ADVERTISEMENT

ಕೆಪಿಸಿಸಿ ಸತ್ಯ ಶೋಧನಾ ಸಮಿತಿ ಭೇಟಿ: ಸೋಲಿನ ಪರಾಮರ್ಶೆ

ಕಾಂಗ್ರೆಸ್‌ ಜಿಲ್ಲಾ ಸಮಿತಿ ಕಚೇರಿಯಲ್ಲಿ ಶಾಸಕರು, ಮುಖಂಡರೊಂದಿಗೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 14:35 IST
Last Updated 6 ಆಗಸ್ಟ್ 2019, 14:35 IST
ಸಮಿತಿಯ ಸದಸ್ಯ ಬಸರವಾಜ ರಾಯರೆಡ್ಡಿ ಅವರು ಮಾತನಾಡಿದರು
ಸಮಿತಿಯ ಸದಸ್ಯ ಬಸರವಾಜ ರಾಯರೆಡ್ಡಿ ಅವರು ಮಾತನಾಡಿದರು   

ಚಾಮರಾಜನಗರ: 2018ರ ವಿಧಾನಸಭೆ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಗಳಲ್ಲಿ ಎದುರಾದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ರಚಿಸಿದ್ದ ಸತ್ಯ ಶೋಧನಾ ಸಮಿತಿಯು ಮಂಗಳವಾರ ಜಿಲ್ಲೆಗೆ ಭೇಟಿ ನೀಡಿ ಸ್ಥಳೀಯ ಮುಖಂಡರಿಂದ ಮಾಹಿತಿ ಕಲೆ ಹಾಕಿತು.

ಸಮಿತಿಯ ಸದಸ್ಯರಾದ ವಿ.ಆರ್‌.ಸುದರ್ಶನ್‌, ಬಸವರಾಜ ರಾಯರೆಡ್ಡಿ, ವೀರಕುಮಾರ್‌ ಪಾಟೀಲ್‌ ಮತ್ತು ಆರ್‌.ಧ್ರುವನಾರಾಯಣ ಅವರು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದಿಂದ ಆಯ್ಕೆಯಾಗಿರುವ ಹಾಲಿ, ಮಾಜಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪಕ್ಷದ ಹಿನ್ನಡೆಯ ಬಗ್ಗೆ ಚರ್ಚಿಸಿದರು.

ಎಂಟು ಪ್ರಶ್ನೆಗಳನ್ನು ಹೊಂದಿದ್ದ ಪ್ರಶ್ನಾವಳಿಯನ್ನು ಮುಖಂಡರಿಗೆ ನೀಡಿ‍ಜಿಲ್ಲೆಯಲ್ಲಿ ಪಕ್ಷದ ಸಾಧನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು.

ADVERTISEMENT

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಮಾತಾಡಿದ ವಿ.ಆರ್‌. ಸುದರ್ಶನ್‌, ‘ಪಕ್ಷದ ಸೋಲಿನ ಕುರಿತ ವರದಿಯನ್ನು ಬೆಂಗಳೂರಿನಲ್ಲೇ ಕುಳಿತು ಬರೆಯುವುದು ಬೇಡ. ರಾಜ್ಯದ ಹಾಗೂ ಪ‍ಕ್ಷದ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ ಮುಖಂಡರೊಂದಿಗೆ ಸಮಾಲೋಚನೆ ಮಾಡಿ ವರದಿ ನೀಡಲು ತೀರ್ಮಾನಿಸಿದ್ದೇವೆ. ಈಗಾಗಲೇ ಬೀದರ್‌, ಬೆಳಗಾವಿ, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಸೇರಿದಂತೆ ಹಲವು ಕಡೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ’ ಎಂದರು.

ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ‘ಈ ದೇಶಕ್ಕೆ ಸ್ವಾತಂತ್ರ್ಯಕೊಟ್ಟ ಕಾಂಗ್ರೆಸ್‌ ದೇಶದ ಅಭಿವೃದ್ಧಿಗಾಗಿ ಏನೇನು ಮಾಡಿದೆ ಎಂಬುದು ಈಗಿನ ಯುವ ಪೀಳಿಗೆಗೆ ಗೊತ್ತಿಲ್ಲ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಟ್ಟಿರುವ ಕೊಡುಗೆಯ ಬಗ್ಗೆಯೂ ಮಾಹಿತಿ ಇಲ್ಲ.ಸಂವಹನದ ಅಂತರದಿಂದಾಗಿ ಈ ರೀತಿ ಆಗಿದೆ’ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಧ್ರುವನಾರಾಯಣ ಅವರು ಸೋತಿದ್ದನ್ನು ಪ್ರಸ್ತಾಪಿಸಿದ ವಿ.ಆರ್‌.ಸುದರ್ಶನ್‌ ಅವರು, ‘ಧ್ರುವನಾರಾಯಣ ಅವರು ಗೆಲ್ಲಬಹುದೆಂಬ ವಿಶ್ವಾಸ ಇತ್ತು. ಆದರೆ ಕಡಿಮೆ ಅಂತರದಲ್ಲಿ ಸೋತಿದ್ದು ನೋವು ತಂದಿದೆ. ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದಾರೆ. ಅವರ ಸೋಲು ಕ್ಷೇತ್ರದ ಅಭಿವೃದ್ಧಿಗೆ ಆದ ನಷ್ಟ’ ಎಂದರು.

‘ಅಭಿವೃದ್ಧಿಯೊಂದನ್ನೇ ಮಾನದಂಡವನ್ನಾಗಿಸಿಕೊಂಡು ಜನ ಮತ ಹಾಕುವುದಿಲ್ಲ. ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದರು. ಭ್ರಷ್ಟಾಚಾರ ಮುಕ್ತ ಆಡಳಿತವನ್ನೂ ನೀಡಿದ್ದರು. ಆದರೆ ಚುನಾವಣೆಯಲ್ಲಿ 80 ಸ್ಥಾನಗಳು ಬಂದವು’ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

ಆರ್‌.ಧ್ರುವನಾರಾಯಣ ಅವರು ಮಾತನಾಡಿ, ‘ನನ್ನ ಗೆಲುವಿಗಾಗಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲರೂ ಕೆಲಸ ಮಾಡಿದ್ದಾರೆ. ಆದರೂ ಕಡಿಮೆ ಅಂತರದಿಂದ ಸೋಲಾಯಿತು. ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳು ಪಕ್ಷದ ಹಿಡಿತದಲ್ಲಿವೆ. ಹಾಗಾಗಿ, ಪಕ್ಷವನ್ನು ಮತ್ತೆ ಸಂಘಟನೆ ಮಾಡಬಹುದು’ ಎಂದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ,ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಮುಖಂಡ ಎ.ಆರ್‌.ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.