ADVERTISEMENT

ರಸ್ತೆಯಲ್ಲಿ ಕಡಿಮೆಯಾದ ಪ್ಲಾಸ್ಟಿಕ್: ವನ್ಯಜೀವಿಗಳು, ಪರಿಸರಕ್ಕೆ ವರವಾದ ಲಾಕ್‌ಡೌನ್

ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಪ್ರಾಣಿಗಳ ಸ್ವಚ್ಛಂದ ವಿಹಾರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 19:30 IST
Last Updated 4 ಜೂನ್ 2021, 19:30 IST
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕಂಡು ಬಂದ ಕಾಡಾನೆಗಳ ಹಿಂಡು
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕಂಡು ಬಂದ ಕಾಡಾನೆಗಳ ಹಿಂಡು   

ಹನೂರು: ಕೋವಿಡ್ 2ನೇ ಅಲೆಯ ಕಾರಣಕ್ಕೆ ಹೇರಲಾಗಿರುವ ನಿರ್ಬಂಧಗಳ ಕಾರಣಕ್ಕೆ ತಾಲ್ಲೂಕಿನ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವಾಹನಗಳ ಸಂಚಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ವನ್ಯಪ್ರಾಣಿಗಳಿಗೆ ವರವಾಗಿ ಪರಿಣಮಿಸಿದೆ.

ಮಹದೇಶ್ವರಬೆಟ್ಟಕ್ಕೆ ಹೋಗುವ ರಸ್ತೆ ಬದಿಗಳಲ್ಲಿ ರಾಶಿಯಾಗಿ ಸಿಗುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಕಡಿಮೆಯಾಗಿದೆ. ವಾಹನಗಳ ಸಂಖ್ಯೆ ಇಳಿಮುಖವಾಗಿರುವುದು ಪ್ರಾಣಿಗಳ ಸ್ವಚ್ಛಂದ ಸಂಚಾರಕ್ಕೆ ಇಂಬು ನೀಡಿದೆ.

ಮಲೆಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದ ಕೆಲವು ಮುಖ್ಯ ರಸ್ತೆ ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವನ್ಯಪ್ರಾಣಿಗಳು ಅಡ್ಡಾಡುತ್ತಿರುವ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹರಿದಾಡುತ್ತಿವೆ.

ADVERTISEMENT

ಕೋವಿಡ್ ಸರಪಳಿಯನ್ನು ತುಂಡರಿಸುವ ಸಲುವಾಗಿ ಒಂದು ತಿಂಗಳಿನಿಂದ ರಾಜ್ಯಸರ್ಕಾರ ಲಾಕ್ ಡೌನ್ ಘೋಷಿಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅದರಲ್ಲೂ ರಾಜ್ಯದ ನಾನಾ ಕಡೆಗಳಿಂದ ದಿನನಿತ್ಯ ನೂರಾರು ವಾಹನಗಳಿಂದ ತುಂಬಿ ತುಳುಕುತ್ತಿದ್ದ ಮಲೆಮಹದೇಶ್ವರ ಬೆಟ್ಟ ರಸ್ತೆ ಈಗ ಅಕ್ಷರಶಃ ಸ್ತಬ್ಧವಾಗಿದೆ. ಇದರಿಂದ ವನ್ಯಧಾಮದೊಳಗೆ ಎಲ್ಲೆಡೆ ನಿಶ್ಯಬ್ದದ ವಾತಾವರಣ ನಿರ್ಮಾಣವಾಗಿದೆ.

ಒಂದು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಬೆಟ್ಟದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಹಾಗೂ ಅಮಾವಾಸ್ಯೆ ಪೂಜೆಗಳಿಗೆ ಭಕ್ತರಿಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ವಾಹನಗಳ ಓಡಾಟ ಕಡಿಮೆಯಾಗುವುದರ ಜತೆಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆಯೂ ಕ್ಷೀಣಿಸಿತ್ತು. ಸಾಮಾನ್ಯ ದಿನಗಳಲ್ಲಿ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ 2ನೇ ಅಲೆಯನ್ನು ತಡೆಯುವ ಸಲುವಾಗಿ ಒಂದು ತಿಂಗಳಿನಿಂದ ಬೆಟ್ಟದಲ್ಲಿ ಸಾರ್ವಜನಿಕರಿಗೆ ದರ್ಶನವನ್ನು ನಿಷೇಧಿಸಲಾಗಿದೆ.

‘ಕೌದಳ್ಳಿಯಿಂದ ಮಲೆಮಹದೇಶ್ವರ ಬೆಟ್ಟ, ಬೆಟ್ಟದಿಂದ ಪಾಲಾರ್ ಹಾಗೂ ಪಾಲಾರ್‌ನಿಂದ ಹೊಗೆನಕಲ್ ಜಲಪಾತದ ರಸ್ತೆಗಳಲ್ಲಿ ವನ್ಯಪ್ರಾಣಿಗಳು ಓಡಾಡುತ್ತಿವೆ. ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಿದ ಮೇಲೆ ಅರಣ್ಯದೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಅಪರಾಧ ಪ್ರಕರಣಗಳು ಕ್ಷೀಣಿಸುವುದರ ಜತೆಗೆ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವೂ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

ತಗ್ಗಿದ ಪ್ಲಾಸ್ಟಿಕ್ ಪ್ರಮಾಣ
ಜಾತ್ರೆ ಹಾಗೂ ವಿಶೇಷ ಸಂದರ್ಭದಲ್ಲಿ ವಾಹನಗಳಲ್ಲಿ ಹಾಗೂ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಭಕ್ತರು ವನ್ಯಧಾಮದೊಳಗೆ ಎಲ್ಲೆಂದರಲ್ಲಿ ಉಪಹಾರ ಸೇವಿಸಿದ ಪ್ಲಾಸ್ಟಿಕ್ ತಟ್ಟೆಗಳು, ನೀರಿನ ಬಾಟಲಿಗಳು ಹಾಗೂ ತಂಪು ಪಾನೀಯ ಬಾಟಲಿಗಳನ್ನು ಎಸೆದು ಹೋಗುತ್ತಿದ್ದರು. 2019ರಲ್ಲಿ ಮಲೆಮಹದೇಶ್ವರ ವನ್ಯಧಾಮದ ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಕರ ತಂಡ ಕೋಣನಕೆರೆಯಿಂದ ಮಲೆಮಹದೇಶ್ವರ ಬೆಟ್ಟದವರೆಗೆ ಶ್ರಮದಾನ ನಡೆಸಿ ರಸ್ತೆ ಬದಿಯಲ್ಲಿದ್ದ ಸುಮಾರು ಐದು ಟನ್‌ಗಳಷ್ಟು ಪ್ಲಾಸ್ಟಿಕ್ ತೆರವುಗೊಳಿಸಿದ್ದರು. ಈಗ ಲಾಕ್ ಡೌನ್ ನಿಂದಾಗಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಪ್ರಮಾಣ ತಗ್ಗಿದೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು, ‘ವಾಹನ ಸಂಚಾರ ನಿಷೇಧದಿಂದಾಗಿ ವನ್ಯಧಾಮದೊಳಗೆ ಶಬ್ದ ಮಾಲಿನ್ಯ ಕಡಿಮೆಯಾಗಿದೆ. ಇದರಿಂದ ವನ್ಯಪ್ರಾಣಿಗಳಿಗೂ ಅನುಕೂಲವಾಗಿದೆ. ಮೊದಲು ರಸ್ತೆ ದಾಟಲು ರಾತ್ರಿಯಾಗುವುದನ್ನೇ ಕಾಯುತ್ತಿದ್ದ ಪ್ರಾಣಿಗಳು ಈಗ ಬೆಳಗಿನ ವೇಳೆಯಲ್ಲೇ ನಿರ್ಭಯದಿಂದ ರಸ್ತೆ ದಾಟುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.