ADVERTISEMENT

ದಿವ್ಯ ಎಂಬ ಯೋಗ ಸಾಧಕಿ

ರಾಷ್ಟ್ರೀಯ ಮಟ್ಟದ ಯೋಗಪಟು, ಹಲವು ಪಂದ್ಯಾವಳಿಯಲ್ಲಿ ಗೆಲುವಿನ ಮಾಲೆ

ರವಿ ಎನ್‌
Published 8 ಮೇ 2019, 19:46 IST
Last Updated 8 ಮೇ 2019, 19:46 IST
ಯೋಗದಲ್ಲಿ ನಿರತರಾಗಿರುವ ಡಿ.ಆರ್.ದಿವ್ಯ 
ಯೋಗದಲ್ಲಿ ನಿರತರಾಗಿರುವ ಡಿ.ಆರ್.ದಿವ್ಯ    

ಚಾಮರಾಜನನರ: ಯೋಗ ಎಂದಾಗ ತಕ್ಷಣ ನೆನಪಿಗೆ ಬರುವುದು ಕ್ಲಿಷ್ಗಕರ ಆಸನಗಳು. ಆರಂಭದಲ್ಲಿ ಅಭ್ಯಾಸ ಮಾಡುವ ಆಸನಗಳು ಸುಲಭ ಎಂದು ಕಂಡು ಬಂದರೂ ನಂತರ ಅದು ಕ್ಲಿಷ್ಟವಾಗುತ್ತಾ ಹೋಗುತ್ತದೆ. ಮನಸ್ಸು ಮಾಡಿದರೆ ಹೆಣ್ಣುಮಕ್ಕಳೂ ಯೋಗದಲ್ಲಿ ಪರಿಣತಿ ಸಾಧಿಸಬಹುದು ಎಂಬುದು ನಿರೂಪಿಸಿದ್ದಾರೆ ನಗರದಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಅಂತಿಮ ವರ್ಷದ ಎಂಕಾಂ ವಿದ್ಯಾರ್ಥಿನಿ ಡಿ.ಆರ್.ದಿವ್ಯ.

ಯೋಗದಲ್ಲೇ ಸಾಧನೆ ಮಾಡುತ್ತಿರುವ ದಿವ್ಯ ಅವರು ಈಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯ, ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದ ಹಲವು ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ ಕೀರ್ತಿ ಗಳಿಸಿದ್ದಾರೆ.

ಆರು ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ದಿವ್ಯ ಅವರಿಗೆ ಯೋಗದಲ್ಲಿ ಆಸಕ್ತಿ ಮೂಡಿದ್ದು ಪಿಯುಸಿಯಲ್ಲಿ ಇರುವಾಗ. ಉಪನ್ಯಾಸಕರು ಅವರನ್ನು ಯೋಗ ಕಲಿಕೆಗೆ ಪ್ರೇರೇಪಿಸಿದರು.

ADVERTISEMENT

2013ರಲ್ಲಿ ಮೈಸೂರಿನ ಮಹಾಜನ ಕಾಲೇಜಿನಲ್ಲಿ ನಡೆದವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದರು. ಆ ನಂತರ ಬಳಿಕ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು 3ನೇ ಸ್ಥಾನ ಗಳಿಸಿದರು. ಈಗ2018–19ನೇ ಸಾಲಿನಲ್ಲಿ ಚೆನ್ನೈಮದ್ರಾಸ್ವಿಶ್ವವಿದ್ಯಾಲಯದಲ್ಲಿ ಅಸೋಷಿಯೇಷನ್‌ ಆಫ್‌ ಇಂಡಿಯಾದಿಂದ ನಡೆದ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಮಟ್ಟದಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

2013ರಲ್ಲಿ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಸ್ಪರ್ಧೆ, ಪಿಯುಸಿ 2ನೇ ವರ್ಷ 2014ರಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿ 4ನೇ ಸ್ಥಾನ. ಪದವಿಯಲ್ಲಿ 3 ವರ್ಷ ಮೈಸೂರು ವಿ.ವಿ ನಡೆಸಿದಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. 2014–15 ಹಾಗೂ 2016–17ನೇ ಸಾಲಿನಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯ, 2016–17ರಲ್ಲಿ ಜಿಂದಾಲ್‌ನಲ್ಲಿ ನಡೆದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

‘ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುವ ಹಾದಿಯಲ್ಲಿ ಮುನ್ನಗ್ಗಬೇಕು. ಯೋಗ, ಪುರುಷರಿಗಿಂತಲೂ ಹೆಚ್ಚು ಮಹಿಳೆಯರಿಗೆಅಗತ್ಯವಿದೆ. ಆರೋಗ್ಯ, ಏಕಾಗ್ರತೆಗೆಯೋಗ ಮಾಡಬೇಕು. ಪ್ರತಿ ದಿನ 1 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಸ್ಪರ್ಧೆಗೆ 15ರಿಂದ 20 ದಿನಗಳಿರುವಾಗ ಹೆಚ್ಚುವರಿ ಅಭ್ಯಾಸ ನಡೆಸುತ್ತೇನೆ’ ಎಂದು ದಿವ್ಯ ಹೇಳಿದರು.

‘ಕ್ರೀಡಾ ಕೋಟಾದಡಿ ಉನ್ನತ ಪದವಿ ಸೇರಲು ಯೋಗ ಸಹಕಾರಿಯಾಯಿತು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ವಿರಳ. ಹೆಚ್ಚಿವರು ಓದಿನಲ್ಲೇ ನಿರತರಾಗುತ್ತಾರೆ. ಕ್ರೀಡೆಗಳಲ್ಲಿ ಭಾಗವಹಿಸುವುದಿಲ್ಲ. ಮನೆಯಲ್ಲಿ ಮದುವೆ ಮಾಡುತ್ತಾರೆ. ಮುಂದೆ ನಾನು ಏನು ಸಾಧನೆ ಮಾಡಿದರೂ ವ್ಯರ್ಥ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮುಂದಿನ ಭವಿಷ್ಯ ಹೀಗೆಯೇ ಆಗುತ್ತದೆ ಎಂದು ಹೇಳುವುದು ಕಷ್ಟ. ಆದ್ದರಿಂದ ಉನ್ನತ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಇರುವ ಹೆಣ್ಣು ಮಕ್ಕಳ ಸಾಧನೆಗೆ ಪೋಷಕರು ಉತ್ತೇಜನ ನೀಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಸ್ಥಾನ ಮೀಸಲಿಡಬೇಕು

‘ಸರ್ಕಾರದ ಇಲಾಖೆಗಳಾದ ರೈಲ್ವೆ,ಅಂಚೆ ಕಚೇರಿಗಳಲ್ಲಿಕ್ರೀಡಾ ಕೋಟಾದಡಿ ಹೆಚ್ಚಿನ ಸೀಟು ಮೀಸಲಿಡಲು ಸರ್ಕಾರ ಮುಂದಾಗಬೇಕು. ಅರ್ಜಿಗಳ ಅನುಗುಣವಾಗಿ ಅವಕಾಶ ನೀಡಬೇಕು. ಈಗ ಬೇರೆಲ್ಲಾ ಕ್ರೀಡೆಗಳಿಗೂ ಫೆಡರೇಷನ್‌ಗಳಿವೆ. ಅದರದ್ದೇ ಆದ ಸಂಸ್ಥೆಗಳಿವೆ. ಆದರೆ ಯೋಗಕ್ಕೆ ಬೇರೆ ಕ್ರೀಡೆಗಳಿಗಿರುವ ರೀತಿಯ ವ್ಯವಸ್ಥೆ ಇಲ್ಲ. ಯೋಗ ಪಟುಗಳಿಗೆ ಹೆಚ್ಚು ಉತ್ತೇಜನ ಸಿಗುವಂತಾಗಬೇಕು’ ಎನ್ನುತ್ತಾರೆದಿವ್ಯ.

ಹೆದರದೇ ಸಾಧನೆ ಮಾಡಿ: ‘ಹೆಣ್ಣು ಮಕ್ಕಳು ಹಿಂಜರಿಕೆಯಿಲ್ಲದೆ ಸಾಧನೆ ತೋರಬೇಕು. ಭವಿಷ್ಯದಲ್ಲಿ ಕಲಿಕೆ ತುಂಬಾ ಇರುತ್ತದೆ. ಸಾಧನೆಯಡೆ ಹೆಜ್ಜೆ ಇಡಬೇಕು. ಪೋಷಕರು ಕೂಡ ನಮಗೆ ಉತ್ತೇಜನ ನೀಡಬೇಕು. ಹೆಣ್ಣು ಮಕ್ಕಳು ಪೋಷಕರ ನಂಬಿಕೆಗೆ ಚ್ಯುತಿಬಾರದಂತೆ ಎಚ್ಚರವಹಿಸಿ ಸಾಧನೆಯ ಗುರಿ ಮುಟ್ಟಬೇಕು’ ಎನ್ನುವುದು ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.