ADVERTISEMENT

ಚಾಮರಾಜನಗರ | ಅಂಬೇಡ್ಕರ್ ಉದ್ಯಾನ: ಸಂಪೂರ್ಣ ಅಧ್ವಾನ

ಬಾಲಚಂದ್ರ ಎಚ್.
Published 25 ಜನವರಿ 2025, 7:03 IST
Last Updated 25 ಜನವರಿ 2025, 7:03 IST
ಚಾಮರಾಜನಗರದ ಹಳೆ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿರುವ ಮಕ್ಕಳ ಆಟಿಕೆ ಸ್ಥಿತಿ
ಚಾಮರಾಜನಗರದ ಹಳೆ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿರುವ ಮಕ್ಕಳ ಆಟಿಕೆ ಸ್ಥಿತಿ   

ಚಾಮರಾಜನಗರ: ತುಕ್ಕುಹಿಡಿದು ನೆಲಕ್ಕುರುಳುವ ಸ್ಥಿತಿಯಲ್ಲಿರುವ ಜಾರು ಬಂಡೆ, ತೂಗುಯ್ಯಾಲೆಗಳು, ಆಟ ಆಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಜೀವಕ್ಕೆ ಎರವಾಗುವ ಮುರಿದ ಪ್ಲಾಸ್ಟಿಕ್‌ ಆಟಿಕೆಗಳು..ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿರುವ ಅತಿ ದೊಡ್ಡ ಉದ್ಯಾನ ಎಂಬ ಹೆಗ್ಗಳಿಕೆ ಹೊಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಕಂಡುಬರುವ ಚಿತ್ರಣ ಇದು.

ನಗರದ ಹಳೆ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನ ನಗರಸಭೆಯ ನಿರ್ವಹಣೆ ಕೊರತೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಉದ್ಯಾನದೊಳಗಿರುವ ಮಕ್ಕಳ ಆಟಿಕೆಗಳು ಅಪಾಯಕಾರಿ ಸ್ಥಿತಿಗೆ ತಲುಪಿವೆ. ಉದ್ಯಾನದಲ್ಲಿರುವ ಬೆರಳೆಣಿಕೆ ಆಟಿಕೆಗಳು ತುಕ್ಕು ಹಿಡಿದು, ಅಲ್ಲಲ್ಲಿ ಮುರಿದಿದ್ದು ಕಳಚಿ ಬೀಳುವ ಹಂತದಲ್ಲಿವೆ.

ಮಕ್ಕಳು ಇಷ್ಟಪಟ್ಟು ಆಟವಾಡುವ ಜೋಕಾಲಿಗೆ ಅಳವಡಿಸಿರುವ ಸರಪಳಿ ತುಂಡಾಗುವ ಹಂತದಲ್ಲಿದೆ. ಜಾರು ಬಂಡೆಗಳು ಜಾರುವ ಸ್ಥಿತಿಯಲ್ಲಿ ಇಲ್ಲ. ಹತ್ತುವ ಏಣಿಯ ಸರಳುಗಳು ಕಿತ್ತುಹೋಗಿವೆ. ಮಕ್ಕಳು ಹತ್ತುವಾಗ, ಜಾರುವಾಗ ಗಮನ ಸ್ವಲ್ಪ ಬೇರೆಡೆಗೆ ಸರಿದರೂ ಬಿದ್ದು ಗಂಭೀರವಾಗಿ ಪೆಟ್ಟುಮಾಡಿಕೊಳ್ಳಲಿದ್ದಾರೆ.

ADVERTISEMENT

ಇಷ್ಟಾದರೂ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳಿಗಾಗಲಿ, ವಾರ್ಡ್‌ನ ಜನಪ್ರತಿನಿಧಿಗಳಿಗಾಗಲಿ ಉದ್ಯಾನದ ದುಸ್ಥಿತಿ ಕಾಣದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರಾದ ಭಾನುಪ್ರಕಾಶ್‌.

ನಗರದಲ್ಲಿರುವ ದೊಡ್ಡ ಉದ್ಯಾನ ಎಂಬ ಕಾರಣಕ್ಕೆ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳ ಸಾರ್ವಜನಿಕರು ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್‌ಗೆ ಬರುತ್ತಾರೆ. ದಿನ ನಿತ್ಯದ ಕಾರ್ಯದೊತ್ತಡದ ಮಧ್ಯೆ ವಿಶ್ರಾಂತಿ ಪಡೆಯಲು, ಬೇಸರ ಕಳೆಯಲು ಮಕ್ಕಳ ಸಹಿತ ನಾಗರಿಕರು ಇಲ್ಲಿಗೆ ಬರುತ್ತಾರೆ. ಅಧ್ವಾನಕ್ಕೊಳಗಾಗಿರುವ ಉದ್ಯಾನದ ಸ್ಥಿತಿ ಕಂಡು ಸಾರ್ವಜನಿಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ ಎನ್ನುತ್ತಾರೆ ಅವರು.

ಉದ್ಯಾನದಲ್ಲಿರುವ ಕಾರಂಜಿ ಕೆಟ್ಟು ಹಲವು ವರ್ಷಗಳು ಕಳೆದಿವೆ. ಅದರೊಳಗಿದ್ದ ನೀರಿನ ಜೊತೆಗೆ ಕಸ–ಕಡ್ಡಿಗಳು ಬೆರೆತು ಕೊಳೆತು ದುರ್ವಾಸನೆ ಬೀರುತ್ತಿದೆ. ಮಕ್ಕಳು ಅದರೊಳಗಿಳಿದು ಆಟವಾಡುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಹಿರಿಯ ನಾಗರಿಕರಾದ ಶ್ರೀನಿವಾಸ್‌.

ಸಾರ್ವಜನಿಕರು ಹಾಗೂ ಮಕ್ಕಳು ಶೌಚ ಮಾಡಲು ಶೌಚಾಲಯಗಳು ಇಲ್ಲ, ಮಕ್ಕಳು ಉದ್ಯಾನದೊಳಗೆಯೇ ಮೂತ್ರ ವಿಸರ್ಜನೆ ಮಾಡಬೇಕು. ಸಾರ್ವಜನಿಕರು ನಿರ್ಜನ ಪ್ರದೇಶ ಅಥವಾ ಸಾರ್ವಜನಿಕ ಶೌಚಾಲಯ ಹುಡುಕಿಕೊಂಡು ಹೋಗಬೇಕಾಗಿದೆ ಎನ್ನುತ್ತಾರೆ ಅವರು.

ಉದ್ಯಾನಕ್ಕೆ ಸೂಕ್ತ ರಕ್ಷಣೆ ಇಲ್ಲ, ಕೂರಲು ಸರಿಯಾದ ಆಸನಗಳು ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಹೀಗೆ ಉದ್ಯಾನದೊಳಗೆ ‘ಇಲ್ಲ’ಗಳ ಪಟ್ಟಿ ದೊಡ್ಡದಾಗಿದೆ ಎನ್ನುತ್ತಾರೆ ವಾಯು ವಿಹಾರಕ್ಕೆ ಬಂದಿದ್ದ ಮಹದೇವ್‌.

ಉದ್ಯಾನದ ಗಿಡಗಳು ನಿರ್ವಹಣೆ ಇಲ್ಲದೆ ಸೊರಗಿವೆ, ಪ್ಲಾಸ್ಟಿಕ್ ಕಸದ ರಾಶಿ ಹರಡಿಕೊಂಡಿದೆ. ಸೋಲಾರ್ ದೀಪಗಳು ಕೆಟ್ಟುನಿಂತಿವೆ. ರಾತ್ರಿಯ ಹೊತ್ತು ಮದ್ಯವ್ಯಸನಿಗಳ ಪಾಲಿನ ಮೋಜಿತ ತಾಣವಾಗಿದೆ. ಒಟ್ಟಾರೆ ಉದ್ಯಾನ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುತ್ತಾರೆ ಮಹದೇವ್.

ಅಪಾಯಕಾರಿ ಸ್ಥಿತಿಯಲ್ಲಿರುವ ಮಕ್ಕಳ ಆಟಿಕೆ
ಅಂಬೇಡ್ಕರ್ ಉದ್ಯಾನದಲ್ಲಿ ಹಾಳಾಗಿರುವ ಆಟಿಕೆಗಳನ್ನು ತಕ್ಷಣ ಬದಲಿಸಲಾಗುವುದು ಕೆಲವು ಆಟಿಕೆಗಳನ್ನು ದುರಸ್ತಿ ಮಾಡಿಲಾಗುವುದು. ಉದ್ಯಾನದ ಸ್ವಚ್ಛತೆ ಸಹಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
–ಸುರೇಶ್‌ ನಗರಸಭೆ ಅಧ್ಯಕ್ಷ
‘ಉದ್ಯಾನಕ್ಕೆ ಕನಿಷ್ಠ ಸೌಲಭ್ಯ ಇಲ್ಲ’
ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿರುವ ಆಟಿಕೆಗಳ ದುರಸ್ತಿಗೆ ಹಾಗೂ ಉದ್ಯಾನದ ಸ್ವಚ್ಛತೆಗೆ ಜಿಲ್ಲಾಡಳಿತ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಉದ್ಯಾನದೊಳಗೆ ಕುಡಿಯುವ ನೀರು ಶೌಚಾಲಯ ಸ್ವಚ್ಛತೆ ಸಹಿತ ಕನಿಷ್ಠ ಸೌಲಭ್ಯಗಳೂ ಇಲ್ಲ. ನಾಲ್ಕೈದು ವರ್ಷಗಳ ಹಿಂದೆ ಹಳೆಯ ಆಟಿಕೆಗಳಿಗೆ ಬಣ್ಣ ಬಳಿದು ಬಿಲ್ ಮಂಜೂರು ಮಾಡಿಸಿಕೊಳ್ಳಲಾಗಿದೆ. –ಭಾನುಪ್ರಕಾಶ್ ಸಾಮಾಜಿಕ ಕಾರ್ಯಕರ್ತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.