ADVERTISEMENT

ನಿರ್ವಹಣೆ ಕೊರತೆ: ನಲುಗಿದ ಉಡುತೊರೆ ಜಲಾಶಯ

2016ರಂದು ಲೋಕಾರ್ಪಣೆ, ನಿಗದಿಯಷ್ಟು ಕೃಷಿ ಭೂಮಿಗೆ ನೀರುಣಿಸಲು ವಿಫಲ

ಬಿ.ಬಸವರಾಜು
Published 28 ಮೇ 2020, 19:30 IST
Last Updated 28 ಮೇ 2020, 19:30 IST
ಉಡುತೊರೆ ಜಲಾಶಯದ ನೋಟ
ಉಡುತೊರೆ ಜಲಾಶಯದ ನೋಟ   

ಹನೂರು: ಸಾವಿರಾರು ಎಕರೆ ಕೃಷಿ ಜಮೀನಿಗೆ ನೀರುಣಿಸಿ, ನೂರಾರು ವನ್ಯಪ್ರಾಣಿಗಳಿಗೆ ಜೀವನಾಡಿಯಾಗಬೇಕಿದ್ದ ಉಡುತೊರೆ ಜಲಾಶಯವು ನಿರ್ವಹಣೆ ಕೊರತೆಯಿಂದ ಅವನತಿ ಹಾದಿ ಹಿಡಿದಿದೆ.

ತಾಲ್ಲೂಕಿನ ಕೆ.ಗುಂಡಾಪುರ ಬಳಿ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 1977–78ರಲ್ಲಿ ಉಡುತೊರೆ ಜಲಾಶಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 38 ವರ್ಷಗಳ ಬಳಿಕ 2016ರಲ್ಲಿ ಜಲಾಶಯ ಲೋಕಾರ್ಪಣೆಗೊಂಡಿತ್ತು. ನಾಲ್ಕು ವರ್ಷಗಳ ಅವಧಿಯಲ್ಲೇ ಅಣೆಕಟ್ಟು ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ.

16 ಸಾವಿರ ಎಕರೆಗೆ ನೀರು: ಅಜ್ಜೀಪುರ, ಸೂಳೇರಿಪಾಳ್ಯ, ರಾಮಾಪುರ ಹಾಗೂ ಕಾಂಚಳ್ಳಿ ಮುಂತಾದ ಗ್ರಾಮಗಳಲ್ಲಿನ ರೈತರಿಗೆ ಎಡ ಹಾಗೂ ಬಲದಂಡೆ ನಾಲೆಗಳಿಂದ ಸುಮಾರು 16 ಸಾವಿರ ಎಕರೆ ಕೃಷಿ ಭೂಮಿಗೆ ನೀರು ಪೂರೈಸುವ ಉದ್ದೇಶದಿಂದ ನಿರ್ಮಾಣವಾದ ಜಲಾಶಯವು ಈಗ ಇದರ ಅರ್ಧದಷ್ಟು ಭೂಮಿಗೂ ನೀರುಣಿಸುತ್ತಿಲ್ಲ. ನಾಲೆಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು ಹಾಗೂ ಜಲಾಶಯದಲ್ಲಿನ ಕೆಲ ತೊಡಕುಗಳೇ ಇದಕ್ಕೆ ಕಾರಣ ಎಂಬುದು ಇಲ್ಲಿನ ರೈತರ ಆರೋಪ.

ADVERTISEMENT

ಕಚೇರಿ ಆರಂಭಿಸಿ: ಜಲಾಶಯ ಕಾಮಗಾರಿ ಪ್ರಗತಿ ಹಂತದಲ್ಲಿದ್ದ ಸಮಯದಲ್ಲಿ ಅಜ್ಜೀಪುರ ಗ್ರಾಮದಲ್ಲಿ ವಸತಿಗೃಹಗಳ ಜೊತೆಗೆ ಜಲಾಶಯ ನಿರ್ವಹಣೆಗಾಗಿ ಕಚೇರಿ ತೆರೆಯಲಾಗಿತ್ತು. ಕೆಲವು ವರ್ಷಗಳ ಕಾಲ ಇಲ್ಲೇ ಕೆಲಸಗಳು ನಡೆಯುತ್ತಿದ್ದವು. ನಾಲ್ಕೈದು ವರ್ಷಗಳ ಹಿಂದೆ ಇಲ್ಲಿದ್ದ ಕಚೇರಿಯನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ.

‘ಈಗ ನೀರು ಸರಬರಾಜಿನಲ್ಲಿ ತೊಡಕುಂಟಾದರೆ 20 ಕಿ.ಮೀ ದೂರದ ಕಾಮಗೆರೆಗೆ ತೆರಳಬೇಕಿದೆ. ಈ ಸಂಬಂಧ ಇಲ್ಲಿ ಪುನಃ ಕಚೇರಿಯನ್ನು ಆರಂಭಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ’ ಎಂದು ದೂರುತ್ತಾರೆ ಸ್ಥಳೀಯ ರೈತರು.

ನೀರಾವರಿ ಸಲಹಾ ಸಮಿತಿ ಇಲ್ಲ: ಜಲಾಶಯ ಲೋಕಾರ್ಪಣೆಗೊಂಡು ನಾಲ್ಕು ವರ್ಷಗಳು ಕಳೆದರೂ ಇದುವರೆಗೂ ನೀರು ಹಂಚಿಕೆ ಸಲಹಾ ಸಮಿತಿ ರಚನೆಯಾಗಿಲ್ಲ. ಜಲಾಶಯದಲ್ಲಿ ಪ್ರತಿವರ್ಷ ಶೇಖರಣೆಯಾಗುವ ನೀರು, ಹಂಚಿಕೆ ವಿಚಾರವಾಗಿ ಚರ್ಚಿಸಲು ಸುತ್ತಮುತ್ತಲಿನ ರೈತರನ್ನು ಒಗ್ಗೂಡಿಸಿ ಸಮಿತಿಯೊಂದನ್ನು ರಚನೆ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ಇದುವರೆಗೂ ಒಂದೇ ಒಂದು ರೈತರ ಸಭೆಯೂ ನಡೆದಿಲ್ಲ ಎಂಬುದು ರೈತರ ಆರೋಪ.

ಸ್ವಾಧೀನ ಜಮೀನು ಒತ್ತುವರಿ: ‘ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯ ರೈತರಿಂದ ಸುಮಾರು 400 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ನಿರ್ವಹಣೆ ಕೊರತೆಯಿಂದಾಗಿ ಈಗ ಜಮೀನಿನ ಕೆಲವು ಕಡೆ ಒತ್ತುವರಿಯಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ ಆರೋಪಿಸಿದರು.

‘ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸುವುದರ ಜೊತೆಗೆ, ಕೆಲವು ಕಚೇರಿಗಳನ್ನು ಇಲ್ಲಿಯೇ ತೆರೆದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ಕಚೇರಿ ಸ್ಥಳಾಂತರಕ್ಕೆ ಮನವಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಪ್ರಶಾಂತ್, ‘ನೀರಾವರಿ ಸಲಹಾ ಸಮಿತಿ ರಚನೆ ಸಂಬಂಧ ಸದ್ಯದಲ್ಲೇ ಪ್ರಕಟಣೆ ಹೊರಡಿಸಲಾಗುವುದು. ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಕೆಲವರು ಆ ಸ್ಥಳಗಳಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ತೆರವುಗೊಳಿಸಲಾಗಿದೆ. ಅಜ್ಜೀಪುರದಲ್ಲಿ ಕಚೇರಿ ತೆರೆಯುವ ಸಂಬಂಧ ಈಗಾಗಲೇ ನಾಲ್ಕು ಬಾರಿ ಮನವಿ ಮಾಡಲಾಗಿದೆ. ಕೊಳ್ಳೇಗಾಲದಲ್ಲಿರುವ ಎರಡು ಕಚೇರಿಗಳ ಪೈಕಿ ಒಂದನ್ನು ಅಲ್ಲಿಗೆ ಸ್ಥಳಾಂತರಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.