
ಕೊಳ್ಳೇಗಾಲ: ಪ್ರತಿನಿತ್ಯ ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಹಾಗೂ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ತೆರಳುವ ನೌಕರರು ನಿತ್ಯದ ಕೆಲಸ ಕಾರ್ಯಗಳಿಗೆ ಚಾಮರಾಜನಗರ–ಕೊಳ್ಳೇಗಾಲ ನಡುವೆ ಓಡಾಡುವ ಪ್ರಯಾಣಿಕರು ಬೆಳಿಗ್ಗೆ ಹಾಗೂ ಸಂಜೆ ಹೆಚ್ಚು ತೊಂದರೆಗೆ ಅನುಭವಿಸುತ್ತಿದ್ದಾರೆ.
ಬೆಳಿಗ್ಗೆ ಹಾಗೂ ಸಂಜೆ ಸೀಮಿತ ಸಂಖ್ಯೆಯ ಬಸ್‌ಗಳು ಓಡಾಡುವುದರಿಂದ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ತೆರಳಾಗದೆ, ಕಚೇರಿಗಳನ್ನು ತಲುಪಲಾಗದೆ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ ಮೈಸೂರು, ಬೆಂಗಳೂರು ಸೇರಿದಂತೆ ಇತರೆ ಸ್ಥಳಗಳಲ್ಲಿ ತೆರಳಲು ಬಸ್‌ಗಳ ವ್ಯವಸ್ಥೆ ಉತ್ತಮವಾಗಿದೆ. ಆದರೆ ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಬಸ್‌ಗಳ ಕೊರತೆ ಹೆಚ್ಚಾಗಿದೆ. ಪರಿಣಾಮ ಪ್ರತಿನಿತ್ಯ ಪ್ರಯಾಣಿಕರು ತೊಂದರೆಗೆ ಸಿಲುಕುತ್ತಿದ್ದಾರೆ.
ಮೈಸೂರು–ಬೆಂಗಳೂರು ಹಾಗೂ ಮಲೆ ಮಹದೇಶ್ವರ ಬೆಟ್ಟಕ್ಕೆ ನಿಯಮಿತವಾಗಿ ಬಸ್‌ಗಳನ್ನು ಓಡಿಸುತ್ತಿರುವ ಸಾರಿಗೆ ಸಂಸ್ಥೆ ಚಾಮರಾಜನಗರಕ್ಕೆ ಮಾತ್ರ ಬೆರಳೆಣಿಕೆ ಬಸ್‌ಗಳನ್ನು ಓಡಿಸುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾಣರವಾಗಿದೆ. ಸಂಜೆಯ ಹೊತ್ತು ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ತೆರಳುವ ನೂರಾರು ಮಂದಿ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.
ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಹಾಗೂ ಚಾಮರಾಜನಗರದಿಂದ ಕೊಳ್ಳೇಗಾಳಕ್ಕೆ ಸಮರ್ಪಕ ಕೆಎಸ್‌ಆರ್‌ಟಿಸಿ ಬಸ್ ಓಡಿಸುವಂತೆ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚಾಮರಾಜನಗರದ ಶಿಕ್ಷಕಿ ಸರಸ್ವತಿ.
ಜಿಲ್ಲಾಧಿಕಾರಿಗಳೇ ಗಮನಹರಿಸಿ: ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಪ್ರತಿದಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಗೆ ತೆರಳುತ್ತಾರೆ. ವೃತ್ತಿಪರ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಹಾಜರಾತಿ ಕೊರತೆ ಎದುರಾಗುವುದರ ಜೊತೆಗೆ ವಿದ್ಯಾಭ್ಯಾಸಕ್ಕೂ ತೀರಾ ತೊಂದರೆ ಉಂಟಾಗುತ್ತಿದೆ.
ಬೆಳಿಗ್ಗೆ ಚಾಮರಾಜನಗರಕ್ಕೆ ಕೊಳ್ಳೇಗಾಲದಿಂದ ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ಒಂದೇ ಸಮಯಕ್ಕೆ ಹೋಗುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ಬಸ್‌ನಲ್ಲಿ ನೂಕು ನುಗ್ಗಲು ಹೆಚ್ಚಾಗಿ ನಿಂತು ಪ್ರಯಾಣಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಹೆಚ್ಚು ಬಸ್‌ಗಳನ್ನು ಓಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸುತ್ತಾರೆ ವಿದ್ಯಾರ್ಥಿನಿ ಅಪೇಕ್ಷಾ.
ಸಿಬ್ಬಂದಿ ವರ್ತನೆಗೆ ಬೇಸರ: ಬಸ್‌ನಲ್ಲಿ ದಟ್ಟಣೆ ಹೆಚ್ಚಾದಾಗ ಬಸ್ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರ ಜತೆ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸುತ್ತಾರೆ, ಪ್ರಶ್ನಿಸಿದರೆ ಏಕವಚನದಲ್ಲಿ ಗದರುತ್ತಾರೆ, ಏರು ದನಿಯಲ್ಲಿ ಮಾತನಾಡುತ್ತಾರೆ. ದಟ್ಟಣೆ ಹೆಚ್ಚಾದಾಗ ತಾಳ್ಮೆ ಕಳೆದುಕೊಳ್ಳುವ ಕೆಲವು ನಿರ್ವಾಹಕರು ಆಧಾರ್ ಕಾರ್ಡ್ ತೋರಿಸಿ ಊರು ಸುತ್ತಲು ಹೋಗುವಿರಾ, ಮನೆಯಲ್ಲಿ ಮಾಡಲು ಕೆಲಸವಿಲ್ಲವೇ ಎಂದು ಮೂದಲಿಸುತ್ತಾರೆ ಎಂದು ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಾರೆ.
ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬಲು ಶಕ್ತಿ ಯೋಜನೆ ಜಾರಿಗೊಳಿಸಿದ್ದು ನಿರ್ವಾಹಕರಿಗೆ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಜೊತೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಕರು ಹಾಗೂ ಡಿಪೊ ವ್ಯವಸ್ಥಾಪಕರು ತಿಳಿ ಹೇಳಬೇಕು. ಇಲ್ಲವಾದರೆ ಬಸ್ ತಡೆದು ಮಹಿಳೆಯರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಹಿಳೆ ಸೌಭಾಗ್ಯ ತಿಳಿಸಿದರು.
ನಿತ್ಯ ಚಾಮರಾಜನಗರಕ್ಕೆ ಹೋಗಲು ಹರಸಾಹಸಪಡಬೇಕಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಓಡಿಸಬೇಕುಪಿಂಕಿ ಕೊಳ್ಳೇಗಾಲ ನಿವಾಸಿ
ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಸಂಜೆ ಬರುವ ಬಸ್‌ಗಳಲ್ಲಿ ಕನಿಷ್ಠ 80 ರಿಂದ100 ಪ್ರಯಾಣಿಕರನ್ನು ತುಂಬಲಾಗುತ್ತದೆ ಕೆಲವೊಮ್ಮೆ ಉಸಿರಾಡಲೂ ಕಷ್ಟವಾಗುತ್ತದೆ. ಮಹಿಳೆಯರು ಬಸ್‌ನೊಳಗೆ ಮುಜುಗರ ಅನುಭವಿಸಬೇಕಾಗುತ್ತದೆಸುನೀತಾ ಚಾಮರಾಜನಗರ ಮಹಿಳೆ
ಹಳೆ ಬಸ್‌ಗಳ ದರ್ಬಾರ್ 
ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಬಸ್‌ಗಳ ಕೊರತೆಯ ನಡುವೆ ಈ ಮಾರ್ಗದಲ್ಲಿ ಹೆಚ್ಚಾಗಿ ಹಳೆಯ ಬಸ್‌ಗಳನ್ನು ಓಡಿಸಲಾಗುತ್ತಿದ್ದು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವು ಬಸ್‌ಗಳಲ್ಲಿ ಚಾಲಕ ನಿರ್ವಾಹಕರಾಗಿಯೂ ಕಾರ್ಯ ನಿರ್ವಹಿಸುವುದರಿಂದ ಬಸ್ ಹೊರಡುವುದು ತಡವಾಗುತ್ತಿದೆ. ಬಸ್‌ಗಳಲ್ಲಿ ಕಿಟಕಿಗಳು ದುರಸ್ತಿಯಲ್ಲಿರುತ್ತವೆ ಸೀಟುಗಳು ಹಾಳಾಗಿರುತ್ತವೆ ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ. ಅಧಿಕಾರಿಗಳು ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಓಡಿಸಬೇಕು ಎಂದು ಪ್ರಯಾಣಿಕರಾದ ಕೋಮಲ ಪ್ರಜಾವಾಣಿಗೆ ತಿಳಿಸಿದರು.
‘ಹೆಚ್ಚಿನ ಬಸ್ ಓಡಿಸಲು ಕ್ರಮ’ ಉಪವಿಭಾಗಿಯ ಮಟ್ಟದಲ್ಲಿ ಎಷ್ಟು ಬಸ್‌ಗಳ ಸಂಚಾರ ನಿಗದಿ ಮಾಡಲಾಗಿದೆಯೇ ಅಷ್ಟು ಬಸ್‌ಗಳನ್ನು ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಓಡಿಸಲಾಗುತ್ತಿದೆ. ಕೊಳ್ಳೇಗಾಲದಿಂದ ಬೇರೆ ಕಡೆಗಳಿಗೆ ಹೆಚ್ಚಿನ ಬಸ್ ಬಿಡಲಾಗಿದ್ದು ಪ್ರಯಾಣಿಕರಿಗೆ ಅನುಕೂಲವಾಗಿದೆ. ಮುಂದೆ ಚಾಮರಾಜನಗರಕ್ಕೂ ಹೆಚ್ಚಿನ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಬೋಗ ನಾಯಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.