ADVERTISEMENT

ಕೊಳ್ಳೇಗಾಲ| ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ: ಬೃಹತ್ ಪ್ರತಿಭಟನೆ

ಕೊಳ್ಳೇಗಾಲದಿಂದ ರಾಜಭವನಕ್ಕೆ ಚಲೋ; ಬಲಗೈ ಸಮುದಾಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:08 IST
Last Updated 20 ಫೆಬ್ರುವರಿ 2026, 2:08 IST
ಒಳ ಮೀಸಲಾತಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕೊಳ್ಳೇಗಾಲ ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು
ಒಳ ಮೀಸಲಾತಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕೊಳ್ಳೇಗಾಲ ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು   

ಕೊಳ್ಳೇಗಾಲ: ಒಳ ಮೀಸಲಾತಿ ಜಾರಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ್ದ 2 ಸಾವಿರಕ್ಕೂ ಹೆಚ್ಚು ಬಲಗೈ ಸಮುದಾಯದವರು ನಗರದ ಎಂ.ಜಿ.ಎಸ್.ವಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮಾವೇಶಗೊಂಡು ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಬಳಿಕ ಪ್ರತಿಭಟನೆಯಲ್ಲಿ ಸಾಗಿ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ಬಂದು ಎಸಿ ದಿನೇಶ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಇದೇ ವೇಳೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ರಮೇಶ್, ‘ದೇಶದ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿಯ ಬಲಗೈ ಸಂಬಂಧಿತ ಜಾತಿಗಳು ಶತಮಾನಗಳಿಂದ ಶಿಕ್ಷಣ, ಉದ್ಯೋಗ ಮತ್ತು ಅಧಿಕಾರಗಳಿಂದ ವಂಚಿತವಾಗಿವೆ’. ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿ ಮೀಸಲಾತಿ ಫಲವಾಗಿ ಒಂದೆರಡು ತಲೆಮಾರುಗಳಷ್ಟೆ ಶಿಕ್ಷಣ ಮತ್ತು ಉದ್ಯೋಗ ಪಡೆದು ಸೀಮಿತ ಪ್ರಗತಿ ಕಂಡಿವೆ. ಆದರೆ, ಜಾತಿವಾದ ಮತ್ತು ಕೋಮುವಾದ ಪ್ರತಿಪಾದಿಸುವ ಕೆಲವರು ಒಳಮೀಸಲಾತಿ ಹೆಸರಿನಲ್ಲಿ ಬಲಗೈ ಸಂಬಂಧಿತ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಬಲಗೈ ಸಮುದಾಯಗಳ ಪರವಾಗಿ ನಿಂತಿಲ್ಲ. ಅನಾದಿ ಕಾಲದಿಂದಲೂ ಸಮುದಾಯದ ಮೇಲೆ ನಿರಂತರ ಅವಮಾನ, ಅನ್ಯಾಯ ನಡೆಯುತ್ತಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದ್ದು ಜಾರಿ ಮಾಡಿದರೆ ಹೋರಾಟ ತೀವ್ರಗೊಳ್ಳಲಿದೆ. ಕೊಳ್ಳೇಗಾಲದಿಂದ ರಾಜಭವನಕ್ಕೆ ಚಲೋ ಹೊರಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರ ಚೋರನಹಳ್ಳಿ ಶಿವಣ್ಣ ಮಾತನಾಡಿ, ‘ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಏಕಪಕ್ಷೀಯ ವರದಿ ನೀಡಿರುವುದು ಅವಾಂತರಗಳಿಗೆ ಕಾರಣವಾಗಿದೆ. ರಾಜ್ಯದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಸಮುದಾಯದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಒಳ ಮೀಸಲಾತಿ ವರದಿ ಜಾರಿಗೊಳಿಸಬಾರದು ಎಂದರು.

ಬಲಗೈ ಸಮುದಾಯಕ್ಕೆ ನ್ಯಾಯ ಕೊಡಬೇಕು, ಸಮುದಾಯದ ಸಚಿವರಾದ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ಹಾಗೂ ಇತರೆ ಶಾಸಕರು ಸಮಾಜಕ್ಕೆ ಅನ್ಯಾಯವಾಗಿದ್ದರೂ ದನಿ ಎತ್ತದಿರುವುದು ಬೇಸರದ ವಿಚಾರ. ನಾಯಕರು ಪ್ರತಿರೋಧ ತೋರದಿದ್ದರೆ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಪುಟ್ಟಸ್ವಾಮಿ, ಎಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹಕಾರ್ಯದರ್ಶಿ ಶಶಿಧರ್, ಖಜಾಂಚಿ ರಾಜೇಶ್, ಮುಖಂಡರಾದ ಅಣಗಳ್ಳಿ ಬಸವರಾಜು, ಕೂಡ್ಲೂರು ಶ್ರೀಧರ್ ಮೂರ್ತಿ, ನಟರಾಜು ಮಾಳಿಗೆ, ಶೇಖರ್ ಬುದ್ಧ, ಸಿದ್ದಪ್ಪಾಜಿ, ಶಂಕರ್ ಚೇತನ್, ದಿಲೀಪ್ ಸಿದ್ದಪ್ಪಾಜಿ, ಮುಳ್ಳೂರು ಕಮಲ್, ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಮುಳ್ಳೂರು ಶಿವಮಲ್ಲು, ಚೇತನ್ ದೊರೆ, ವರದರಾಜು, ಗುರುಮೂರ್ತಿ, ಮಹಿಳಾ ಸಂಘಟನೆಯ ಶಿವಮ್ಮ, ಸಿದ್ದಯ್ಯನಪುರ ಗ್ರಾ.ಪಂ ಮಾಜಿ ಅಧ್ಯಕ್ಷ ಶಶಿಕುಮಾರಿ, ಕನ್ನಡ ಸಂರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಮಾಂಬಳ್ಳಿ ರಾಜೇಶ್ ಮಹಾಜನ್, ಜಗದೀಶ್ ಶಂಕನಪುರ, ಮಹದೇವ ಶಂಕನಪುರ ಇದ್ದರು.

ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ಕೊಳ್ಳೇಗಾಲ ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು
ಕೊಳ್ಳೇಗಾಲ ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿ ತಾಲ್ಲೂಕು ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು.

‘ರಜೆ: ಬಿಗಿ ಭದ್ರತೆ’

ಒಳ ಮೀಸಲಾತಿ ವಿರೋಧಿ ಪ್ರತಿಭಟನೆ ಪೂರ್ವಭಾವಿಯಾಗಿ ಹಲವು ಸಂಘಟನೆಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿನೀಡಿ ಗುರುವಾರ ರಜೆ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ರಜೆ ಕೊಡುವ ಅಧಿಕಾರವನ್ನು ಮುಖ್ಯ ಶಿಕ್ಷಕರ ವಿವೇಚನೆ ನೀಡಿದ್ದರಿಂದ ಬಹುತೇಕ ಶಿಕ್ಷಣ ಸಂಸ್ಥೆಗಳು ರಜೆ ನೀಡಿದ್ದವು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ 2 ಕಿ.ಮೀ ಉದ್ದಕ್ಕೆ ಸಂಚಾರ ದಟ್ಟಣೆ ಎದುರಾಗಿ ವಾಹನ ಸವಾರರು ಪರದಾಡಬೇಕಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.