿಸ್ತರಣೆ ಆಗುವ ವಿಷಯ ತಿಳಿದರೂ ನೀವು ಹೇಗೆ ಖಾತೆ ಮಾಡಿ ಕೊಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.
‘ರಸ್ತೆ ವಿಸ್ತರಣೆ ಆಗುತ್ತದೆ. ಆದರೆ ಸಾಮಾನ್ಯ ಸಭೆಯಲ್ಲಿ ಖಾತೆ ಮಾಡಬೇಡಿ ಎಂಬುದಾಗಿ ಯಾರು ಹೇಳಿಲ್ಲ. ಕಾನೂನುಬದ್ಧವಾಗಿ ಖಾತೆ ಮಾಡಿಕೊಟ್ಟಿದ್ದೇವೆ’ ಎಂದು ಪೌರಾಯುಕ್ತರು ಉತ್ತರಿಸಿದರು. ಇದಕ್ಕೆ ಕೋಪಗೊಂಡ ಶಾಸಕರು ‘ಮನಬಂದಂತೆ ಖಾತೆಗಳನ್ನು ಮಾಡುವುದು ಸರಿಯಲ್ಲ ಈಗಾಗಲೇ ಯಾವ ಅಧಿಕಾರಿಗಳು ಹಾಗೂ ಸದಸ್ಯರು ಏನೆಲ್ಲಾ ಪಡೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದಿದೆ. ಈ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಿ ಉನ್ನತ ಮಟ್ಟದ ತನಿಖೆ ಆಗಿ ಸಂಬಂಧಪಟ್ಟವರಿಗೆ ಶಿಕ್ಷೆ ಆಗಲಿ’ ಎಂದು ಸಾಮಾನ್ಯ ಸಭೆಯಲ್ಲಿ ತನಿಖೆಗೆ ನಿರ್ಣಯ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.