ಮಹದೇಶ್ವರ ಬೆಟ್ಟ: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ವಿಜೃಂಭಣೆಯಿಂದ ಯುಗಾದಿ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜರುಗಿತು.
ಕ್ಷೇತ್ರದಲ್ಲಿ ಮಾರ್ಚ್ 27ರಿಂದ ಆರಂಭವಾಗಿದ್ದ ಜಾತ್ರಾ ಮಹೋತ್ಸವ ಭಾನುವಾರ ಮಹಾರಥೋತ್ಸವದೊಂದಿಗೆ ತೆರೆಬಿದ್ದಿತು. ಭಕ್ತರು ಪವಾಡ ಪುರುಷ ಮಾದೇಶ್ವರನ ಸ್ಮರಣೆ ಮಾಡಿದರು.
ಬೇಡಗಂಪಣ ಸಮುದಾಯದ ಧಾರ್ಮಿಕ ವಿಧಿ– ವಿಧಾನಗಳಂತೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾದೇಶ್ವರನ ಸನ್ನಿಧಿಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ತಮಿಳುನಾಡಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕಾಗಿ ಬಂದಿದ್ದರು.
ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ, ಚಿನ್ನದ ತೇರು ಹಾಗೂ ಮಾದೇಶ್ವರನಿಗೆ ಮಹಾ ರುದ್ರಾಭಿಷೇಕ, ಧೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ ಹಾಗೂ ಅಭಿಷೇಕ ಪೂಜೆಗಳಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡು ಮಾದೇಶ್ವರನ ಸ್ಮರಣೆ ಮಾಡಿದರು.
ಜಾತ್ರಾ ಮಹೋತ್ಸವದ ವೇಳೆ ಭಕ್ತರ ಉಘೇ ಉಘೇ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಸಂಪ್ರದಾಯದಂತೆ ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳು ಮಾದಪ್ಪನಿಗೆ ಬೆಲ್ಲದ ಆರತಿ ಮಾಡಿದರು. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಾದೇಶ್ವರ ಸ್ವಾಮಿ ಮಹಾ ರಥೋತ್ಸವ ಜರುಗಿತು.
ಆರಂಭದಲ್ಲಿ ಮಾದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಬಿಳಿ ಆನೆ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ, ದೇವಾಲಯದ ಒಳ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಬೆಲ್ಲದ ಆರತಿ ಮಾಡಿ, ತೆಗೆದು ಮಂಗಳವಾದ್ಯಗಳ ಸಮೇತ ಮೆರವಣಿಗೆ ಮಾಡಲಾಯಿತು. ತೇರಿನಲ್ಲಿ ಪ್ರತಿಷ್ಠಾಪಿಸಿದ್ದ ಮಾದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಬೂದುಗುಂಬಳದ ದೃಷ್ಟಿ ತೆಗೆಯಲಾಯಿತು. ಬೆಳಿಗ್ಗೆ 8.30ಕ್ಕೆ ಆರಂಭವಾದ ಮಹಾ ರಥೋತ್ಸವ 8.42ಕ್ಕೆ ಮುಕ್ತಾಯಗೊಂಡಿತು. ಈ ಸುಂದರ ಕ್ಷಣಗಳನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.
ಭಕ್ತರನ್ನು ರಂಜಿಸಿದ ಕಲಾವಿದರು: ಯುಗಾದಿ ಜಾತ್ರೆಯ ಅಂಗವಾಗಿ ಕ್ಷೇತ್ರಕ್ಕೆ ಬಂದಿದ್ದ ಭಕ್ತರಿಗೆ ಜನಪದ ಗಾಯಕರು ಗಾಯನದ ಸವಿ ಉಣಬಡಿಸಿದರು.
ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹದೇವ ಅವರ ತಂಡ, ಮೂಗಪ್ಪ– ರಾಮವ್ವ ತಾಯಿಯವರ ವಂಶಸ್ಥರ ನೇತೃತ್ವದಲ್ಲಿ ಜಾನಪದ ಕಾರ್ಯಕ್ರಮ ನಡೆಯಿತು. ಮಾದಪ್ಪನ ಕುರಿತಾದ ಗೀತೆಗಳು ಸುಶ್ರಾವ್ಯವಾಗಿ ಹಾಡಿ ಭಕ್ತರನ್ನು ಮನಸ್ಸನ್ನು ಮುದಗೊಳಿಸಿದರು.
ಭಕ್ತರಿಂದ ಉಘೇ ಉಘೇ ಹರ್ಷೋದ್ಗಾರ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಉತ್ಸವ ಕಣ್ತುಂಬಿಕೊಂಡ ಸಹಸ್ರಾರು ಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.