ADVERTISEMENT

ನಗರಸಭೆ ಚುನಾವಣೆಯಲ್ಲಿ ಗೆಲ್ಲುವವವರು ಯಾರು: ಕೌತುಕಕ್ಕೆ ಸೋಮವಾರ ತೆರೆ

ಕೊಳ್ಳೇಗಾಲ ಉಪಚುನಾವಣೆ; ಮತ ಎಣಿಕೆ ಇಂದು 11 ಗಂಟೆಯೊಳಗೆ ಪ್ರಕಟ ಸಾಧ್ಯತೆ

ಅವಿನ್ ಪ್ರಕಾಶ್
Published 30 ಅಕ್ಟೋಬರ್ 2022, 18:09 IST
Last Updated 30 ಅಕ್ಟೋಬರ್ 2022, 18:09 IST
ಕೊಳ್ಳೇಗಾಲ ನಗರಸಭೆ ಕಟ್ಟಡ
ಕೊಳ್ಳೇಗಾಲ ನಗರಸಭೆ ಕಟ್ಟಡ   

ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಏಳು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಅ.31) ಪ್ರಕಟವಾಗಲಿದೆ. 24 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿದ್ದು, ಗೆಲ್ಲುವವರು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣಕ್ಕೆ ಬಿಎಸ್‌ಪಿಯಿಂದ ಗೆದ್ದಿದ್ದ6, 7, 13, 21, 25 ಹಾಗೂ 26ನೇ ವಾರ್ಡ್‌ ಸದಸ್ಯರ ಸದಸ್ಯತ್ವ ಅನರ್ಹವಾಗಿತ್ತು. ಈ ಕಾರಣಕ್ಕೆ ಉಪಚುನಾವಣೆ ನಡೆದಿದೆ.

ಅಂದು ಬಿಎಸ್‌ಪಿ ಅಭ್ಯರ್ಥಿಗಳಾಗಿದ್ದ ಏಳು ಮಂದಿಯ ಪೈಕಿ ಆರು ಮಂದಿ ಬಿಜೆಪಿ ಸೇರಿ, ಅದರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಏಳು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಎಸ್‌ಪಿ ಮೂರು ವಾರ್ಡ್‌ಗಳಲ್ಲಿ, ಜೆಡಿಎಸ್‌, ಎಸ್‌ಡಿಪಿಐ ಹಾಗೂ ಕೆಆರ್‌ಎಸ್‌ ಪಕ್ಷಗಳು ತಲಾ ಒಂದು ವಾರ್ಡ್‌ನಲ್ಲಿ ಸ್ಪರ್ಧಿಸಿವೆ. ನಾಲ್ವರು ಪಕ್ಷೇತರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ADVERTISEMENT

ನ್ಯಾಚನಲ್‌ ಮಿಡ್ಲ್‌ ಸ್ಕೂಲ್‌ನ ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು ಭದ್ರವಾಗಿದ್ದು, ಸೋಮವಾರ ಅಲ್ಲಿಯೇ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಆರಂಭವಾಗಲಿದ್ದು, 11 ಗಂಟೆಯ ಒಳಗೆ ಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಬಿಎಸ್‌ಪಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಶಾಸಕರು, ಮಾಜಿ ಶಾಸಕರು, ಪಕ್ಷದ ಜಿಲ್ಲಾ ಪ್ರಮುಖರೆಲ್ಲರೂ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು.

ಶಾಸಕರಿಗೆ ಪ್ರತಿಷ್ಠೆ: ಅನರ್ಹಗೊಂಡಿದ್ದ ಸದಸ್ಯರೆಲ್ಲರೂ ಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗರು. ಅವರು ಬಿಜೆಪಿಗೆ ತೆರಳಿದ ನಂತರ ಬೆಂಬಲಿಗರು ಕೂಡ ಕಮಲ ಪಾಳಯ ಸೇರಿದ್ದರು. ವಿಧಾನಸಭಾ ಚುನಾವಣೆಯೂ ಹತ್ತಿರದಲ್ಲಿರುವುದರಿಂದ, ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಸಾಬೀತು ಪಡಿಸಲು ತಮ್ಮ ಬೆಂಬಲಿಗರನ್ನು ಗೆಲ್ಲಿಸಲೇ ಬೇಕು ಎಂದು ಭಾರಿ ಕಸರತ್ತು ನಡೆಸಿದ್ದಾರೆ. ಅದು ಫಲ ನೀಡಿದೆಯೇ ಎಂಬುದು ಸೋಮವಾರ ಗೊತ್ತಾಗಲಿದೆ.

ಅಧಿಕಾರದ ಮೇಲೆ ಕಣ್ಣು: 31 ಸದಸ್ಯ ಬಲದ ವಾರ್ಡ್‌ನಲ್ಲಿ ಈವರೆಗೂ 24 ಮಂದಿ ಸದಸ್ಯರಿದ್ದರು. 11 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ನಾಲ್ವರು ಪಕ್ಷೇತರ ಸದಸ್ಯರು ಬೆಂಬಲ ನೀಡಿದ್ದರಿಂದ ಬಹುಮತ ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಉಪ ಚುನಾವಣೆಯ ಬಳಿಕ ನಗರಸಭೆಯ ಅಧಿಕಾರದಲ್ಲಿ ಮುನ್ನಡೆಯಲು ಅದಕ್ಕೆ 17 ಸದಸ್ಯರ ಬೆಂಬಲ ಬೇಕು. ಉಪ ಚುನಾವಣೆಯಲ್ಲಿ ಕನಿಷ್ಠ ಎರಡು ಸ್ಥಾನಗಳಾದರೂ ಅದು ಗೆಲ್ಲಬೇಕು. ಹಾಗಾಗಿ, ಕಾಂಗ್ರೆಸ್‌ ಕೂಡ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು.ಮುಖಂಡರಾದ ಎಸ್‌.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಬಾಲರಾಜು, ಕಾಂಗ್ರೆಸ್‌ ಜಿಲ್ಲಾ ಸಮಿತಿ ಪದಾಧಿಕಾರಿಗಳು ಕೂಡ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು.

ಕಳೆದ ಚುನಾವಣೆಯಲ್ಲಿ ಏಳು ವಾರ್ಡ್‌ಗಳಲ್ಲಿ ಗೆದ್ದಿದ್ದ ಬಿಎಸ್‌ಪಿ ಈ ಬಾರಿ ಮೂರು ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಒಂದು ವಾರ್ಡ್‌ನಲ್ಲಿ (2ನೇ ವಾರ್ಡ್‌) ಎಸ್‌ಡಿಪಿಐ ಅಭ್ಯರ್ಥಿಗೆ ಬೆಂಬಲ ಕೊಟ್ಟಿತ್ತು. ಮಹೇಶ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ಕೊಳ್ಳೇಗಾಲದಲ್ಲಿ ತನ್ನ ಪ್ರಭಾವ ಇನ್ನೂ ಇದೆ ಎಂದು ತೋರಿಸಲು ಈ ಚುನಾವಣೆ ಉತ್ತಮ ವೇದಿಕೆ. ಅದರಲ್ಲಿ ಪಕ್ಷವು ಯಶಸ್ಸು ಕಾಣುತ್ತದೆಯೇ ಎಂದು ನೋಡಬೇಕಿದೆ.

ಬಂದೋಬಸ್ತ್: ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

‘ಮತ ಎಣಿಕೆ ಸಂದರ್ಭದಲ್ಲಿ ಯಾರೂ ಕೂಗಾಡುವಂತಿಲ್ಲ. ವಿಜಯೋತ್ಸವ ಆಚರಿಸುವಂತಿಲ್ಲ. ಮದ್ಯದಂಗಡಿಯನ್ನು ತೆರೆಯುವಂತಿಲ್ಲ’ ಎಂದು ತಹಶೀಲ್ದಾರ್ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಟ್ಟಿಂಗ್ ಭರಾಟೆ ಜೋರು

ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ನಗರದಲ್ಲಿ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಹೋಟೆಲ್‌, ಟೀ ಅಂಗಡಿ, ಬಾರ್‌ಗಳಲ್ಲಿ ಸಾರ್ವಜನಿಕರು ಈ ಬಗ್ಗೆಯೇ ಮಾತನಾಡುತ್ತಿದ್ದು,ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರೇ ಬೆಟ್ಟಿಂಗ್‌ನಲ್ಲಿ ನಿರತರಾಗಿದ್ದಾರೆ ಎನ್ನಲಾಗುತ್ತಿದೆ.

ಈ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕೂಡ ಫಲಿತಾಂಶದ ಬಗ್ಗೆ ಕುತೂಹಲ ಹೊಂದಿದ್ದಾರೆ.

--

ಬಿಜೆಪಿಯ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದ‌ರ ಬಂಡವಾಳ ಈಗ ಬಯಲಾಗಿದೆ. ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.
ಎ.ಆರ್.ಕೃಷ್ಣ ಮೂರ್ತಿ, ಕಾಂಗ್ರೆಸ್‌ ಮುಖಂಡ

7 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ. ಪ್ರತಿಯೊಂದು ವಾರ್ಡ್‌ಗೂ ಭೇಟಿ ನೀಡಿದಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಜೆಪಿ ಆಡಳಿತವನ್ನು ಜನ ಒಪ್ಪಿದ್ದಾರೆ.

–ಎನ್.ಮಹೇಶ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.