ADVERTISEMENT

ಇಂಡಿಗನತ್ತ: 29ರಂದು ಮರು ಮತದಾನ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 20:42 IST
Last Updated 27 ಏಪ್ರಿಲ್ 2024, 20:42 IST
ಇಂಡಿಗನತ್ತ ಗ್ರಾಮಕ್ಕೆ ಶನಿವಾರ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು. ಆರೋಗ್ಯ ಸಿಬ್ಬಂದಿ ಕೂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಿದರು
ಇಂಡಿಗನತ್ತ ಗ್ರಾಮಕ್ಕೆ ಶನಿವಾರ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು. ಆರೋಗ್ಯ ಸಿಬ್ಬಂದಿ ಕೂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಿದರು   

ಚಾಮರಾಜನಗರ: ಲೋಕಸಭೆ ಚುನಾವಣೆ ಮತದಾನದ ಸಂದರ್ಭದಲ್ಲಿ ಘರ್ಷಣೆಯಿಂದಾಗಿ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂ ಹಾನಿಗೊಳಗಾಗಿದ್ದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏ.29) ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.

ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ 528 ಮತದಾರರಿದ್ದಾರೆ. ಶುಕ್ರವಾರ ಇಲ್ಲಿ ಒಂಬತ್ತು ಮಂದಿಯಷ್ಟೇ ಮತದಾನ ಮಾಡಿದ್ದರು.  

ಮತದಾನ ಬಹಿಷ್ಕಾರದ ವಿಚಾರದಲ್ಲಿ ಇಂಡಿಗನತ್ತ, ಮೆಂದಾರೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಉಂಟಾದ ಘರ್ಷಣೆ ಸಂದರ್ಭದಲ್ಲಿ ಉದ್ರಿಕ್ತರು, ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೇ ಒಳಗ್ಗೆ ನುಗ್ಗಿ ಇನ್ನಿತರ ಪರಿಕರಗಳನ್ನು ಕೆಳಕ್ಕೆ ಎಸೆದು ಹಾನಿ ಮಾಡಿದ್ದರು. ಇವಿಎಂಗೆ ಬೆಂಕಿ ಹಚ್ಚಲೂ ಯತ್ನಿಸಿದ್ದರು.

ADVERTISEMENT

ಘಟನೆ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ. ಶಿಲ್ಪಾನಾಗ್‌ ಹಾಗೂ ಸಾಮಾನ್ಯ ವೀಕ್ಷಕ ಪಾರ್ಥ ಗುಪ್ತ ಅವರು ಆಯೋಗಕ್ಕೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 58 (2) ಮತ್ತು 58 ಎ(2) ಅಡಿಯಲ್ಲಿ ಮರು ಮತದಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಚುನಾವಣಾ ಆಯೋಗವು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. 

40 ಮಂದಿ ವಿರುದ್ಧ ಎಫ್‌ಐಆರ್‌: ಈ ಮಧ್ಯೆ, ಶುಕ್ರವಾರದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು 41 ಗ್ರಾಮಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.