ADVERTISEMENT

ಚಾಮರಾಜನಗರ: ರಾಜ್ಯ ಹೆದ್ದಾರಿಯಲ್ಲಿ ಚಿರತೆ ಮೃತದೇಹ ಪತ್ತೆ, ವಾಹನ ಡಿಕ್ಕಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 3:27 IST
Last Updated 22 ಫೆಬ್ರುವರಿ 2022, 3:27 IST
ಚಿರತೆ
ಚಿರತೆ   

ಹನೂರು (ಚಾಮರಾಜನಗರ): ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ, ತಾಲ್ಲೂಕಿನ ಗುರುಮಲ್ಲಪ್ಪನದೊಡ್ಡಿ ಗ್ರಾಮದ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆಗಂಡು ಚಿರತೆಯೊಂದರ ಮೃತದೇಹ ಪತ್ತೆಯಾಗಿದ್ದು, ಸೋಮವಾರ ರಾತ್ರಿ ವಾಹನ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ.

ಲೊಕ್ಕನಹಳ್ಳಿಯಿಂದ ತಮಿಳುನಾಡಿನ ಸತ್ಯ ಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ.

ಮಂಗಳವಾರ ಮುಂಜಾನೆ ರಸ್ತೆಯಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಬಿಆರ್‌ಟಿಯ ಬೈಲೂರು ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇತ್ತೀಚೆಗೆ ತಮಿಳುನಾಡಿನ ಸತ್ಯಮಂಗಲ ರಸ್ತೆಯ ದಿಂಬಂ ಘಾಟಿನಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಚಿರತೆಯ ಮೃತದೇಹ ಪತ್ತೆಯಾಗಿರುವ ರಸ್ತೆಯು ದಿಂಬಂ ಘಾಟಿಯನ್ನು ಸಂಪರ್ಕಿಸುತ್ತದೆ.

‘ಚಿರತೆ ರಸ್ತೆಯಲ್ಲಿ ಬಿದ್ದಿರುವುದರಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವಂತೆ ಕಾಣಿಸುತ್ತಿದೆ. ಆದರೆ ಚಿರತೆಯ ದೇಹದಲ್ಲಿ ಗಾಯವಾಗಲಿ, ರಕ್ತಸ್ರಾವವಾಗಲಿ ಆಗಿಲ್ಲ.‌ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ’ಎಂದು ಬೈಲೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಶಿವರಾಮು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.