ADVERTISEMENT

ಚಾಮರಾಜನಗರ | ₹15 ಲಕ್ಷಕ್ಕೆ ಜಿಗಿದ ದಿನದ ಆದಾಯ

ಕೆಎಸ್‌ಆರ್‌ಟಿಸಿ: ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳ, ಗ್ರಾಮೀಣ ಭಾಗಗಳಲ್ಲಿ ನೀರಸ

ಸೂರ್ಯನಾರಾಯಣ ವಿ
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಲಾಕ್‌ಡೌನ್‌ ನಿಯಮ ಸಡಿಲಿಸಿದ ನಂತರ ಮೇ 19ರಿಂದ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಅವಕಾಶ ಕೊಟ್ಟ ಬಳಿಕ ಬಸ್‌ಗಳಲ್ಲಿ ಓಡಾಡುತ್ತಿರುವವರ ಸಂಖ್ಯೆ ಹಂತ ಹಂತವಾಗಿ ಹೆಚ್ಚುತ್ತಿದೆ.

ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಕೆಲವು ದಿನಗಳಿಂದ ಪ್ರತಿ ದಿನ ₹15 ಲಕ್ಷದಷ್ಟು ಆದಾಯ ಬರುತ್ತಿದೆ. ರಾಜ್ಯದಲ್ಲೇ ಲಾಭದಲ್ಲಿ ನಡೆಯುವ ಕೆಲವೇ ಕೆಲವು ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ ಒಂದಾಗಿರುವ ಚಾಮರಾಜನಗರ ವಿಭಾಗವು ಸಾಮಾನ್ಯ ದಿನಗಳಲ್ಲಿ ₹55 ಲಕ್ಷದಿಂದ ₹60 ಲಕ್ಷದವರೆಗೂ ಆದಾಯ ಗಳಿಸುತ್ತದೆ.

ಲಾಕ್‌ಡೌನ್‌ ಜಾರಿಯಾದ ನಂತರ 65 ದಿನಗಳ ಕಾಲ ಬಸ್‌ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಕಾರ್ಯಾಚರಣೆ ಪುನರಾರಂಭವಾದ ಮೇ 19ರಂದು ₹2.5 ಲಕ್ಷ ಆದಾಯ ಬಂದಿತ್ತು. ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗಳಿಕೆಯಲ್ಲೂ ಹೆಚ್ಚಳಗಾಗುತ್ತಿದೆ. ಮೊದಲಿನ ಸ್ಥಿತಿಗೆ ಬರಲು ಇನ್ನಷ್ಟು ಸಮಯವೇ ಬೇಕು ಎಂದು ಹೇಳುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ADVERTISEMENT

ಚಾಮರಾಜನಗರ ವಿಭಾಗದಲ್ಲಿ 550 ಬಸ್‌ಗಳಿದ್ದು ಸದ್ಯ 260 ಬಸ್‌ಗಳು ಓಡುತ್ತಿವೆ. ಅಂತರಜಿಲ್ಲೆ ಬಸ್‌ ಸಂಚಾರ ಆರಂಭವಾದಾಗ ಮೈಸೂರು ಮತ್ತು ಬೆಂಗಳೂರುಗಳಿಗೆ ಮಾತ್ರ ಬಸ್‌ ಸಂಚರಿಸುತ್ತಿತ್ತು. ಈಗ ಮಂಡ್ಯ ಹಾಗೂ ಬೇರೆ ಕಡೆಗಳಿಗೂ ಬಸ್‌ ಓಡುತ್ತಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಬಸ್‌ಗಳ ಓಡಾಟ ಆರಂಭವಾಗಿದೆ. ಅಂತರರಾಜ್ಯ ಬಸ್‌ಗಳ ಸಂಚಾರ ಇನ್ನೂ ಆರಂಭವಾಗಿಲ್ಲ.

ಸೋಮವಾರ, ಮಂಗಳವಾರ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಜಾಸ್ತಿ ಇರುತ್ತದೆ. ಉಳಿದ ದಿನಗಳಲ್ಲಿ ಹೆಚ್ಚಿರುವುದಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಆರಂಭದಲ್ಲಿ ಇದ್ದುದಕ್ಕಿಂತ ಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದರಿಂದಾಗಿ ಆದಾಯವೂ ಸ್ವಲ್ಪ ಜಾಸ್ತಿ ಬರುತ್ತಿದೆ. ದಿನಕ್ಕೆ ₹15 ಲಕ್ಷದಷ್ಟು ಸಂಗ್ರಹವಾಗುತ್ತಿದೆ. ಅನಿವಾರ್ಯ ಇರುವವರು ಮಾತ್ರ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಉಳಿದವರುಸ್ವಂತ ವಾಹನಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗಗಳಿಗೂ ಬಸ್‌ ಹಾಕಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ನೀರಸವಾಗಿದೆ. ಬಹುತೇಕ ಎಲ್ಲ ಕಡೆ ಖಾಲಿ ಬಸ್‌ ಓಡಾಡುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದಿನಕ್ಕೆ ₹40 ಲಕ್ಷ ಬರಬೇಕು: ‘ಬಸ್‌ಗಳಿಗೆ ಡೀಸೆಲ್‌, ಸಿಬ್ಬಂದಿ ವೇತನ ಸೇರಿದಂತೆ ಖರ್ಚು ವೆಚ್ಚಗಳನ್ನು ಸರಿ ದೂಗಿಸಲು ಪ್ರತಿ ದಿನ ಕನಿಷ್ಠ 40 ಲಕ್ಷ ಆದಾಯ ಬರಬೇಕು. ಇಲ್ಲದಿದ್ದರೆ ನಿರ್ವಹಣೆ ಸಾಧ್ಯವೇ ಇಲ್ಲ. ಸಂಚಾರ ಪುನರಾರಂಭವಾದಾಗಿನಿಂದ ಸಂಸ್ಥೆ ನಷ್ಟದಲ್ಲೇ ಇದೆ. ಎಲ್ಲ ಬಸ್‌ ಓಡುತ್ತಿಲ್ಲ, ಹಾಗಾಗಿ ಇಂಧನ ಕಡಿಮೆ ಸಾಕು ಎಂಬುದು ನಿಜ; ಆದರೆ, ಸಿಬ್ಬಂದಿಗೆ ವೇತನ ಕೊಡಲೇಬೇಕಲ್ಲ’ ಎಂದು ಪ್ರಶ್ನಿಸುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಎರಡನೇ ದಿನವೂ ನೀರಸ: ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ ಎರಡನೇ ದಿನವೂ ಬಸ್‌ಗಳಲ್ಲಿ ಸಂಚರಿಸಿದ ಭಕ್ತರ ಸಂಖ್ಯೆ ಕಡಿಮೆ ಇತ್ತು. ದೇವಸ್ಥಾನ ಭಕ್ತರಿಗೆ ತೆರೆದ ಮೊದಲ ದಿನವಾದ ಸೋಮವಾರ 400ರಿಂದ 500 ಪ್ರಯಾಣಿಕರು ಸಂಚರಿಸಿದ್ದರು. ಎರಡನೇ ದಿನ ಇದಕ್ಕಿಂತಲೂ ಕಡಿಮೆ ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಖಾಸಗಿ ಬಸ್‌ಗಳಿಗೂ ಇಲ್ಲ ಪ್ರಯಾಣಿಕರು
ಜಿಲ್ಲೆಯಲ್ಲಿ ಜೂನ್ ‌1ರಿಂದ ಖಾಸಗಿ ಬಸ್‌ಗಳ ಸಂಚಾರವೂ ಆರಂಭವಾಗಿದೆ. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಹೆಚ್ಚಿನ ಮಾಲೀಕರು ಬಸ್‌ ಓಡಿಸುತ್ತಿಲ್ಲ.

ಜಿಲ್ಲೆಯಲ್ಲಿ 160 ಖಾಸಗಿ ಬಸ್‌ಗಳು ಇದ್ದು, ಸದ್ಯ 20ರಿಂದ 25 ಬಸ್‌ಗಳು ಓಡುತ್ತಿವೆ.

‘ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುತ್ತಿಲ್ಲ. ಬರುತ್ತಿರುವ ಆದಾಯ ಡೀಸೆಲ್‌ಗೂ ಸಾಕಾಗುತ್ತಿಲ್ಲ. ಪರಿಸ್ಥಿತಿ ಹೀ‌ಗೆಯೇ ಮುಂದುವರಿದರೆ ಇನ್ನು ಎರಡು ಮೂರು ದಿನಗಳಲ್ಲಿ ಈಗ ಸಂಚರಿಸುತ್ತಿರುವ ಬಸ್‌ಗಳು ಕೂಡ ಸಂಚಾರ ನಿಲ್ಲಿಸಲಿವೆ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ತ್ಯಾಗರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ಕಾಲೇಜುಗಳು ಆರಂಭವಾಗಬೇಕು. ಆಗ ನಮಗೆ ಪ್ರಯಾಣಿಕರು ಸಿಗುತ್ತಾರೆ. ಆ ನಂತರವಷ್ಟೇ ಬಹುತೇಕ ಬಸ್‌ಗಳು ರಸ್ತೆಗಿಳಿಯಲಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.