
ಕೊಳ್ಳೇಗಾಲ: ತಾಲ್ಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಮಂಗಳವಾರ ಪಂಕ್ತಿ ಸೇವೆ (ಸಿದ್ದರ ಸೇವೆ) ಅಚ್ಚುಕಟ್ಟಾಗಿ ನಡೆಯಿತು. ಬಂಧು, ಬಳಗ, ಸ್ನೇಹಿತರು, ಹಿತೈಷಿಗಳ ಜೊತೆಗೆ ಒಟ್ಟಾಗಿ ಪಂಕ್ತಿಯಲ್ಲಿ ಕುಳಿತು ಸಸ್ಯಾಹಾರ ಹಾಗೂ ಮಾಂಸಾಹಾರವನ್ನು ಸೇವಿಸಿದ ಭಕ್ತರು ಸೌಹಾರ್ದ ಮೆರೆದರು.
ಪಕ್ಷಿಸೇವೆ ಆರಂಭಕ್ಕೂ ಮುನ್ನ ಹರಕೆ ಹೊತ್ತ ಭಕ್ತರು ಕುರಿ, ಮೇಕೆ, ಕೋಳಿ ಮಾಂಸವನ್ನು ತಂದು ಅಡುಗೆ ಸಿದ್ಧಪಡಿಸಿ ಗದ್ದುಗೆ ಹಾಗೂ ಕಂಡಾಯಗಳಿಗೆ ಎಡೆ ಸಮರ್ಪಿಸಿ ಸಹ ಪಂಕ್ತಿ ಭೋಜನ ಮಾಡಿದರು. ಸಸ್ಯಾಹಾರಿಗಳು ಕಜ್ಜಾಯ, ತುಪ್ಪ, ಪಾಯಸ, ಅನ್ನ, ಸಾರು, ಪಲ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಜಾತ್ರೆಗೆ ಬಂದ ನೆಂಟರಿಷ್ಟರು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಹಭೋಜನ ಮಾಡಿದರು.
5 ದಿನಗಳ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಂಕ್ತಿಸೇವೆಗೆ ವಿಶೇಷ ಮಹತ್ವವಿದೆ. ಎಲ್ಲರ ಒಳಗೊಳ್ಳುವಿಕೆಯ ಸಂಕೇತವಾಗಿಯೂ ಪಂಕ್ತಿಸೇವೆ ಗಮನ ಸೆಳೆಯುತ್ತದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಸಿದ್ದಪ್ಪಾಜಿ ಭಕ್ತರು ಜಾತ್ರೆಗೆ ಆಗಮಿಸಿ ಸಹಪಂಕ್ತಿ ಭೋಜನ ಮಾಡಿ ದೇವರ ದರ್ಶನ ಮಾಡಿದರು. ಸೋಮವಾರ ಸ್ವಲ್ಪ ಮಂಕಾಗಿದ್ದ ಜಾತ್ರೆ ಮಂಗಳವಾರ ಕಳೆಗಟ್ಟಿತ್ತು.
ಜಾತ್ರೆಯಲ್ಲಿ ನೂತನವಾಗಿ ದೀಕ್ಷೆ ಪಡೆದ ನೀಲಗಾರರು ಪ್ರತಿ ಬಿಡಾರಗಳಿಗೂ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಪಂಕ್ತಿಸೇವೆಗೆ ಚಾಲನೆ ನೀಡಿದರು. ತಲೆತಲಾಂತರಗಳಿಂದ ನಡೆದುಕೊಂಡ ಬಂದಿರುವ ಜಾತ್ರೆಯಲ್ಲಿ ನೀಲಗಾರರ ವಿಧಿ ವಿಧಾನಗಳಂತೆ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಾಲ್ಗೊಂಡರು.
ಮದ್ಯ ಮಾರಾಟ ನಿಷೇಧ: ಚಿಕ್ಕಲೂರು ಜಾತ್ರೆಯಲ್ಲಿ ಮದ್ಯ ಮಾರಾಟ ಹಾಗೂ ಪ್ರಾಣಿಬಲಿ ತಡೆಯಲು 7 ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಪೊಲೀಸರು ಹದ್ದಿನಕಣ್ಣಿರಿಸಿ ಪ್ರತಿ ವಾಹನವನ್ನು ತಪಾಸಣೆ ಮಾಡಿ ಜಾತ್ರೆಗೆ ಹೋಗಲು ಅನುವು ಮಾಡಿಕೊಡುತ್ತಿದ್ದರು. ತಪಾಸಣೆ ವೇಳೆ ಪತ್ತೆಯಾದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಯಿತು.
ಬಿಡಾರ: ದೇವಸ್ಥಾನದ ಆವರಣದ ಸುತ್ತಮುತ್ತ ಹಾಗೂ ಖಾಸಗಿ ಜಮೀನುಗಳಲ್ಲಿ ಭಕ್ತರು ಸಾವಿರಕ್ಕೂ ಹೆಚ್ಚು ಬಿಡಾರಗಳನ್ನು ಹಾಕಿಕೊಂಡಿದ್ದು ಕಂಡುಬಂತು. ಆದರೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆ ಸಹಿತ ಮೂಲಸೌಕರ್ಯಗಳು ಇಲ್ಲದಿರುವುದು ಎದ್ದು ಕಾಣುತ್ತಿತ್ತು. ಸಮಸ್ಯೆಗಳ ನಡುವೆಯೂ ಭಕ್ತರು ಪಂಕ್ತಿಸೇವೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ತಾತ, ಮುತ್ತಾತನ ಕಾಲದಿಂದಲೂ ಚಿಕ್ಕಲ್ಲೂರು ಜಾತ್ರೆಗೆ ಬಂದು ಪಂಕ್ತಿಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆಹಾರ ಪದ್ಧತಿಯನ್ನು ತಡೆಯಲು ಸಾಧ್ಯವಿಲ್ಲ. ಅವರವರ ಆಹಾರ ಪದ್ಧತಿಯಂತೆ ಸಸ್ಯಾಹಾರಿಗಳು ಸಸ್ಯಾಹಾರವನ್ನು, ಮಾಂಸಾಹಾರಿಗಳು ಮಾಂಸಾಹಾರವನ್ನುಸ ಸೇವನೆ ಮಾಡಿದ್ದಾರೆ ಎಂದು ಕನಕಪುರದ ನಿವಾಸಿ ಮಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಜನದಟ್ಟಣೆ: ಪಂಕ್ತಿ ಸೇವೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರಿಂದ ಎರಡರಿಂದ ಮೂರು ಕಿ.ಮೀ ಉದ್ದದವರೆಗೂ ವಾಹನಗಳ ದಟ್ಟಣೆ ಕಂಡುಬಂತು. ಚಿಕ್ಕಲ್ಲೂರು ದೇವಸ್ಥಾನದ ಆರಂಭದಿಂದ ಕೊತ್ತನೂರು ಗೇಟ್‌ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ದಟ್ಟಣೆಯನ್ನು ನಿವಾರಿಸಲು ಹರಸಾಹಸ ಪಡಬೇಕಾಯಿತು.
ಸ್ವಚ್ಛತೆಯ ಅರಿವು: ಮಂಟೇಸ್ವಾಮಿ ಪರಂಪರೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಜಾತ್ರಾ ಆವರಣದಲ್ಲಿ ಬ್ಯಾನರ್‌ಗಳನ್ನು ಪ್ರದರ್ಶಿಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಜಾತ್ರಾ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸ್ವಚ್ಛತೆ ಕಾಪಾಡಿಕೊಳ್ಳುವಂತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಾಹಿತಿ ಮಹದೇವ ಶಂಕರಪುರ ಜಾಗೃತಿ ಮೂಡಿಸಿದರು.
ಚಿಕ್ಕಲ್ಲೂರು ಜಾತ್ರೆಗೆ ಹೋಗುವಾಗ ಪ್ರಕಾಶ್ ಪಾಳ್ಯ ಮಾರ್ಗದ ರಸ್ತೆಯಲ್ಲಿ ಆಟೋರಿಕ್ಷಾ ಹಳ್ಳಕ್ಕೆ ಬಿತ್ತು. ಅದೃಷ್ಟವಶಾತ್ ಆಟೋದಲ್ಲಿದ್ದ ಮೈಸೂರಿನ ಜೆ.ಪಿ ನಗರದ ನಿವಾಸಿ ಶಾಂತು ಮಂಜು ಸುರೇಶ್ ಕುಮಾರ್ ಪ್ರಾಣಾಪಾಯದಿಂದ ಪಾರಾದರು. ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣ ಮಾಡುತ್ತಿದ್ದು ಯಾವುದೇ ನಾಮಫಲಕ ಹಾಕದಿರುವುದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದರು. ‘ರಸ್ತೆಯಲ್ಲಿ ದಾರಿಯುದ್ದಕ್ಕೂ ದೂಳು ಆವರಿಸಿಕೊಂಡಿದ್ದು ಭಕ್ತರಿಗೆ ಕಿರಿಕಿರಿ ಉಂಟು ಮಾಡಿತು. ರಸ್ತೆಗೆ ನೀರು ಸಿಂಪಡಿಸಿ ದೂಳು ತಡೆಯುವಂತೆ ಎಇಇ ಪುರುಷೋತ್ತಮ್ ಅವರಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ’ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.