ADVERTISEMENT

ಶಿವರಾತ್ರಿ ಜಾತ್ರಾ ಮಹೋತ್ಸವ: ಮಾದಪ್ಪನ ಕ್ಷೇತ್ರದಲ್ಲಿ ಭಕ್ತರ ದಂಡು, ಜಾಗರಣೆ

ಐದು ದಿನಗಳ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ, ವಿಶೇಷ ಪೂಜಾ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 6:00 IST
Last Updated 8 ಮಾರ್ಚ್ 2024, 6:00 IST
ಶಿವರಾತ್ರಿ ಜಾತ್ರೆಯ ಮೊದಲ ದಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೇರಿದ್ದ ಭಕ್ತರು
ಶಿವರಾತ್ರಿ ಜಾತ್ರೆಯ ಮೊದಲ ದಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೇರಿದ್ದ ಭಕ್ತರು   

ಮಹದೇಶ್ವರ ಬೆಟ್ಟ: ಇಲ್ಲಿನ ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಗುರುವಾರ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಚಾಲನೆ ದೊರಕಿದೆ. 

ಬೆಳಿಗ್ಗೆಯಿಂದಲೇ ಭಕ್ತರ ದಂಡು ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಬಂದಿದ್ದು, ಸಂಜೆಯ ನಂತರ ಭಕ್ತಾದಿಗಳ ಸಂಖ್ಯೆ ಇಮ್ಮಡಿಗೊಂಡಿತು. ರಾತ್ರಿ ಮಹದೇಶ್ವರ ಸ್ವಾಮಿಗೆ ಬೇಡಗಂಪಣ ಸಮುದಾಯದ ವಿಧಿ ವಿಧಾನಗಳಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.  

ಪಾದಯಾತ್ರೆಯ ಮೂಲಕ ಬಂದ ಭಕ್ತರು ಮಾತ್ರವಲ್ಲದೇ, ಜಿಲ್ಲೆ, ಹೊರ ಜಿಲ್ಲೆಗಳು, ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಕ್ಷೇತ್ರಕ್ಕೆ ಭಕ್ತರು ಬಂದಿದ್ದು, ವಿವಿಧ ಸೇವೆಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. 

ADVERTISEMENT

ಮಹಾಶಿವರಾತ್ರಿಯ ದಿನದಂದು ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಸಾವಿರಾರು ಭಕ್ತರು ರಾತ್ರಿ ಬೆಟ್ಟದಲ್ಲೇ ಉಳಿದು ದೇವಾಲಯದ ಆವರಣದಲ್ಲಿ ಜಾಗರಣೆ ಮಾಡುತ್ತಾರೆ. 

ಶುಕ್ರವಾರ ಮಹಾಶಿವರಾತ್ರಿಯಾಗಿದ್ದು, ಮಹದೇಶ್ವರ ಸ್ವಾಮಿಗೆ ಬೆಳಿಗ್ಗೆಯಿಂದಲೇ ವಿವಿಧ ಉತ್ಸಾವದಿಗಳು ನಡೆಯಲಿವೆ. ಭಕ್ತರು ರಾತ್ರಿ ಜಾಗರಣೆ ಮಾಡಲಿದ್ದಾರೆ. 

ರಜಾ ಸೇವೆ: ಜಾತ್ರೆಗೆ ಗಡಿ ಗ್ರಾಮಗಳಿಂದ ಬರುವ ಭಕ್ತರು ದೇವಾಲಯದ ಸುತ್ತಲೂ ರಜಾ (ಕಸ) ಹೊಡೆದು ಮಾದಪ್ಪನಿಗೆ ಸೇವೆ ಸಲ್ಲಿಸುವ ವಾಡಿಕೆ ಇದೆ. 

ದೀಪಾವಳಿ ಜಾತ್ರೆಯಲ್ಲಿ ಮಣ್ಣಿನ ಹಣತೆಯನ್ನು ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿದರೆ, ಶಿವರಾತ್ರಿ ಸಂದರ್ಭದಲ್ಲಿ ರಜಾ ಹೊಡೆದು, ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ ಮಾದಪ್ಪನ ಹರಕೆ ತೀರಿಸುವುದು ವಾಡಿಕೆ. 

ಗುರುವಾರ ಬೆಳಿಗ್ಗೆಯಿಂದಲೇ ಕ್ಷೇತ್ರಕ್ಕೆ ಬಂದ ಭಕ್ತರು, ಮಾದಪ್ಪನ ದರ್ಶನ ಮಾಡಿ, ಹುಲಿ ವಾಹನ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ರಾತ್ರಿ ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದರು. ದಾಸೋಹ ಪ್ರಸಾದ ಸ್ವೀಕರಿಸಿದರು. 

ಬಿಸಿಲಿನ ಝಳಕ್ಕೆ ಭಕ್ತರಿಗೆ ತಂಪಾದ ನೀರು ಪೂರೈಸುವುದಕ್ಕಾಗಿ ಮಡಕೆಗಳಲ್ಲಿ ನೀರು ತುಂಬಿಸಿ ಇಟ್ಟಿರುವುದು

ಜಾತ್ರೆಯ ಮೊದಲ ದಿನ, ಮಕ್ಕಳಿಗೆ ಹಾಲುಣಿಸುವ ಕೇಂದ್ರ ಮಾತೃ ಕುಟೀರ ಮತ್ತು ಬಿಸಿಲ ಬೇಗೆಗೆ ಭಕ್ತರ ದಾಹ ತೀರಿಸಲು ಅಲ್ಲಲ್ಲಿ ಕಲ್ಪಿಸಲಾಗಿದ್ದ ಮಡಕೆಗಳನ್ನು ಇಟ್ಟು ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಯಿತು. 

ಭಕ್ತರು ದೇವಾಲಯದ ಆವರಣದಲ್ಲಿ ಕಸ ಗುಡಿಸುವುದರ ಮೂಲಕ ರಜಾ ಸೇವೆ ಸಲ್ಲಿಸಿದರು

ಲಾಡು ತಯಾರಿಸಲು ಸೂಚನೆ

ಈ ಮಧ್ಯೆ ನಿರೀಕ್ಷೆಗೂ ಮೀರಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಹೆಚ್ಚು ಲಾಡು ಪ್ರಸಾದ ತಯಾರಿಸುವಂತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಅಧಿಕಾರಿಗಳಿಗೆ ಸೂಚಿಸಿದರು.  ಲಾಡು ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಲಾಡು ತಯಾರಿಯನ್ನು ವೀಕ್ಷಿಸಿದರು. ದಾಸೋಹ ಭವನ ಅಡುಗೆ ಘಟಕಕ್ಕೆ ಭೇಟಿ ನೀಡಿ ಸರಿಯಾದ ಊಟದ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.  ದೇವಾಲಯದ ಸುತ್ತಲೂ ಉರುಳುಸೇವೆ ಮಾಡುವ ಭಕ್ತರಿಗೆ ಬಿಸಿಲಿನ ಪರಿಣಾಮ ಆಗದಂತೆ ಮಾಡಲು ಮ್ಯಾಟ್‌ ಹಾಕಿ ಅದರ ಮೇಲೆ ನೀರು ಚಿಮುಕಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.