ADVERTISEMENT

ಮಾದಪ್ಪನ ಪ್ರತಿಮೆ ಮುಂದೆ ರೀಲ್ಸ್‌: ಮಹಿಳೆ, ಚಾಲಕನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:35 IST
Last Updated 22 ಡಿಸೆಂಬರ್ 2025, 2:35 IST
   

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿರುವ 108 ಅಡಿ ಮಾದಪ್ಪನ ಪ್ರತಿಮೆ ಎದುರು ಹಿಟಾಚಿಯ ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿದ್ದ ಮಹಿಳೆ ಹಾಗೂ ವಾಹನ ಚಾಲಕನ ವಿರುದ್ಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಸ್‌ಐ ಜಯರಾಮ್ ಸಿ.ಎನ್‌ ನೀಡಿರುವ ದೂರನ್ನು ಆಧರಿಸಿ ಅಪರಿಚಿತ ಮಹಿಳೆ ಹಾಗೂ ಹಿಟಾಚಿಯ ಚಾಲಕ ಮುಕೇಶ್‌ ವಿರುದ್ಧ ಕಲಂ 281 ಹಾಗೂ 125 ಬಿಎನ್‌ಎಸ್‌ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ದೂರಿನಲ್ಲಿ ಏನಿದೆ: ಡಿ.20ರಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಮಹದೇಶ್ವರನ ಪ್ರತಿಮೆಯ ಮುಂದೆ ಹಿಟಾಚಿಯ ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಘಟನೆ ಸಂಬಂಧ ತನಿಖೆ ನಡೆಸಿದಾಗ ಒಂದು ತಿಂಗಳ ಹಿಂದೆ ಪ್ರತಿಮೆಯ ಬಳಿ ಕೆಲಸ ಮಾಡುವ ಚಾಲಕ ಮುಕೇಶ್ ಕುಮಾರ್ ಎಂಬಾತ ಮಹಿಳೆಯನ್ನು ಹಿಟಾಚಿಯ ಬಕೆಟ್‌ನಲ್ಲಿ ಕೂರಿಸಿಕೊಂಡು ಅಜಾಗರೂಕತೆಯಿಂದ ಮಾದಪ್ಪನ ಪ್ರತಿಮೆಯ ಸಮೀಪ ತೆಗೆದುಕೊಂಡು ಹೋಗುವುದು ಗಮನಕ್ಕೆ ಬಂತು.

ADVERTISEMENT

ಅದರಂತೆ ಪ್ರಾಣಹಾನಿ ಸಂಭವ ಇದ್ದರೂ ಮಹಿಳೆ ಹಾಗೂ ಚಾಲಕ ಅಜಾಗರೂಕತೆಯಿಂದ ವರ್ತಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ 108 ಅಡಿಯ ಮಹದೇಶ್ವರ ಸ್ವಾಮಿಯ ಪ್ರತಿಮೆ ನಿರ್ಮಾಣ ಹೊರತುಪಡಿಸಿದರೆ ಶೇ 90ರಷ್ಟು ಕಾಮಗಾರಿಗಳು ಬಾಕಿ ಇವೆ. ಕಾಮಗಾರಿ ನಡೆಯುತ್ತಿರುವುದರಿಂದ ಸ್ಥಳಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಮಹಿಳೆಯೊಬ್ಬರು ದೀಪದಗಿರಿ ಒಡ್ಡು ಪ್ರವೇಶಿಸಿ ಪ್ರತಿಮೆ ಬಳಿ ಅಪಾಯಕಾರಿಯಾಗಿ ರೀಲ್ಸ್ ಮಾಡಲು ಅನುಮತಿ ನೀಡಿದ್ದು ಯಾರು ಎಂದು ಭಕ್ತರು ಪ್ರಶ್ನಿಸಿದ್ದಾರೆ.

‘ಕೃತ್ಯಕ್ಕೆ ಸಹಕರಿಸಿದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು’ ಎಂದು ಕನ್ನಡಿಗರ ವಿಜಯಸೇನೆ ಸಂಘಟನೆ ಕೂಡ ‌ಮಹದೇಶ್ವರ ಬೆಟ್ಟ ಪೋಲೀಸ್ ಠಾಣೆಗೆ ದೂರು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.