ADVERTISEMENT

ಇಂಧನ ಬೆಲೆ ಏರಿಕೆ ಖಂಡಿಸಿ ಲಾರಿ, ಟೆಂಪೊ ಮಾಲೀಕರ ಪ್ರತಿಭಟನೆ

ರಾಷ್ಟ್ರದಾದ್ಯಂತ ನಡೆ‌ಯುತ್ತಿರುವ ಮುಷ್ಕರಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 12:03 IST
Last Updated 26 ಫೆಬ್ರುವರಿ 2021, 12:03 IST
ರಾಷ್ಟ್ರದಾದ್ಯಂತ ನಡೆಯುತ್ತಿರುವ ಮುಷ್ಕರವನ್ನು ಬೆಂಬಲಿಸಿ ಚಾಮರಾಜನಗರದಲ್ಲಿ ಲಾರಿ ಮತ್ತು ಟೆಂಪೊ ಮಾಲೀಕರು ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಷ್ಟ್ರದಾದ್ಯಂತ ನಡೆಯುತ್ತಿರುವ ಮುಷ್ಕರವನ್ನು ಬೆಂಬಲಿಸಿ ಚಾಮರಾಜನಗರದಲ್ಲಿ ಲಾರಿ ಮತ್ತು ಟೆಂಪೊ ಮಾಲೀಕರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಇಂಧನ ಬೆಲೆ ಏರಿಕೆ, ಹಳೆ ವಾಹನಗಳ ಗುಜರಿ ನೀತಿ ಹಾಗೂ ಫಾಸ್ಟ್ಯಾಗ್‌ಗಳ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ಲಾರಿ ಮತ್ತು ಟೆಂಪೊ ಮಾಲೀಕರು ನಡೆಸುತ್ತಿರುವ ಮುಷ್ಕರವನ್ನು ಬೆಂಬಲಿಸಿ ನಗರದಲ್ಲಿ ಲೋಕಲ್ ಲಾರಿ ಮತ್ತು ಟೆಂಪೊ ಮಾಲೀಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುಲ್ತಾನ್ ಷರೀಫ್ ವೃತ್ತದಲ್ಲಿ ಸೇರಿದ ಪ್ರತಿಭಟನನಿರತರು, ಕೆಲಕಾಲ ರಸ್ತೆತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಡಿ.ಜಿಯಾಉಲ್ಲಾ ಅವರು, ‘ಸತತವಾಗಿ ಇಂಧನ ಬೆಲೆ ಏರಿಕೆಯಿಂದಾಗಿ ಸರಕು ವಾಹನಗಳ ಮಾಲೀಕರಿಗೆ ತುಂಬಾ ತೊಂದರೆಯಾಗಿದೆ. ವಾಹನಗಳ ನಿರ್ವಹಣೆ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿದೆ. ಸರ್ಕಾರ ರೂಪಿಸಿರುವ ವಾಹನಗಳ ಗುಜರಿ ನೀತಿ ಕೂಡ ಮಾಲೀಕರಿಗೆ ನಷ್ಟ ಉಂಟು ಮಾಡಲಿದೆ. ಫಾಸ್ಟ್ಯಾಗ್‌ ಬೆಲೆ ಏರಿಕೆಯಾಗಿರುವುದರಿಂದ ವಾಹನಗಳ ಮಾಲೀಕರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ’ ಎಂದು ಆರೋಪಿಸಿದರು.

ADVERTISEMENT

‘ಕೇಂದ್ರ ಸರ್ಕಾರ ತನ್ನ ನೀತಿಗಳನ್ನು ಪರಾಮರ್ಶಿಸಬೇಕು. ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ನಾಸೀರ್ ಖಾನ್, ಕಾರ್ಯದರ್ಶಿ ಡಿ.ಕೆ.ಇರ್ಷಾದ್, ಖಜಾಂಚಿ ನಯೀಮ್ ಉಲ್ಲಾಖಾನ್, ನಿರ್ದೇಶಕ ರಾಧಾ ಮಹೇಶ್, ಅಸ್ಲಾಂ ಪಾಷ, ಶಕೀಲ್, ಆರೀಫ್, ಆಸೀಫ್ ಉಲ್ಲಾ, ಫಾಜಿಲ್ ಷರೀಫ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.