
ಮಹದೇಶ್ವರ ಬೆಟ್ಟ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರನ ದೇವಾಲಯದ ದೀಪದಗಿರಿ ಒಡ್ಡಿನಲ್ಲಿ ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ಮಾದಪ್ಪನ ಮಹಾ ಜ್ಯೋತಿ ಬೆಳಗಿಸಲಾಯಿತು.
ನಾಡಿನ ಹಲವೆಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಮಹಾಜ್ಯೋತಿಯ ಬೆಳಕನ್ನು ಕಣ್ತುಂಬಿಕೊಂಡು ಮಹದೇಶ್ವರನ ಸ್ಮರಣೆ ಮಾಡಿದರು. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ದೀಪದಗಿರಿ ಒಡ್ಡಿನಲ್ಲಿ ಮಹಾ ಜ್ಯೋತಿ ಬೆಳಗಿಸುವುದು ಸಂಪ್ರದಾಯ. ಅದರಂತೆ ಈ ವರ್ಷವೂ ವಿಜೃಂಭಣೆಯಿಂದ ಭಕ್ತಿಭಾವಗಳಿಂದ ಮಹಾ ಜ್ಯೋತಿ ಬೆಳಗಿಸಲಾಯಿತು.
ಮೊದಲು ದೇವಾಲಯದ ಒಳ ಆವರಣದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಧಾರ್ಮಿಕ ವಿಧಿ ವಿದಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಒಳ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ದೇವಾಲಯದ ಆಗ್ನೇಯ ದಿಕ್ಕಿನಲ್ಲಿರುವ ದೀಪದ ಗಿರಿ ಒಡ್ಡಿಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಈ ವೇಳೆ ಉತ್ಸವ ಮೂರ್ತಿಗೆ ವಿವಿಧ ಪೂಜೆ ಹಾಗೂ ವಿಧಿ ವಿಧಾನಗಳನ್ನು ನೆರವೇರಿಸಿ ನಂತರ ಮಹಾ ಜ್ಯೋತಿ ಬೆಳಗಲಾಯಿತು. ನಂತರ ಉತ್ಸವ ಮೂರ್ತಿಯನ್ನು ದೊಡ್ಡಕೆರೆಯ ಬಳಿ ತಂದು ಅಲ್ಲಿ ತೆಪ್ಪೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರ ಜಯಘೋಷಗಳ ನಡುವೆ ತೆಪ್ಪೋತ್ಸವ ನಡೆಯಿತು.
ತೆಪ್ಪೋತ್ಸವದ ಅಂಗವಾಗಿ ಕೆರೆಗೆ ವಿದ್ಯುತ್ ದೀಪಾಲಂಕಾ ಮಾಡಲಾಗಿತ್ತು. ಬಣ್ಣ ಬಣ್ಣದ ಸೀರಿಯಲ್ ಸೆಟ್‌ಗಳಿಂದ ಕಂಗೊಳಿಸುತ್ತಿದ್ದ ದೊಡ್ಡಕೆರೆಯಲ್ಲಿ ತೆಪ್ಪೋತ್ಸವ ಸಂಭ್ರಮದಿಂದ ನೆರವೇರಿತು. ಸಿಡಿಮದ್ದು ಪ್ರದರ್ಶನ ನೆರೆದಿದ್ದ ಭಕ್ತರನ್ನು ಆಕರ್ಷಿಸಿತು.
ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಬೆಳಗಿನ ಜಾವ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ನಂತರ ಧರ್ಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಹಿರಿಯ ನಾಗರಿಕರಿಗೆ ನೇರ ದರ್ಶನ
ದಟ್ಟಣೆ ಹೆಚ್ಚಾಗಿದ್ದರಿಂದ ಭಕ್ತರು ಹಲವು ತಾಸುಗಳ ಕಾಲ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದಿಂದ 60 ವರ್ಷ ಮೇಲ್ಪಟ್ಟವರಿಗೆ ಉಚಿತ ನೇರ ದರ್ಶನ ಹಾಗೂ ಅಂಗವಿಕಲರಿಗೆ ನಾಲ್ಕನೇ ಗೇಟಿನ ಮುಖಾಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಕುಡಿಯುವ ನೀರು ಶೌಚಾಲಯ ನಿರಂತರ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಉರುಳು ಸೇವೆ ಪಂಜಿನ ಸೇವೆ ರುದ್ರಾಕ್ಷಿ ಮಂಟಪ ಬಸವ ವಾಹನ ಹುಲಿವಾಹನ ಬೆಳ್ಳಿ ರಥೋತ್ಸವ ಚಿನ್ನದ ರಥೋತ್ಸವ ಇನ್ನಿತರ ಸೇವೆಗಳಲ್ಲಿ ಪಾಲ್ಗೊಂಡ ಭಕ್ತರು ಮಾದಪ್ಪನಿಗೆ ಹರಕೆ ಸಲ್ಲಿಸಿ ಕಾಣಿಕೆ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.