ADVERTISEMENT

ಚಾಮರಾಜನಗರ: ಡಿಜಿಟಲ್ ಪಾವತಿಯತ್ತ ಪ್ರಯಾಣಿಕರ ಚಿತ್ತ

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಐದು ತಿಂಗಳಲ್ಲಿ ಯುಪಿಐ ಮೂಲಕ ₹ 3.21 ಕೋಟಿ ಮೌಲ್ಯ ಸಂಗ್ರಹ

ಎಚ್.ಬಾಲಚಂದ್ರ
Published 8 ಮೇ 2025, 4:49 IST
Last Updated 8 ಮೇ 2025, 4:49 IST
ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ   

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಗದು ರಹಿತ ಟಿಕೆಟ್ ಖರೀದಿ ವ್ಯವಸ್ಥೆಗೆ ಜಿಲ್ಲೆಯ ಪ್ರಯಾಣಿಕರು ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಹಣ ಕೊಟ್ಟು ಟಿಕೆಟ್‌ ಖರೀದಿಸುವ ಸಾಂಪ್ರದಾಯಿಕ ವ್ಯವಸ್ಥೆಯಿಂದ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುವತ್ತ ಉತ್ಸಾಹ ತೋರುತ್ತಿದ್ದಾರೆ.

ಜಿಲ್ಲೆಯಲ್ಲಿ 2024ರ ನವೆಂಬರ್‌ನಿಂದ ನಗದು ರಹಿತ ಟಿಕೆಟ್‌ ಖರೀದಿ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯಲ್ಲಿ ನವೆಂಬರ್‌ನಿಂದ ಮಾರ್ಚ್‌ ಅಂತ್ಯದವರೆಗೆ ಯುಪಿಐ ಮೂಲಕ ₹ 3.21 ಕೋಟಿ ಮೊತ್ತವನ್ನು ಪಾವತಿಸಲಾಗಿದೆ.

ಆರಂಭದಲ್ಲಿ ಮಾಹಿತಿಯ ಕೊರತೆಯಿಂದ ಪ್ರಯಾಣಿಕರು ಯುಪಿಐ ಆಧಾರಿತ ಟಿಕೆಟ್‌ ಖರೀದಿ ವ್ಯವಸ್ಥೆಗೆ ಹೆಚ್ಚು ಆಸಕ್ತಿ ತೋರದೆ ಹಣ ಕೊಟ್ಟು ಟಿಕೆಟ್‌ ಖರೀದಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೊಂದಿಕೊಂಡು ಪ್ರಸ್ತುತ ಪ್ರತಿ ತಿಂಗಳು ₹1 ಕೋಟಿಗೂ ಹೆಚ್ಚು ಮೌಲ್ಯದ ಟಿಕೆಟ್‌ಗಳು ಯುಪಿಐ ಮೂಲಕವೇ ಮಾರಾಟವಾಗುತ್ತಿವೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ‌ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ ಕುಮಾರ್.

ADVERTISEMENT

ನವೆಂಬರ್‌ನಲ್ಲಿ ₹ 7,96,492, ಡಿಸೆಂಬರ್‌ನಲ್ಲಿ 46,30,363, ಜನವರಿಯಲ್ಲಿ 77,53,642, ಫೆಬ್ರುವರಿಯಲ್ಲಿ 83,30,131, ಮಾರ್ಚ್‌ನಲ್ಲಿ 1,05,89,049 ನಗದು ರಹಿತ ಟಿಕೆಟ್‌ಗಳು ಮಾರಾಟವಾಗಿವೆ. ಪ್ರತಿ ತಿಂಗಳು ಯುಪಿಐ ಆಧಾರಿತ ಟಿಕೆಟ್‌ ಖರೀದಿ ಪ್ರಮಾಣ ಹೆಚ್ಚಾಗುತ್ತಾ ಹೋಗಿದ್ದು ಪ್ರಯಾಣಿಕರು ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಶೋಕ್‌.

ನಗದು ರಹಿತ ಟಿಕೆಟ್‌ಗಳನ್ನು ವಿತರಿಸಲು ಸಾಂಪ್ರದಾಯಿಕ ಯಂತ್ರಗಳ ಬದಲಾಗಿ ಬಸ್‌ಗಳ ಸಂಖ್ಯೆಗೆ ಅನುಗುಣವಾಗಿ 480 ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟ್‌ ಮೆಷಿನ್‌) ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ಇಂಟೆಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಂ ಅಡಿಯಲ್ಲಿ ಇಬೆಕ್ಸ್ ಕ್ಯಾಶ್ ಲಿಮಿಟೆಡ್ ಇಟಿಎಂಗಳ ನಿರ್ವಹಣೆ ಮಾಡುತ್ತದೆ.

ಬಸ್‌ ನಿರ್ವಾಹಕರ ಬಳಿ ಇರುವ ಇಟಿಎಂ ಯಂತ್ರದೊಳಗಿರುವ ಕ್ಯೂಆರ್‌ ಕೋಡ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿರುವ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸಹಿತ ವಿವಿಧ ಬ್ಯಾಂಕ್‌ಗಳ ಆ್ಯಪ್‌ ಮೂಲಕವೂ ಹಣ ಪಾವತಿ ಮಾಡಿ ಟಿಕೆಟ್‌ ಖರೀದಿ ಮಾಡಬಹುದು. ಖರೀದಿ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೆ ಯಂತ್ರದಿಂದ ಟಿಕೆಟ್ ಹೊರಬರಲಿದೆ. ನೆಟ್‌ವರ್ಕ್ ಸಮಸ್ಯೆ, ತಾಂತ್ರಿಕ ದೋಷಗಳಿಂದ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಪ್ರಯಾಣಿಕರು ಹಣ ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಲಾಭ ಏನು: ದೇಶದಲ್ಲಿ ಡಿಜಿಟಲ್ ಆರ್ಥಿಕತೆ ಮುನ್ನಲೆಗೆ ಬಂದ ಬಳಿಕ ವ್ಯವಹಾರಗಳಲ್ಲಿ ನಗದು ಚಲಾವಣೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಡಿಜಿಟಲ್ ಪೇಮೆಂಟ್‌ ವ್ಯವಸ್ಥೆ ಹೆಚ್ಚು ಬಳಕೆಯಲ್ಲಿದೆ. ದಿನನಿತ್ಯದ ತರಕಾರಿ, ಹಾಲು, ದಿನಸಿ ಖರೀದಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಯುಪಿಐ ಮೂಲಕವೇ ಖರೀದಿ ಮಾಡಲಾಗುತ್ತಿದೆ.

ಸಾರ್ವಜನಿಕರು ಜೇಬಿನಲ್ಲಿ ಹಣ ಇರಿಸಿಕೊಂಡು ಹೋಗುವ ರೂಢಿಯನ್ನು ಬದಲಿಸಿಕೊಳ್ಳುತ್ತಿದ್ದು ಚಿಕ್ಕ ಚಿಕ್ಕ ಅಗತ್ಯತೆಗಳಿಗೂ ಆನ್‌ಲೈನ್‌ ಮೂಲಕ ಪಾವತಿ ಮಾಡುತ್ತಿದ್ದಾರೆ. ಡಿಜಿಟಲ್ ಆರ್ಥಿಕತೆಗೆ ಒತ್ತುನೀಡುವ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿಯಲ್ಲೂ ನಗದು ರಹಿತ ಟಿಕೆಟ್ ಖರೀದಿಗೆ ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ಅಶೋಕ್‌.

ಚಿಲ್ಲರೆ ಕಿರಿಕಿರಿಗೆ ಕಡಿವಾಣ:‌ ಹಿಂದೆ ಬಸ್‌ನಲ್ಲಿ ಚಿಲ್ಲರೆ ಕಿರಿಕಿರಿ ವಿಪರೀತವಾಗಿತ್ತು. ಕೆಲವು ಪ್ರಯಾಣಿಕರು ₹ 20 ಮೌಲ್ಯದ ಟಿಕೆಟ್ ಖರೀದಿಸಿ ₹ 500 ನಗದು ನೀಡುತ್ತಿದ್ದರು. ಚಿಲ್ಲರೆ ಹೊಂದಿಸುವುದೇ ತಲೆನೋವಾಗುತ್ತಿತ್ತು. ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಯಾದ ಮೇಲೆ ಕಿರಿಕಿರಿ ಕಡಿಮೆಯಾಗಿದೆ ಎನ್ನುತ್ತಾರೆ ನಿರ್ವಾಹಕ ಶ್ರೀನಿವಾಸ್‌.

ಹಿಂದೆ ಜೇಬಿನಲ್ಲಿ ದುಡ್ಡಿದ್ದರೆ ಮಾತ್ರ ಬಸ್‌ನಲ್ಲಿ ಪ್ರಯಾಣಿಸಬಹುದಾಗಿತ್ತು. ಹಣ ಇಲ್ಲವಾದರೆ ಪ್ರಯಾಣ ಮೊಟಕುಗೊಳಿಸಬೇಕಾಗುತ್ತಿತ್ತು. ಈಗ ಪರ್ಸ್‌ನಲ್ಲಿ ನಗದು ಇಲ್ಲದಿದ್ದರೂ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೆ ಸಾಕು. ಸ್ಮಾರ್ಟ್‌ಫೋನ್‌ನಲ್ಲಿರುವ ಯುಪಿಐ ಆ್ಯಪ್‌ಗಳ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು ಎನ್ನುತ್ತಾರೆ ಪ್ರಯಾಣಿಕ ಸೂರಜ್‌.

ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಂತಿರುವ ಬಸ್‌ಗಳು

ಪ್ರಯಾಣಿಕರಿಗೆ ಅನುಕೂಲ

ಜಿಲ್ಲೆಯು ನಗರ ಪಟ್ಟಣಗಳಿಗಿಂತ ಗ್ರಾಮೀಣ ಭಾಗಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಇಂದಿಗೂ ಹೆಚ್ಚಿನ ಪ್ರಯಾಣಿಕರು ನಗದು ನೀಡಿ ಟಿಕೆಟ್ ಖರೀದಿಸುತ್ತಿದ್ದಾರೆ. ಇದರ ನಡುವೆ ನಗದು ರಹಿತ ಟಿಕೆಟ್‌ ಖರೀದಿ ಪ್ರಮಾಣವೂ ಹೆಚ್ಚುತ್ತಿದೆ. ವಿಭಾಗ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಯುಪಿಐ ಆಧಾರಿತ ಟಿಕೆಟ್ ಖರೀದಿ ವ್ಯವಸ್ಥೆ ಇದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್.

429 ಬಸ್‌ಗಳು

ಚಾಮರಾಜನಗರ ವಿಭಾಗವು ಮೂರು ಉಪ ವಿಭಾಗಗಳನ್ನು ಒಳಗೊಂಡಿದ್ದು ಕೊಳ್ಳೇಗಾಲದಲ್ಲಿ 141 ಗುಂಡ್ಲುಪೇಟೆಯಲ್ಲಿ 142 ಹಾಗೂ ಚಾಮರಾಜನಗರದಲ್ಲಿ 146 ಬಸ್‌ಗಳು ಸೇರಿ 429 ಬಸ್‌ಗಳನ್ನು ಹೊಂದಿದೆ. ಬೆಂಗಳೂರು ಮೈಸೂರು ರಾಮನಗರ ಸೇರಿದಂತೆ ಹೊರ ಜಿಲ್ಲೆಗಳಿಗೆ ಹೆಚ್ಚು ಬಸ್‌ಗಳು ಸಂಚರಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.