ADVERTISEMENT

ಚಾಮರಾಜನಗರ: ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಿಸಿದ ಬಿಎಸ್‌ಪಿ

ಉಮೇದುವಾರಿಕೆ ಸಲ್ಲಿಕೆ ಮುಕ್ತಾಯ, ಕೊನೆಯ ದಿನ ಒಂಬತ್ತು ಮಂದಿ ನಾಮಪತ್ರ,

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:00 IST
Last Updated 4 ಏಪ್ರಿಲ್ 2024, 16:00 IST
ಬಿಎಸ್‌ಪಿ ಅಭ್ಯರ್ಥಿಯಾಗಿ ಎಂ.ಕೃಷ್ಣಮೂರ್ತಿ ಅವರು ಗುರುವಾರ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್‌, ಮುಖಂಡ ಸಿ.ಮಹದೇವಯ್ಯ, ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ ಜೊತೆಗಿದ್ದರು. ಹೆಚ್ಚವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಪಾಲ್ಗೊಂಡಿದ್ದರು
ಬಿಎಸ್‌ಪಿ ಅಭ್ಯರ್ಥಿಯಾಗಿ ಎಂ.ಕೃಷ್ಣಮೂರ್ತಿ ಅವರು ಗುರುವಾರ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್‌, ಮುಖಂಡ ಸಿ.ಮಹದೇವಯ್ಯ, ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ ಜೊತೆಗಿದ್ದರು. ಹೆಚ್ಚವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಪಾಲ್ಗೊಂಡಿದ್ದರು   

ಚಾಮರಾಜನಗರ: ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದ್ದು, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 25 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಉಮೇದುವಾರಿಕೆ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಬಿಎಸ್‌ಪಿ ಅಭ್ಯರ್ಥಿ ಸೇರಿದಂತೆ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದರು.

ಕೊನೆ ಕ್ಷಣದಲ್ಲಿ ಬದಲು: ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ತನ್ನ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿದೆ. ಬಿಎಸ್‌ಪಿ ರಾಜ್ಯ ಸಂಯೋಜಕರಾದ ಎಂ.ಕೃಷ್ಣಮೂರ್ತಿ ಅವರನ್ನು ಕಣಕ್ಕಿಳಿಸಿದೆ.

ADVERTISEMENT

ಪಕ್ಷವು ಈ ಮೊದಲು ನಿವೃತ್ತ ತಹಶೀಲ್ದಾರ್‌ ಸಿ.ಮಹದೇವಯ್ಯ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು. ಅವರು ಕೂಡ ಕ್ಷೇತ್ರದಾದ್ಯಂತ ಓಡಾಡಿ ಪ್ರಚಾರ ನಡೆಸಿದ್ದರು. ಆದರೆ, ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಇದ್ದುದರಿಂದ, ಕೊನೆ ಗಳಿಗೆಯಲ್ಲಿ ವರಿಷ್ಠರ ಸೂಚನೆಯಂತೆ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

‘ಬುಧವಾರದವರೆಗೂ ಮಹದೇವಯ್ಯ ಅವರೇ ಅಭ್ಯರ್ಥಿಯಾಗಿದ್ದರು. ಅವರ ಮೇಲಿದ್ದ ಕ್ರಿಮಿನಲ್‌ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇತ್ತು. ಅದು ಈ ವಾರದ ಆರಂಭದಲ್ಲಿ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದ್ದರು. ಆದರೆ, ನ್ಯಾಯಾಲಯದಲ್ಲಿ ವಿಲೇವಾರಿಯಾಗಿಲ್ಲ. ಬುಧವಾರ ಸಂಜೆ ಇದನ್ನು ಅವರು ಗಮನಕ್ಕೆ ತಂದರು. ಅಪರಾಧ ಪ್ರಕರಣ ಎದುರಿಸುತ್ತಿರುವವರಿಗೆ ಟಿಕೆಟ್‌ ಕೊಡಬಾರದು ಎಂಬ ನಿರ್ಧಾರವನ್ನು ‍ಪಕ್ಷದ ಕೇಂದ್ರ ಸಮಿತಿ ಕೈಗೊಂಡಿರುವುದರಿಂದ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ’ ಎಂದು ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಎನ್‌.ನಾಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖಂಡರು, ಕಾರ್ಯಕರ್ತರ ಮೆರವಣಿಗೆ: ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಎಂ.ಕೃಷ್ಣಮೂರ್ತಿ ಅವರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್‌, ಪಕ್ಷದ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಸಿ.ಮಹದೇವಯ್ಯ ಹಾಗೂ ಇತರ ಮುಖಂಡರು, ಕಾರ್ಯಕರ್ತರೊಂದಿಗೆ ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ ಮುಖ್ಯಗೇಟ್ ವರೆಗೂ ಮೆರವಣಿಗೆ ನಡೆಸಿದರು. 

ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ರಾಜ್ಯ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಜೊತೆಯಾದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿಯಪ್ಪ ಅವರು‌, ‘ಪಕ್ಷದಿಂದ ಎಂ.ಕೃಷ್ಣಮೂರ್ತಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್, ಬಿಜೆಪಿಯಲ್ಲಿ ಬಿ.ಫಾರಂಗೆ ₹10, ₹20 ಕೋಟಿ ಕೊಡಬೇಕಿದೆ. ಮತದಾರರಿಗೆ ₹1000 , ₹2000 ನೀಡುತ್ತಿದ್ದಾರೆ. ಟಿವಿ, ಬಂಗಾರ ನೀಡುತ್ತಾರೆ. ಆ ಸಂಸ್ಕೃತಿ ಬಿಎಸ್‌ಪಿಯಲ್ಲಿ ಇಲ್ಲ.  ಒಂದು ನೋಟು, ಒಂದು ವೋಟು ಸಿದ್ಧಾಂತದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದರು.

ಆಕಸ್ಮಿಕ ಸ್ಪರ್ಧೆ: ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಮಾತನಾಡಿ, ‘ಆಕಸ್ಮಿಕ, ಅನಿವಾರ್ಯವಾಗಿ ಸ್ಪರ್ಧೆ ಮಾಡಬೇಕಾಯಿತು. ನನಗಿಂತ ಮೊದಲು ಸಿ.ಮಹದೇವಯ್ಯ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತಾಗಿ ಎಲ್ಲ ಪಕ್ಷದ ಮುಖಂಡರು ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದರು ಪದಾಧಿಕಾರಿಗಳ ಆಶಯದಂತೆ ನಾನು ಸ್ಪರ್ಧೆ ಮಾಡಿದ್ದೇನೆ. 2001 ರಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಿರಂತರ ಸಂಪರ್ಕ ಹೊಂದಿದ್ದೇನೆ. ಬಹುಜನ ಚಳವಳಿಯನ್ನು ಬಹಳ ತಳಮಟ್ಟದಿಂದ ಕಟ್ಟಿದ್ದೇನೆ’ ಎಂದರು.

ಗೆಲುವಿಗೆ ಶ್ರಮಿಸುವೆ: ಸ್ಪರ್ಧೆಯಿಂದ ಹಿಂದೆ ಸರಿದ ನಿವೃತ್ತ ತಹಶೀಲ್ದಾರ್ ಸಿ.ಮಹದೇವಯ್ಯ ಮಾತನಾಡಿ, ‘ತಾಂತ್ರಿಕ ಕಾರಣದಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗಬಾರದೆಂದು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ನನ್ನ ಬದಲಾಗಿ ಸ್ಪರ್ಧಿಸಿರುವ ಕೃಷ್ಣಮೂರ್ತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಅವರ ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.

ಕೊನೆ ದಿನ 9 ಅಭ್ಯರ್ಥಿಗಳಿಂದ ಉಮೇದುವಾರಿಕೆ

ಕೊನೆಯ ದಿನ ಬಿಎಸ್‌ಪಿಯ ಕೃಷ್ಣಮೂರ್ತಿ ಸೇರಿದಂತೆ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದರು.  ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ಸಿ.ಎಂ.ಕೃಷ್ಣ ಕರ್ನಾಟಕ ಪ್ರಜಾ ಪಾರ್ಟಿಯ (ರೈತ ಪರ್ವ) ಪ್ರಸನ್ನ ಕುಮಾರ್.ಬಿ ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)ಯಿಂದ ಚಾಮದಾಸಯ್ಯ ಪಕ್ಷೇತರ ಅಭ್ಯರ್ಥಿಗಳಾಗಿ ಸುಭಾಷ್ ಚಂದ್ರ. ಕೆ ನಟರಾಜು ನಿಂಗರಾಜು. ಜಿ.ಸಿ.ರಾಜು ನಿಂಗರಾಜು ಜೆ ಉಮೇದುವಾರಿಕೆ ಸಲ್ಲಿಸಿದ ಇತರರು.    ಇದುವರೆಗೆ 25 ಅಭ್ಯರ್ಥಿಗಳಿಂದ 36 ನಾಮಪತ್ರಗಳು ಸಲ್ಲಿಕೆಯಾಗಿವೆ.   ಉಳಿದ 16 ಅಭ್ಯರ್ಥಿಗಳು: ಈ ಮೊದಲು ನಿಂಗರಾಜು ಎಸ್‌. (ಕರ್ನಾಟಕ ಜನತಾ ಪಕ್ಷ) ಸುಮಾ ಎಸ್‌ (ಎಸ್‌ಯುಸಿಐ–ಸಿ) ಪ್ರದೀಪ್‌ಕುಮಾರ್‌ (ಪಕ್ಷೇತರ) ಮಹೇಶ ಎಂ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ಗುರುಲಿಂಗಯ್ಯ (ಪಕ್ಷೇತರ) ರಾಜು ಕೆ. (ಪಕ್ಷೇತರ) ಎಂ.ನಾಗೇಂದ್ರ ಬಾಬು (ಪಕ್ಷೇತರ) ಎನ್‌.ಅಂಬರೀಷ್‌ (ಪಕ್ಷೇತರ) ಮಹದೇವಸ್ವಾಮಿ ಬಿ.ಎಂ (ಪಕ್ಷೇತರ) ಸಿ.ಶಂಕರ (ಪಕ್ಷೇತರ) ಜಿ.ಡಿ.ರಾಜಗೋಪಾಲ (ಪಕ್ಷೇತರ) ಸುನೀಲ್‌ ಬೋಸ್‌ (ಕಾಂಗ್ರೆಸ್‌) ಎಸ್‌.ಬಾಲರಾಜು (ಬಿಜೆಪಿ) ಬಾಲಯ್ಯ (ಪಕ್ಷೇತರ) ಎಚ್‌.ಕೆ.ಸ್ವಾಮಿ (ಪಕ್ಷೇತರ) ಸಣ್ಣಸ್ವಾಮಿ (ಪಕ್ಷೇತರ) ಉಮೇದುವಾರಿಕೆ ಸಲ್ಲಿಸಿದ್ದರು.   ಇಂದು ಪರಿಶೀಲನೆ: ನಾಮಪತ್ರಗಳ ಪರಿಶೀಲನಾ ಕಾರ್ಯ ಶುಕ್ರವಾರ (ಏಪ್ರಿಲ್‌ 5) ನಡೆಯಲಿದೆ. 

ಪ್ರಸನ್ನಕುಮಾರ್ ಕರ್ನಾಟಕ ಪ್ರಜಾಪಾರ್ಟಿಯ ಅಭ್ಯರ್ಥಿ

ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ) ಪಕ್ಷದ ಅಭ್ಯರ್ಥಿಯಾಗಿ ವಕೀಲ ಬಿ.ಪ್ರಸನ್ನಕುಮಾರ್ ಉಮೇದುವಾರಿಕೆ ಸಲ್ಲಿಸಿದರು. ಕರ್ನಾಟಕ ಪ್ರಜಾಪಾರ್ಟಿ ರಾಜ್ಯಾಧ್ಯಕ್ಷ ವಿ.ಶಿವಣ್ಣ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಕುಣಗಳ್ಳಿರಂಗಸ್ವಾಮಿ ವಕೀಲ ದೇವರಾಜು ಇದ್ದರು.  ನಾಮಪತ್ರ ಸಲ್ಲಿಸಿದ ಪಕ್ಷದ ರಾಜ್ಯಾಧ್ಯಕ್ಷ ವಿ.ಶಿವಣ್ಣ ಮಾತನಾಡಿ ‘ದೇಶವನ್ನಾಳಿದ ಕಾಂಗ್ರೆಸ್ ಬಿಜೆಪಿ ದೇಶದ ಜನತೆಗೆ ಉತ್ತಮ ಆರೋಗ್ಯ ಶಿಕ್ಷಣ ಸೇವೆ ಕೊಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ರಾಜ್ಯದ ಹಿತಕಾಯುವ ಕರ್ನಾಟಕ ಪ್ರಜಾಪಾರ್ಟಿಯಿಂದ ಮೈಸೂರು ಮಂಡ್ಯ ಚಾಮರಾಜನಗರ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.