ಸಂತೇಮರಹಳ್ಳಿ: ಮಳೆಗಾಲದಲ್ಲಿ ಹರಡಬಹುದಾದ ರೋಗಗಳನ್ನು ಹತೋಟಿ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು ಸೊಳ್ಳೆಗಳ ನಿಯಂತ್ರಣಕ್ಕೆ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಕೆರೆಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುತ್ತಿದೆ.
ಮಲೇರಿಯಾ, ಡೆಂಗಿ, ಚಿಕನ್‌ಗುನ್ಯಾ, ಮಿದುಳು ಜ್ವರ ಸೇರಿದಂತೆ ಮಾರಣಾಂತಿಕ ಕಾಯಿಲೆಗಳು ಸೊಳ್ಳೆಗಳಿಂದ ಹರಡುವುದರಿಂದ ಅವುಗಳ ನಿಯಂತ್ರಣಕ್ಕೆ ಮುಂದಾಗಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ರೋಗ ಬಾರದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುತ್ತಿದೆ.
ಸೊಳ್ಳೆಗಳ ಮೊಟ್ಟೆಗಳನ್ನು ತಿನ್ನುವ ಲಾರ್ವಾಹಾರಿ ಮೀನುಗಳನ್ನು ಕೆರೆಗಳಲ್ಲಿ ಬಿಟ್ಟು ಸೊಳ್ಳೆಗಳ ನಾಶ ಮಾಡಲಾಗುತ್ತಿದೆ. ಲಾರ್ವಾಹಾರಿ ಮೀನುಗಳು ಸೊಳ್ಳೆಗಳ ಮೊಟ್ಟೆಗಳನ್ನು ತಿಂದು ಮರಿಗಳು ಉತ್ಪತ್ತಿಯಾಗದಂತೆ ತಡೆಯುತ್ತವೆ. ಮೀನುಗಳ ಪ್ರಮುಖ ಆಹಾರವೂ ಸೊಳ್ಳೆಗಳ ಮೊಟ್ಟೆಗಳಾಗಿವೆ. ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ನೀರು ಇಂಗದಿರುವ ಹಾಗೂ ಸದಾ ಕಾಲ ನೀರು ತುಂಬಿರುವ ಕೆರೆಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದೆ. ಪರಿಣಾಮ ಸೊಳ್ಳೆಗಳ ಉತ್ಪತ್ತಿ ಕುಂಠಿತವಾಗಿದೆ ಎನ್ನುತ್ತಾರೆ ವೈದ್ಯರು.
ಸಂತೇಮರಹಳ್ಳಿ, ಕಾವುದವಾಡಿ, ಚುಂಗಡಿಪುರ, ಕೆಂಪನಪುರ, ಮಾಹಾಂತಳಪುರ ಕೆರೆಗಳು ಸೇರಿದಂತೆ ಹಲವು ಸಣ್ಣಪುಟ್ಟ ಜಲಮೂಲಗಳಲ್ಲಿ ಲಾರ್ವಾ ಹಾರಿ ಮೀನುಗಳನ್ನು ಬಿಡಲಾಗಿದೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಜಿಕಾ ವೈರಸ್, ಈಡಿಸಿಜಿಪಿ ಹಾಗೂ ಕ್ಯೂಲೆಕ್ಸ್ ಸೊಳ್ಳೆಗಳನ್ನು ನಿರ್ಮೂಲನೆ ಮಾಡಲಾಗುತ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪ್ರತಿ ವರ್ಷ 20 ರಿಂದ 25ರಷ್ಟು ಡೆಂಗಿ, ಚಿಕುನ್‌ಗುನ್ಯಾ, ಮಲೇರಿಯಾದಂತಹ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಗ್ರಾಮಗಳ ಕೆರೆಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಟ್ಟ ಮೇಲೆ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಗಿರಿಜಾ ಶಂಕರ್ ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ತೊಟ್ಟಿ ನಿರ್ಮಿಸಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದ್ದು, ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಸೊಳ್ಳೆಗಳ ನಿಯಂತ್ರಣ ವಿಧಾನವನ್ನು ತಿಳಿಸಲಾಗುತ್ತಿದೆ. ಸ್ಥಳೀಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಅರಿವು ಮೂಡಿಸಲಾಗುತ್ತಿದೆ.
15 ದಿನಗಳಿಗೊಮ್ಮೆ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಗ್ರಾಮಗಳ ಮನೆ ಮನೆಗೆ ಭೇಟಿನೀಡಿ ಮನೆಗಳ ಸುತ್ತಮುತ್ತ ಮಳೆಯ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾದ ವಿಧಾನಗಳನ್ನು ತಿಳಿ ಹೇಳುತ್ತಿದ್ದಾರೆ. ಸೊಳ್ಳೆಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂದು ಅರಿವು ಮೂಡಿಸುತ್ತಿದ್ದಾರೆ.
ಡೆಂಗಿ, ಚಿಕನ್ ಗುನ್ಯದಂತಹ ಕಾಯಿಲೆಗಳಲಿಂದ ದೂರವಿರಬೇಕಾದರೆ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಹಾಗೂ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಬೇಕು ಎಂದು ಗಿರಿಜಾ ಶಂಕರ್ ಸಲಹೆ ನೀಡಿದರು.
ತಗ್ಗಿದ ಪ್ರಕರಣಗಳು:
ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ನೀರನ ಮೂಲಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಸಂತಾನೋತ್ಪತ್ತಿ ತಗ್ಗಿಸಲಾಗುತ್ತಿದೆ. ಪರಿಣಾಮ ಸೊಳ್ಳೆಗಳಿಂದ ಬರುವ ರೋಗಗಳ ಪ್ರಕರಣ ತಗ್ಗಿವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪುನೀತ್ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.