ADVERTISEMENT

ಚಾಮರಾಜನಗರ | ಲಾಕ್‌ಡೌನ್‌: ಅಪಘಾತ, ಅಪರಾಧ ಇಳಿಮುಖ

ಏಪ್ರಿಲ್‌ ಮೊದಲ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಕುಸಿತ

ಸೂರ್ಯನಾರಾಯಣ ವಿ
Published 16 ಏಪ್ರಿಲ್ 2020, 2:13 IST
Last Updated 16 ಏಪ್ರಿಲ್ 2020, 2:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೊರೊನಾ ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ಹೇರಲಾಗಿರುವ ದಿಗ್ಬಂಧನದಿಂದಾಗಿ ಜಿಲ್ಲೆಯಲ್ಲೂ ವಾಹನಗಳ ಅಪಘಾತ, ಅಪರಾಧ ಚಟುವಟಿಕೆಗಳಲ್ಲಿ ಗಣನೀಯ ಇಳಿಕೆ ಕಂಡಿದೆ.

ಮೂರು ವಾರಗಳಿಂದ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪೊಲೀಸ್‌ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್‌ ತಿಂಗಳ ಮೊದಲ ಎರಡು ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 49 ಪ್ರಕರಣಗಷ್ಟೇ ದಾಖಲಾಗಿವೆ. ಜನವರಿಯಲ್ಲಿ 197, ಫೆಬ್ರುವರಿಯಲ್ಲಿ 198 ಮತ್ತು ಮಾರ್ಚ್‌ನಲ್ಲಿ 231 ಪ್ರಕರಣಗಳು ದಾಖಲಾಗಿವೆ.

ಮಾರ್ಚ್‌ 24ರ ನಂತರ ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರ, ಜನರ ಓಡಾಟ, ಸಭೆ ಸಮಾರಂಭಗಳು, ಹಬ್ಬ, ಜಾತ್ರೆ, ಉತ್ಸವಗಳು ಎಲ್ಲ ರದ್ದಾಗಿವೆ. ಅತಿ ಅವಶ್ಯಕ ಸೇವೆಗಳನ್ನು ನೀಡುವ ಅಂಗಡಿಗಳನ್ನು ಬಿಟ್ಟರೆ ಎಲ್ಲವೂ ಮುಚ್ಚಿವೆ. ಜಿಲ್ಲೆಯೇ ಅಕ್ಷರಶಃ ಸ್ತಬ್ಧವಾಗಿರುವುದರಿಂದ ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಬಿದ್ದಿದೆ.

ADVERTISEMENT

ಅಪಘಾತ ಕಡಿಮೆ: ವಾಹನಗಳ ಓಡಾಟ ಕ್ಷೀಣವಾಗಿರುವುದರಿಂದ ಅಪಘಾತ ಪ್ರಕರಣಗಳು ಮಾರ್ಚ್‌ ಕೊನೆಯವಾರದಿಂದ ಇಳಿಕೆ ಕಂಡಿದೆ. ಏಪ್ರಿಲ್‌ ತಿಂಗಳಲ್ಲಿ ಇದುವರೆಗೆ ಎರಡು ಅಪಘಾತ ಪ್ರಕರಣಗಳು ಮಾತ್ರ ದಾಖಲಾಗಿವೆ. ಒಂದು ಸಾವು ಪ್ರಕರಣ, ಒಂದು ಗಾಯದ ಪ್ರಕರಣ ಮಾತ್ರ ನಡೆದಿದೆ.

ಮೂರು ವಾರಗಳಿಂದೀಚೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೂ ಅಗತ್ಯ ವಸ್ತುಗಳ ಖರೀದಿಗೆ ಬರುವ ಜನರು ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಸಂಚರಿಸುತ್ತಿದ್ದಾರೆ.

‘ಜಿಲ್ಲೆಯಲ್ಲಿ ಮಾರ್ಚ್‌ 24 ನಂತರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಖಾಸಗಿ ವಾಹನಗಳ ಓಡಾಟ ಬಹುತೇಕ ನಿಂತಿದೆ. ಹೀಗಾಗಿ, ಅಪಘಾತಗಳು ಹೆಚ್ಚು ನಡೆದಿಲ್ಲ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳದಂತಹ ಕೌಟುಂಬಿಕ ಪ್ರಕರಣಗಳೂ ಕಡಿಮೆಯಾಗಿವೆ. ಈ ವರ್ಷದ ಜನವರಿಯಲ್ಲಿ ಜಿಲ್ಲೆಯಾದ್ಯಂತ 13 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದರೆ, ಫೆಬ್ರುವರಿಯಲ್ಲಿ 9, ಮಾರ್ಚ್‌ನಲ್ಲಿ 19 ನಡೆದಿದ್ದವು. ಏಪ್ರಿಲ್‌ನಲ್ಲಿ ಒಂದು ಮಾತ್ರ ದಾಖಲಾಗಿದೆ.ವರದಕ್ಷಿಣೆ ಕಿರುಕುಳ ಪ್ರಕರಣಗಳು ಮೊದಲ ಮೂರು ತಿಂಗಳಲ್ಲಿ 4, 2 ಮತ್ತು 5 ದಾಖಲಾಗಿದ್ದರೆ, ಏಪ್ರಿಲ್‌ನಲ್ಲಿ ನಡೆದಿಲ್ಲ.

ಅಕ್ರಮ ಮದ್ಯ ಮಾರಾಟ ಮತ್ತು ಸಂಗ್ರಹದಂತಹ ಪ್ರಕರಣಗಳು ಜನವರಿಯಲ್ಲಿ 18, ಫೆಬ್ರುವರಿಯಲ್ಲಿ 13, ಮಾರ್ಚ್‌ನಲ್ಲಿ 25 ದಾಖಲಾಗಿವೆ. ಏಪ್ರಿಲ್‌ 14ರವರೆಗೆ ಐದು ದೂರುಗಳನ್ನು ಪೊಲೀಸರು ದಾಖಲಿಕೊಂಡಿದ್ದಾರೆ.

ಜೂಜಾಟಕ್ಕೆ ಬೀಳದ ಕಡಿವಾಣ

ಲಾಕ್‌ಡೌನ್‌ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಜನರು ಜೂಜಾಟವನ್ನು ಬಿಟ್ಟಿಲ್ಲ. ಪೊಲೀಸರೆಲ್ಲ ಲಾಕ್‌ಡೌನ್‌ ನಿಯಮ ಪಾಲನೆಯ ಕರ್ತವ್ಯದಲ್ಲಿ ತೊಡಗಿದ್ದರೆ, ಜನ ಅವರ ಕಣ್ತಪ್ಪಿಸಿ ಜೂಜಾಡುತ್ತಿದ್ದಾರೆ.

ಏಪ್ರಿಲ್‌ 13ರವರೆಗೆ ಜಿಲ್ಲೆಯಾದ್ಯಂತ 12 ಜೂಜಾಟದ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇವುಗಳ ಸಂಖ್ಯೆ ಜನವರಿಯಲ್ಲಿ 7, ಫೆಬ್ರುವರಿಯಲ್ಲಿ 14, ಮಾರ್ಚ್‌ನಲ್ಲಿ 27 ಇತ್ತು.

‘ನಮ್ಮ ಎಲ್ಲ ಸಿಬ್ಬಂದಿ ಕೋವಿಡ್‌–19 ನಿಯಂತ್ರಣದ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈಗ ನಮ್ಮ ಮೊದಲ ಗುರಿ ವೈರಸ್‌ನ ನಿಯಂತ್ರಣ. ನಗರಗಳಲ್ಲಿ ಜನರು ನಿಯಮ ಪಾಲನೆ, ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ಸೇರಿದಂತೆ ಬೇರೆ ಬೇರೆ ಕೆಲಸಗಳಲ್ಲಿ ಅವರು ನಿರತರಾಗಿದ್ದಾರೆ. ಇದರ ನಡುವೆಯೇ ಹಲವು ಕಡೆಗಳಲ್ಲಿ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ತಿಳಿಸಿದರು.

ಅಂಕಿ ಅಂಶ

197:ಜನವರಿ ತಿಂಗಳಲ್ಲಿ ಜಿಲ್ಲೆಯಾದ್ಯಂತ ದಾಖಲಾಗಿರುವ ಅಪರಾಧ ಪ್ರಕರಣಗಳು

198:ಫೆಬ್ರುವರಿ ತಿಂಗಳ ಪ್ರಕರಣಗಳು

231:ಮಾರ್ಚ್‌ ತಿಂಗಳಲ್ಲಿ ದಾಖಲಾದ ಮೊಕದ್ದಮೆಗಳು

49:ಏಪ್ರಿಲ್‌ 14ರವರೆಗಿನ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.