ಕೊಳ್ಳೇಗಾಲ:ವ್ಯವಸಾಯ ಎಂದರೆ ಮೂಗು ತಿರುಗಿಸಿಕೊಂಡು ಹೋಗುವ ಅನೇಕರಿಗೆ ಹಾಗೂ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ರೈತರಿಗೆ ನಗರದ ಬೂದಿತಿಟ್ಟು ಬಡಾವಣೆಯ ನಿವಾಸಿ ಕುಮಾರ್ ಅವರು ಮಾದರಿಯಾಗಿ ನಿಲ್ಲುತ್ತಾರೆ. ತಮ್ಮ ಮಿಶ್ರ ಬೆಳೆಯ ಕೃಷಿಯಿಂದಲೇ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.
ಒಬ್ಬ ಬೆಳೆದ ಬೆಳೆಯನ್ನೇ ಮತ್ತೊಬ್ಬ ಬೆಳೆದು ಆರ್ಥಿಕ ನಷ್ಟ ಹೊಂದುವರೈತರಿಗೆ ಇವರ ಮಿಶ್ರ ಕೃಷಿ ಪಾಠವಾಗಿ ಪ್ರೇರಕ ಶಕ್ತಿಯಾಗಿದೆ. ಮಿಶ್ರ ಬೆಳೆ ಬೆಳೆದು ಪ್ರಗತಿ ಪರ ಹಾಗೂ ಮಾದರಿ ರೈತರಾಗಿದ್ದಾರೆ. ಇತರರಿಗೆ ಮಾರ್ಗದರ್ಶಕರೂ ಆಗಿದ್ದಾರೆ.
17 ವರ್ಷಗಳಿಂದ 12 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೃಷಿ ಆರಂಭಿಸಿದ ದಿನಗಳಲ್ಲಿ ಕುಮಾರ್ ಅವರು ಒಂದೇ ಬೆಳೆ ಬೆಳೆಯುತ್ತಿದ್ದರು. ತಾವುಇತರ ರೈತರಿಗಿಂತ ಭಿನ್ನವಾಗಿರಬೇಕು ಎಂಬಉದ್ದೇಶದಿಂದಮಿಶ್ರ ಬೆಳೆ ಬೆಳೆಯಲು ಆರಂಭಿಸಿದರು.
ಮೆಣಸಿನಕಾಯಿ, ಹೂ ಕೋಸು, ಹಾಗಲಕಾಯಿ, ಟೊಮೆಟೊ, ಕ್ಯಾರೆಟ್, ಬೀನ್ಸ್, ಬದನೆಕಾಯಿ, ಸಿಹಿಕುಂಬಳ, ಬೂದುಕುಂಬಳಕಾಯಿ, ಬೀಟ್‍ರೂಟ್, ಹೀರೆಕಾಯಿ, ನುಗ್ಗೇಕಾಯಿ, ದಪ್ಪಮೆಣಸಿನ ಕಾಯಿ, ಮೂಲಂಗಿ, ಸೌತೆಕಾಯಿ, ಬಾಳೆ, ಪುದೀನ ಸೂಪ್ಪು, ಕೊತ್ತಂಬರಿ ಸೂಪ್ಪು, ದಂಟು, ಪಾಲಕ್, ಮೆಂತೆ ಸೂಪ್ಪು, ಪಪ್ಪಾಯಿ, ಕಲ್ಲಂಗಡಿ, ದಾಳಿಂಬೆ ಬೆಳೆಗಳನ್ನು ಕುಮಾರ್ ಬೆಳೆಯುತ್ತಿದ್ದಾರೆ.
ಆರ್ಥಿಕ ನಷ್ಟವಿಲ್ಲ: ‘ಈವರೆಗೂಮಿಶ್ರಬೆಳೆಯಲ್ಲಿನನಗೆ ಆರ್ಥಿಕ ನಷ್ಟವಾಗಿಲ್ಲ. ಏಕೆಂದರೆ, ಈ ಪದ್ಧತಿಯಲ್ಲಿ ಒಂದು ಬೆಳೆಯಲ್ಲಿ ಕಳೆದುಕೊಂಡ ಹಣ ಮತ್ತೊಂದು ಬೆಳೆಗೆ ಸರಿದೂಗುತ್ತದೆ.ಇದರಿಂದಯಾವುದೇ ನಷ್ಟವಾಗುವುದಿಲ್ಲ’ ಎಂದು ಕುಮಾರ್ ಅವರು ‘ಪ್ರಜಾವಾಣಿ’ಗೆ ಹೇಳಿದರು.
ಮಿಶ್ರ ಬೆಳೆಯ ಯಶಸ್ಸು: ಇವರು 12 ಎಕರೆಗೆ ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. ಎಲ್ಲ ಬೆಳೆಗಳಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಅಗತ್ಯವಿರುವ ಕಡೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.
ಹಸುವಿನ ಸಗಣಿ, ಮೂತ್ರವೇ ಗೊಬ್ಬರ: ಆರಂಭದಲ್ಲಿ ಇವರು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದರು. ಈಗ, ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ಹಸುಗಳ ಮೂತ್ರ, ಸೆಗಣಿಯನ್ನು ಬಳಸುತ್ತಿದ್ದಾರೆ.
‘ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಗುಣಮಟ್ಟ ಹಾಗೂ ಸತ್ವ ಹಾಳಾಗುತ್ತಿದೆ. ಹಸುವಿನ ಗೊಬ್ಬರ ಮಣ್ಣಿನ ಫಲವತ್ತತೆಗೆ ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಅವರು.
ಪ್ರಶಸ್ತಿಗೆಭಾಗಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಮಾರ್ ಅವರನ್ನು ಗುರುತಿಸಿ ಗೌರವಿಸಿದೆ. ಅನೇಕ ಕೃಷಿ ಮೇಳಗಳಲ್ಲಿ ಭಾಗವಹಿಸಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಬೇಸಿಗೆಯಲ್ಲಿ ನೀರಿನ ಅಭಾವವಿಲ್ಲ
‘ಈ ಭಾಗದಲ್ಲಿ ಕಬಿನಿ ನಾಲೆ ನೀರು ಹೆಚ್ಚು ಹರಿಯುತ್ತದೆ. ಇದರಿಂದ ಇಲ್ಲಿನ ರೈತರಿಗೆ ಬೇಸಿಗೆಯಲ್ಲಿ ಹೆಚ್ಚು ಅನುಕೂಲವಾಗಿದೆ. ಕೃಷಿ ಜಮೀನುಗಳ ಕೊಳವೆ ಬಾವಿಗಳಲ್ಲಿ ನೀರು ಸದಾ ಹರಿಯುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ರೈತರು ಮುಂದಾಗಬೇಕು’ ಎನ್ನುವುದು ಕುಮಾರ್ ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.